ಲಿಂಗಸುಗೂರು: ರಾಷ್ಟ್ರೀಯ ಹೆದ್ದಾರಿ 150(ಎ) ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಶೀಘ್ರ ಪೂರ್ಣಗೊಳಿಸುವಂತೆ ಸಹಾಯಕ ಆಯುಕ್ತ ಅವಿನಾಶ ಸಿಂಧೆಗೆ ವ್ಯಾಪಾರಸ್ಥರು ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸಮಸ್ಯೆ
ಕಾಮಗಾರಿ ಆರಂಭಗೊಂಡು ಬಹುದಿನ ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿಯಿಂದ ರಸ್ತೆ ಅಕ್ಕಪಕ್ಕದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ತಗ್ಗುಗಳು ಉಂಟಾಗಿ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಅಂಗಡಿಗಳಿಗೆ ಗಿರಾಕಿ ಬಾರದೆ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತಿದೆ. ಕಾಮಗಾರಿ ಬೇಗ ಮುಗಿಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ.
ರಸ್ತೆ ಪಕ್ಕದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ವ್ಯಾಪಾರಸ್ಥರಾದ ಅಮರೇಶ, ಈರಣ್ಣ, ಅಲ್ಲಾಭಕ್ಷಿ, ವೆಂಕೋಬ, ಮಹೇಶ, ವೆಂಕಟರೆಡ್ಡಿ, ಮನು, ನಿಜಸುಖಿ, ಪ್ರಶಾಂತ, ವಿಜಯ, ರಾಜು, ಶಿವರಾಜ ಮೆಡಿಕಲ್ ಇತರರಿದ್ದರು.