More

    ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರೇ ಮೇಲುಗೈ

    ಚಾಮರಾಜನಗರ: ಇತ್ತೀಚೆಗೆ ಹೆಚ್ಚಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೆ. ಸೋಮಶೇಖರ್ ತಿಳಿಸಿದರು.


    ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಚಾಮರಾಜನಗರ ಜಿಲ್ಲಾಡಳಿತ, ಹನೂರು ತಾಲೂಕು ಕಾನೂನು ಸೇವಾ ಸಮಿತಿ ಕೊಳ್ಳೇಗಾಲ ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಂಗಮಂದಿರಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಭೂಮಿಯ ಮೇಲೆ ಮಾನವ ಸಂಕುಲದಲ್ಲಿ ಮೊದಲು ಅವತಾರ ಎತ್ತಿದವಳು ಮಹಿಳೆ. ಈ ದಿಸೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಹೆಮ್ಮೆಯ ವಿಚಾರ. ಹಾಗೆಯೇ ಸಮಾಜದಲ್ಲಿ ಸಮಾನತೆ ಕಲ್ಪಿಸುವ ಸಲುವಾಗಿ ಮಹಿಳೆಯರಿಗೆ ಸಂವಿಧಾನ ಹಕ್ಕನ್ನು ನೀಡಿದೆ. ಹಾಗೆಯೇ ಮೂಲಭೂತ ಕರ್ತವ್ಯವನ್ನು ಪಾಲಿಸಬೇಕಿದೆ. ಜತೆಗೆ ಪ್ರತಿಯೊಬ್ಬರೂ ಕಾನೂನಿನ ಅರಿವನ್ನು ಹೊಂದಬೇಕಿದೆ.

    ಜನ ಸಾಮಾನ್ಯರಿಗೆ ಕಾನೂನು ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಲಾಗಿದ್ದು, ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ದಿಸೆಯಲ್ಲಿ ಗಡಿ ಭಾಗದಿಂದ ಕೂಡಿರುವ ಮಹದೇಶ್ವರ ಬೆಟ್ಟದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.


    ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಾ.ನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಮಾತನಾಡಿ, ಮಹಾಶಿವರಾತ್ರಿ ಎಂದರೆ ನೆನಪಾಗುವುದು ಮ.ಬೆಟ್ಟ. ಹಾಗಾಗಿ, ಇಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ವಿಶೇಷವಾಗಿದೆ. ಈ ಜಿಲ್ಲೆಯಲ್ಲಿ ಮಹಿಳೆಯರ ಸಾಧನೆ ಮೇಲುಗೈಯಲ್ಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಲಸುಬ್ರಹ್ಮಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಆರ್.ಲೋಕಪ್ಪ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಜಯಶಂಕರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಶ್ರೀಧರ, ಎಂ.ಆನಂದ್, ಕೊಳ್ಳೇಗಾಲದ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಂದಿನಿ, ಅಪರ ಸಿವಿಲ್ ನ್ಯಾಯಾಧೀಶ ರಘು, ವಕೀಲರ ಸಂಘದ ಜಿಲ್ಲಾಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ, ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಡಿವೈಎಸ್ಪಿ ಧರ್ಮೇಂದ್ರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts