ಸೆ.5 ರ ಎನ್​ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ: ಸುಪ್ರೀಂ ಕೋರ್ಟ್​ ಆದೇಶ

nda
Published on

ನವದೆಹಲಿ: ಇದೇ ಸೆಪ್ಟೆಂಬರ್​ 5 ರಂದು ನಡೆಯಲಿರುವ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ(ಎನ್​ಡಿಎ) ಪರೀಕ್ಷೆ ಬರೆಯಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಭಾರತದ ರಕ್ಷಣಾ ಪಡೆಗಳಿಗೆ ಸೇರಲು ವಿಶೇಷ ತರಬೇತಿ ಒದಗಿಸುವ ಎನ್​​ಡಿಎ ದಾಖಲಾತಿಯು, ಈ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರ್ಟ್​ ಕೈಗೊಳ್ಳಲಿರುವ ಅಂತಿಮ ನಿರ್ಣಯಕ್ಕೆ ಬದ್ಧವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಎನ್​ಡಿಎ ಸೇರಲು ಹಾಲಿ ಕೇವಲ ಪುರುಷರಿಗೆ ಅವಕಾಶವಿದೆ. ಸುಪ್ರೀಂ ಕೋರ್ಟ್​ ಮುಂದೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಈ ನಿಯಮವನ್ನು ಪ್ರಶ್ನಿಸಲಾಗಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಎನ್​ಡಿಎ ಸೇರಲು ಅವಕಾಶ ಒದಗಿಸಬೇಕೆಂದು ಕೋರಲಾಗಿದೆ. ಕೇವಲ ಲಿಂಗದ ಆಧಾರದ ಮೇಲೆ ಅರ್ಹ ಮತ್ತು ಆಸಕ್ತ ಯುವತಿಯರನ್ನು ಪ್ರತಿಷ್ಠಿತ ಎನ್​ಡಿಎ ಸೇರಲು ಅವಕಾಶ ನೀಡದಿರುವುದು ಭಾರತೀಯ ಸಂವಿಧಾನ ಖಾತ್ರಿಪಡಿಸುವ ಸಮಾನತೆಯ ಮೂಲ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿದೆ.

ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಯ ಪ್ರತಿಕ್ರಿಯೆ ಕೇಳಿದ್ದ ಕೋರ್ಟ್​ಗೆ ಇಂದು ಸೇನೆಯ ಪರ ವಕೀಲರು, ಕೇವಲ ಯುವಕರಿಗೆ ಪ್ರವೇಶ ತೆರೆದಿರುವುದು 'ಪಾಲಿಸಿ ಡಿಸಿಷನ್'​ ಆಗಿದೆ ಎಂದು ಹೇಳಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್​, ಈ ನಿರ್ಧಾರವು 'ಲಿಂಗ ತಾರತಮ್ಯ'ದಿಂದ ಕೂಡಿದೆ ಎಂದು ತರಾಟೆಗೆ ತೆಗೆದುಕೊಂಡಿತು.

"ಈ ಬಗೆಗಿನ ಮನೋಭಾವ ಬದಲಾಗಬೇಕಿದೆ. ಸೇನೆಯು ತಾನಾಗಿಯೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್​ ಆದೇಶ ಹೊರಡಿಸುವ ಸನ್ನಿವೇಶ ತರಬೇಡಿ" ಎಂದು ನ್ಯಾಯಮೂರ್ತಿ ಎಸ್​.ಕೆ.ಕೌಲ್​ ಮತ್ತು ನ್ಯಾಯಮೂರ್ತಿ ಹೃಷಿಕೇಶ್ ರಾಯ್​ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಮಧ್ಯಂತರ ಆದೇಶ ಹೊರಡಿಸಿ​, ಮಹಿಳಾ ಅಭ್ಯರ್ಥಿಗಳಿಗೆ ಸೆಪ್ಟೆಂಬರ್​ 5 ಕ್ಕೆ ನಿಗದಿಯಾಗಿರುವ ಎನ್​​ಡಿಎ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶ ನೀಡಬೇಕೆಂದು ಭಾರತೀಯ ಸೇನೆಗೆ ಸೂಚಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net