More

    ಮಹಿಳಾ ವಿಶ್ವಕಪ್‌ನಲ್ಲಿ ಇಂದು ಭಾರತಕ್ಕೆ ಮಾಡು ಇಲ್ಲವೆ ಮಡಿ ಸವಾಲು; ದಕ್ಷಿಣ ಆಫ್ರಿಕಾ ವಿರುದ್ಧ ಕಡೇ ಲೀಗ್ ಪಂದ್ಯ

    ಕ್ರೈಸ್ಟ್‌ಚರ್ಚ್: ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡಕ್ಕೆ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾನುವಾರ ಮಾಡು ಇಲ್ಲವೆ ಮಡಿ ಸವಾಲು ಎದುರಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಗೆದ್ದರಷ್ಟೇ ಭಾರತ ತಂಡ ಸೆಮಿಫೈನಲ್ ಹಂತಕ್ಕೇರಲಿದೆ. ಕಳೆದ 2017ರ ಆವೃತ್ತಿಯ ರನ್ನರ್‌ಅಪ್ ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದು, ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ತಲಾ 3ರಲ್ಲಿ ಗೆಲುವು-ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1ರಲ್ಲಿ ಸೋತಿದ್ದು, ಈಗಾಗಲೆ 2ನೇ ಸ್ಥಾನದೊಂದಿಗೆ ಸೆಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದೆ.

    ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಭಾರತಕ್ಕೆ ಸೆಮೀಸ್ ರೇಸ್‌ನಲ್ಲಿ ಹಿನ್ನಡೆ ತಂದಿತ್ತು. ಇನ್ನೀಗ ಮಿಥಾಲಿ ಪಡೆ ಸೋತರೆ ಸೆಮೀಸ್ ರೇಸ್‌ನಿಂದ ಹೊರಬೀಳಲಿದೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದುಗೊಂಡರೂ, ಭಾರತಕ್ಕೆ ಸೆಮೀಸ್ ಸ್ಥಾನ ಒಲಿಯಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ.

    ಹರಿಣಗಳ ವಿರುದ್ಧ ಭಾರತದ ಒಟ್ಟಾರೆ ದಾಖಲೆ ಉತ್ತಮವಾಗಿದೆ. ಆದರೆ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ದಕ್ಷಿಣ ಆಫ್ರಿಕಾ ವಿರುದ್ಧ ಎಚ್ಚರಿಕೆಯ ಆಟ ಅಗತ್ಯವಿದೆ. ಭಾರತ ಉಪಾಂತ್ಯಕ್ಕೇರಲು ವಿಫಲವಾದರೆ, ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿಗೆ ಇದುವೇ ವೃತ್ತಿಜೀವನದ ಅಂತಿಮ ಪಂದ್ಯವಾಗಬಹುದು.

    ಇಂದು ಲೀಗ್ ಹಂತಕ್ಕೆ ತೆರೆ
    ಭಾರತ-ದಕ್ಷಿಣ ಆಫ್ರಿಕಾ ಪಂದ್ಯದೊಂದಿಗೆ ಟೂರ್ನಿಯ ಲೀಗ್ ಹಂತಕ್ಕೆ ತೆರೆ ಬೀಳಲಿದೆ. ಅದಕ್ಕೆ ಮುನ್ನ ಭಾನುವಾರವೇ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಇನ್ನೊಂದು ಲೀಗ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೆಮಿಫೈನಲ್‌ಗೇರಲು ಗೆಲುವಿನ ಅಗತ್ಯವಿದ್ದು, ಬಾಂಗ್ಲಾ ಸುಲಭ ತುತ್ತಾಗುವ ನಿರೀಕ್ಷೆ ಇದೆ. ಮಾರ್ಚ್ 30, 31ರಂದು ಸೆಮಿಫೈನಲ್ ಮತ್ತು ಏಪ್ರಿಲ್ 3ರಂದು ಫೈನಲ್ ನಡೆಯಲಿದೆ.

    ಮುಖಾಮುಖಿ: 27
    ಭಾರತ: 15
    ದಕ್ಷಿಣ ಆಫ್ರಿಕಾ: 11
    ರದ್ದು: 1
    ವಿಶ್ವಕಪ್‌ನಲ್ಲಿ: 4
    ಭಾರತ: 3
    ದಕ್ಷಿಣ ಆಫ್ರಿಕಾ: 1

    ಇಂದಿನ ಪಂದ್ಯಗಳು
    ಬಾಂಗ್ಲಾದೇಶ-ಇಂಗ್ಲೆಂಡ್
    ಆರಂಭ: ಬೆಳಗ್ಗೆ 3.30
    ಭಾರತ-ದಕ್ಷಿಣ ಆಫ್ರಿಕಾ
    ಆರಂಭ: ಬೆಳಗ್ಗೆ 6.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಕ್ಯಾಪ್ಟನ್ಸ್ ಚಾಲೆಂಜ್; ಐಪಿಎಲ್‌ನಲ್ಲಿ ನಾಯಕರ ಮುಂದಿವೆ ಹೊಸ ಸವಾಲುಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts