More

    ಮಹಿಳೆಯರಿಗೂ ತೆರೆಯಲಿವೆ ಎನ್​ಡಿಎ ಬಾಗಿಲು: ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರ ಸರ್ಕಾರ

    ನವದೆಹಲಿ: ಸೈನಿಕ ಶಾಲೆಗಳ ಬಾಗಿಲುಗಳನ್ನು ಹೆಣ್ಣುಮಕ್ಕಳಿಗೆ ತೆರೆದ ಬೆನ್ನಲ್ಲೇ, ಭಾರತದ ಸೇನಾ ಅಧಿಕಾರಿಗಳ ತರಬೇತಿ ಸಂಸ್ಥೆಯಾದ ನ್ಯಾಷನಲ್​ ಡಿಫೆನ್ಸ್​ ಅಕಾಡೆಮಿ(ಎನ್​ಡಿಎ) ಸೇರಲೂ ಇನ್ನು ಮುಂದೆ ಮಹಿಳೆಯರಿಗೆ ಅವಕಾಶ ನೀಡುವ ಮಹತ್ವದ ನಿರ್ಧಾರ ಹೊರಬಿದ್ದಿದೆ.

    ಈ ಐತಿಹಾಸಿಕ ನಿರ್ಧಾರವನ್ನು ಭಾರತ ಸರ್ಕಾರ ಮಂಗಳವಾರ ಸಂಜೆ ತೆಗೆದುಕೊಂಡಿರುವುದಾಗಿ ಅಡಿಷನಲ್ ಸಾಲಿಸಿಟರ್​ ಜನರಲ್(ಎಎಸ್​ಜಿ) ಐಶ್ವರ್ಯ ಭಾಟಿ ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದರು. ಎನ್​ಡಿಎ ದಾಖಲಾತಿಯಲ್ಲಿ ಲೈಂಗಿಕ ಸಮಾನತೆ ಕೋರಿ ಕುಶ್​ ಕಾಲ್ರ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಸರ್ಕಾರಿ ವಕೀಲರು ನ್ಯಾಯಮೂರ್ತಿ ಸಂಜಯ್​ ಕಿಶನ್​ ಕೌಲ್​ ನೇತೃತ್ವದ ನ್ಯಾಯಪೀಠದ ಮುಂದೆ ಈ ಹೇಳಿಕೆ ನೀಡಿದರು.

    ಇದನ್ನೂ ಓದಿ: ಇಂದಿನಿಂದ ತಿರುಪತಿಯಲ್ಲಿ ಉಚಿತ ಸರ್ವದರ್ಶನ ಟೋಕನ್​​ ವಿತರಣೆ ಆರಂಭ

    ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ, ಎನ್​ಡಿಎಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂಬ ನಿರ್ಧಾರವನ್ನು ಮಂಗಳವಾರ ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಈ ವರ್ಷದ ಎನ್​ಡಿಎ ಪ್ರವೇಶಪ್ರಕ್ರಿಯೆಯನ್ನು ಯಥಾ ಸ್ಥಿತಿ ಅಂದರೆ ಪುರುಷರಿಗೆ ಮಾತ್ರ ಮುಂದುವರೆಸಲು ಕೋರ್ಟ್​ ಬಿಡಬೇಕು. ಏಕೆಂದರೆ ಮಹಿಳೆಯರಿಗೆ ದಾಖಲಾತಿ ನೀಡಲು ನೀತಿ, ಪ್ರಕಿಯೆ ಮತ್ತು ಮೂಲಸೌಕರ್ಯ ಸಂಬಂಧಿತ ಬದಲಾವಣೆಗಳನ್ನು ಮಾಡುವ ಅಗತ್ಯವಿದೆ ಎಂದು ಎಎಸ್​ಜಿ ಭಾಟಿ ಹೇಳಿದರು.

    ಈ ಮುನ್ನ ಸುಪ್ರೀಂ ಕೋರ್ಟ್​ ಸೆಪ್ಟೆಂಬರ್​​ 5 ಕ್ಕೆ ನಿಗದಿಯಾಗಿದ್ದ ಎನ್​ಡಿಎ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಿ ಎಂದು ಮಧ್ಯಂತರ ಆದೇಶ ಮಾಡಿತ್ತು. ಎನ್​ಡಿಎಗೆ ಪುರುಷರಿಗೆ ಮಾತ್ರ ಅವಕಾಶ ಎಂಬ ನಿಯಮ ಸಂವಿಧಾನದ ಸಮಾನತಾ ತತ್ವಕ್ಕೆ ವ್ಯತಿರಿಕ್ತವಾಗಿದ್ದು, ಅದನ್ನು ಪರಾಮರ್ಶಿಸಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿತ್ತು.

    ಇದನ್ನೂ ಓದಿ: ಸೆ.5 ರ ಎನ್​ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ: ಸುಪ್ರೀಂ ಕೋರ್ಟ್​ ಆದೇಶ

    ಸರ್ಕಾರದ ಇಂದಿನ ಹೇಳಿಕೆ ದಾಖಲಿಸಿದ ನ್ಯಾಯಮೂರ್ತಿ ಕೌಲ್​,​ ದೇಶದಲ್ಲಿ ಸಶಸ್ತ್ರ ಪಡೆಗಳು ತುಂಬಾ ಗೌರವ ಹೊಂದಿವೆ. ಆದರೆ, ಲೈಂಗಿಕ ಸಮಾನತೆ ಸಾಧಿಸಲು ಅವು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು. ರಕ್ಷಣಾ ಪಡೆಗಳಲ್ಲಿ ಮಹಿಳೆಯರು ವಹಿಸುತ್ತಿರುವ ಮಹತ್ವದ ಪಾತ್ರಕ್ಕೆ ಬೆಲೆ ನೀಡಲಾಗುತ್ತದೆ ಎಂದು ಆಶಿಸುತ್ತೇವೆ ಎಂದರು. ಈ ಬಗೆಗಿನ ಬೆಳವಣಿಗಗಳು ಮತ್ತು ಮುಂದಿನ ಯೋಜನೆಗಳ ಮಾಹಿತಿ ನೀಡಲು ಸರ್ಕಾರಕ್ಕೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್​ 22ಕ್ಕೆ ಮುಂದೂಡಿದರು.

    ಮತ್ತೊಂದೆಡೆ, ಯುಪಿಎಸ್​ಸಿ ನಡೆಸುವ ಎನ್​ಡಿಎ ಪ್ರವೇಶ ಪರೀಕ್ಷೆಗಳು ಸೆಪ್ಟೆಂಬರ್​ 5 ರಿಂದ ನವೆಂಬರ್​ 24 ಕ್ಕೆ ಮುಂದೂಡಲ್ಪಟ್ಟಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಕ್ಯಾಮ್ಸ್ ಶಶಿಕುಮಾರ್ ಹತ್ಯೆಗೆ ಸುಪಾರಿ: ಕಾಡಿನಲ್ಲಿ ಅಡಗಿಕುಳಿತಿದ್ದ ಆರೋಪಿ ಆರ್​​​ಟಿಐ ರವಿ!

    ಸೆ. 13 ರಿಂದ 24 ಮುಂಗಾರು ಅಧಿವೇಶನ; ಚರ್ಚೆಗೆ ಬರಲಿವೆ 18 ಹೊಸ ವಿಧೇಯಕಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts