More

    12 ವರ್ಷದ ಬಳಿಕ ಸಿಕ್ಕಳು ತಾಯಿ!

    ಉಡುಪಿ: ಅಸ್ಸಾಂನ ದುಬ್ರಿ ಎಂಬ ಪ್ರದೇಶದಿಂದ ನಾಪತ್ತೆಯಾಗಿದ್ದ ಮಹಿಳೆ 12 ವರ್ಷದ ಬಳಿಕ ಉಡುಪಿಯಲ್ಲಿ ಪತ್ತೆಯಾಗಿ ಪುತ್ರನೊಂದಿಗೆ ಊರಿಗೆ ಮರಳಿದ್ದಾರೆ.

    ವಿಶ್ವಾಸದ ಮನೆ ಅನಾಥಾಶ್ರಮದ ಸಂಸ್ಥಾಪಕ ಸುನೀಲ್ ಜಾನ್ ಡಿಸೋಜ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದರು. 2009ರಲ್ಲಿ ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥರಾಗಿ ಅಲೆದಾಡುತ್ತಿದ್ದ ಮಹಿಳೆಯನ್ನು ರಕ್ಷಿಸಿ ವಿಶ್ವಾಸದ ಮನೆಗೆ ಕರೆ ತಂದಿದ್ದೆವು. ಆರಂಭದಲ್ಲಿ ಹೆಚ್ಚು ಮಾತನಾಡುವುದು, ಎಲ್ಲರಿಗೂ ಬಯ್ಯುವುದು ಮಾಡುತ್ತಿದ್ದರು. ಆರೈಕೆ, ಔಷಧೋಪಚಾರದ ನಂತರ ಒಂದು ತಿಂಗಳಲ್ಲಿ ಗುಣಮುಖರಾದರು. ಹೆಸರು ಕೇಳಿದಾಗ ಮಲ್ಲಕಾ ಬೇಗಂ/ಖತೂನ್ ಎನ್ನುತ್ತಿದ್ದರು. ವಿಳಾಸ ಸ್ಪಷ್ಟವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ನಾನು ಮುಸ್ಲಿಂ ಸಮುದಾಯದವಳು, ಐವರು ಮಕ್ಕಳಿದ್ದಾರೆ, ದುಬ್ರಿ ಹೋಗಬೇಕು ಎಂದು ಆಗಾಗ ಹೇಳುತ್ತಿದ್ದರು. ಬಂಗಾಳಿ ಭಾಷೆ ಮಾತನಾಡುತ್ತಿದ್ದರು. ಅವರು ಹೇಳಿದ ಎಲ್ಲ ವಿಳಾಸಗಳಿಗೆ 25ಕ್ಕೂ ಅಧಿಕ ಪತ್ರ ಬರೆದಿದ್ದವು, ಎಲ್ಲ ಪತ್ರಗಳೂ ವಾಪಸ್ ಬರುತ್ತಿದ್ದವು. ಊರಿಗೆ ಮರಳಬೇಕು ಎಂದು ದುಃಖಿಸುತ್ತಿದ್ದರು. ಕೆಲದಿನಗಳ ಹಿಂದೆ ಆಶ್ರಮದ ಕ್ಯಾಂಪ್‌ಗೆ ಭೇಟಿ ನೀಡಿದ್ದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಶರ್ಮಾ ಮತ್ತವರ ತಂಡ ಮಹಿಳೆಯನ್ನು ವಿಚಾರಿಸಿದರು. ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ದುಬ್ರಿ ಊರಿಗೆ ಸಂಪರ್ಕಿಸಿದರು. ಅಲ್ಲಿ ಬೇಗಂ ಅವರ ದೊಡ್ಡ ಮಗನ ಸಂಪರ್ಕ ಸಿಕ್ಕಿತು. ಮನೆಯವರೊಂದಿಗೆ ಬೇಗಂ ಫೋನ್‌ನಲ್ಲಿ ಮಾತನಾಡಿ ಸಂತೋಷಪಟ್ಟರು. ಗುರುವಾರ ಅವರ ಎರಡನೇ ಪುತ್ರ ಮತ್ತು ಕುಟುಂಬ ಸದಸ್ಯರು ತಾಯಿಯನ್ನು ಕರೆದೊಯ್ಯಲು ಉಡುಪಿಗೆ ಆಗಮಿಸಿದ್ದಾರೆ ಎಂದು ವಿವರಿಸಿದರು.
    ವಿಶ್ವಾಸದ ಮನೆ ಸಂಸ್ಥೆಯ ಉಪಾಧ್ಯಕ್ಷ ಮ್ಯಾಥ್ಯೂ ಕ್ಯಸ್ಲಿನೊ, ವಕೀಲ ದೇವಿನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಪುತ್ರನ ಕಂಡು ಕಣ್ಣೀರಿಟ್ಟ ತಾಯಿ
    ಆಶ್ರಮಕ್ಕೆ ಆಗಮಿಸಿದ ಎರಡನೇ ಪುತ್ರ ತಹಜುದ್ದೀನ್ ಅವರನ್ನು ಕಂಡು ದೂರದಿಂದ ಓಡಿ ಬಂದ ಬೇಗಂ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಪುತ್ರ ತಹಜುದ್ದೀನ್ ಸುದ್ದಿಗಾರರೊಂದಿಗೆ ಮಾತನಾಡಿ, 2007ರಲ್ಲಿ ತಂದೆ ತೀರಿಕೊಂಡ ನಂತರ ತಾಯಿ ಬೇಗಂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. 2008ರಲ್ಲಿ ನಾಪತ್ತೆಯಾದರು. ಎಲ್ಲ ಕಡೆ ಹುಡುಕಿದ್ದೆವು. ಇಂದಲ್ಲ ನಾಳೆ ಬರುತ್ತಾರೆ ಎಂಬ ಭರವಸೆ ನಮಗಿತ್ತು ಎಂದು ಗದ್ಗದಿತರಾದರು. ಅಮ್ಮ ಮತ್ತೆ ಸಿಕ್ಕಿರುವುದು ಮನೆಯವರು, ಇಡೀ ಊರಿನ ಜನತೆಗೆ ತುಂಬ ಸಂತೋಷವಾಗಿದೆ. ಇಷ್ಟು ವರ್ಷ ಸಾಕಿ, ಸಲಹಿದ ವಿಶ್ವಾಸದ ಮನೆ ಸಂಸ್ಥಾಪಕರು, ಸಿಬ್ಬಂದಿಗೆ ಋಣಿ ಎಂದು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts