More

  ಆರ್ಥಿಕ ನಿರ್ವಹಣೆ ಅರಿವು ಪಡೆದಿರುವ ಮಹಿಳೆಯರು


  ಮೈಸೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳೆಯರು ಆರ್ಥಿಕ ನಿರ್ವಹಣೆ ಕುರಿತು ಅರಿವು ಪಡೆದಿದ್ದಾರೆ ಎಂದು ಹಿರೀಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸರಳಾ ಅಭಿಪ್ರಾಯಪಟ್ಟರು.


  ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಕಟ್ಟೆಮಳಲವಾಡಿ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ಮಹಿಳೆ ತನ್ನ ಕುಟುಂಬದ ಆರ್ಥಿಕ ನಿರ್ವಹಣೆಯ ಕುರಿತು ಗಮನ ನೀಡುತ್ತಿರಲಿಲ್ಲ. ಇದ್ದ ಸೌಲಭ್ಯವನ್ನು ಅಚ್ಚುಕಟ್ಟಾಗಿ ಬಳಸುವತ್ತ ಮಾತ್ರ ಗಮನಹರಿಸಿದ್ದಳು. ಆದರೆ ಧರ್ಮಸ್ಥಳ ಯೋಜನೆಯ ಸ್ವಸಹಾಯ ಸಂಘಗಳ ಮೂಲಕ ಹಣಕಾಸಿನ ಬಳಕೆ, ಉಳಿಕೆ ಮತ್ತು ನಿರ್ವಹಣೆಯನ್ನು ತಿಳಿದುಕೊಂಡಿದ್ದಾರೆ ಎಂದರು.


  ಸಂಸ್ಥೆಯ ಜಿಲ್ಲಾ ನಿರ್ದೇಶಕ ಮುರಳೀಧರ್ ಮಾತನಾಡಿ, 41 ವರ್ಷಗಳ ಹಿಂದೆ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ 11 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 47 ಸಾವಿರ ಸಂಘಗಳು, 41ಸಾವಿರ ಸದಸ್ಯರನ್ನು ಹೊಂದಿದ್ದು, ಸಂಘದಿಂದ ಮಹಿಳೆಯರ ಉಳಿತಾಯ 32 ಕೋಟಿ ರೂ.ಆಗಿದೆ. ಅಲ್ಲದೆ 1150 ಕೋಟಿ ರೂ. ಸಾಲ ನೀಡಲಾಗಿದೆ. ಬಡತನ ಶಾಪವೂ ಅಲ್ಲ, ಶಾಶ್ವತವೂ ಅಲ್ಲ. ಸಾಧನೆ ಮಾಡುವ ಇಚ್ಛಾಶಕ್ತಿ ಇದ್ದಲ್ಲಿ ಸ್ವಾವಲಂಬಿ ಬದುಕು ನಡೆಸಲು ಸಾಧ್ಯ ಎಂದರು.


  ಕಾರ್ಯಕ್ರಮವನ್ನು ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಉದ್ಘಾಟಿಸಿದರು. ವೇಣುಗೋಪಾಲ ವಿದ್ಯಾಸಂಸ್ಥೆ ಅಧ್ಯಕ್ಷ ವಿಶ್ವೇಶ್ವರಯ್ಯ, ಪಿಡಿಒ ಕೀರ್ತಿ, ಒಕ್ಕೂಟದ ಅಧ್ಯಕ್ಷರಾದ ಜಯಮಾಲಾ, ಸರಸ್ವತಿ, ವಲಯ ಮೇಲ್ವಿಚಾರಕಿ ಸವಿತಾ, ಸೇವಾ ಪ್ರತಿನಿಧಿಗಳಾದ ಭಾರತಿ ಸುರೇಶ್, ಸೌಮ್ಯಾ ಇತರರು ಇದ್ದರು. ಇದೇ ವೇಳೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts