More

    ಕಾಲು ಕೆಜಿ ಚಿನ್ನ ಕೆರೆಗೆ ಎಸೆದ ಮಹಿಳೆ! ಹುಡುಕಲೂ ಆಗದೇ ಬಿಡಲೂ ಆಗದೇ ಕೈ ಕೈ ಹಿಸುಕಿಕೊಳ್ಳುತ್ತಿರುವ ಗ್ರಾಮಸ್ಥರು

    ರಾಮನಗರ: ಚಿನ್ನಕ್ಕೆ ಈಗ ಭಾರಿ ಬೆಲೆ, ಒಂದು ಗ್ರಾಂ ಚಿನ್ನ ಖರೀದಿಸಬೇಕಾದರೂ ನೂರು ಬಾರಿ ಯೋಚನೆ ಮಾಡಬೇಕು. ಆದರೆ ನನಗೆ ಚಿನ್ನವೇ ಬೇಡ

    ಎಂದು ಕೆರೆಗೆ ಎಸೆದು ಬಿಟ್ಟರೆ ಏನಾಗಬೇಡ? ಹೌದು, ಇಂಥದೊಂದು ವಿಚಿತ್ರ ಘಟನೆ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ. ಎಸೆದಿದ್ದು ಕೇವಲ 5-10 ಗ್ರಾಂ ಚಿನ್ನವಲ್ಲ, ಬರೋಬ್ಬರಿ 250 ಗ್ರಾಂ. ಆದರೆ ಕೆರೆಗೆ ಬಿದ್ದಿರುವ ಚಿನ್ನ ಹುಡುಕಲೂ ಆಗದೇ ಬಿಡಲೂ ಆಗದೇ ಗ್ರಾಮಸ್ಥರು ಕೈ ಕೈ ಹಿಸುಕುವಂತೆ ಆಗಿದೆ.

    ಆಗಿದ್ದೇನು?: ಮಾನಸಿಕವಾಗಿ ತೀವ್ರ ನೊಂದಿದ್ದ ಬಿಳಗುಂಬದ ಮಹಿಳೆಯೊಬ್ಬರು ತಮ್ಮ ಬಳಿಯಿದ್ದ ಸುಮಾರು 250 ಗ್ರಾಂ ಒಡವೆಯನ್ನು ಕೆರೆಗೆ ಎಸೆದಿರುವಾಗಿ ಹೇಳಿದ್ದಾರೆ. ಈ ವಿಚಾರ ಆರಂಭದಲ್ಲಿ ಯಾರಿಗೂ ಗೊತ್ತಿಲ್ಲ. ಕೊನೆಗೆ ಕುಟುಂಬ ಸದಸ್ಯರ ಮೂಲಕ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಎಸೆದ ಚಿನ್ನದ ಈಗಿನ ಮಾರುಕಟ್ಟೆ ಬೆಲೆ ಏನಿಲ್ಲವೆಂದರೂ 12-14 ಲಕ್ಷ ರೂ. ಇದ್ದು ಈ ಒಡವೆಯನ್ನು ಹುಡುಕಲೇಬೇಕು ಎನ್ನುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ. ಆದರೆ ಕೆರೆ ತುಂಬಿರುವುದು ಇವರ ನಿರ್ಧಾರಕ್ಕೆ ಅಡಿ ಮಾಡಿದೆ.

    ನೀರು ಖಾಲಿ ಮಾಡೋಣ: ಒಡವೇ ಹುಡುಕಲೇ ಬೇಕು ಎನ್ನುವ ಅಂತಿಮ ನಿರ್ಧಾರಕ್ಕೆ ಬಂದ ಗ್ರಾಮಸ್ಥರು ಗ್ರಾಮದ ಹಲಗೇಗೌಡರ ಕೆರೆಯಲ್ಲಿರುವ ನೀರು ಖಾಲಿ ಮಾಡಲು ಮುಂದಾಗಿದ್ದಾರೆ. ಗ್ರಾಮದ ಸಮಾಜ ಸೇವಕ ಬಿ.ಟಿ.ರಾಜೇಂದ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಗ್ರಾಮಸ್ಥರು ಪಂಪ್​ಗಳನ್ನು ಬಳಕೆ ಮಾಡಿಕೊಂಡು ನೀರು ಖಾಲಿ ಮಾಡುತ್ತಿರುವ ಫೋಟೋಗಳನ್ನು ಸೆರೆ ಹಿಡಿದುಕೊಂಡ ರಾಜೇಂದ್ರ ನೇರವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಕೆರೆ ನೀರು ಖಾಲಿ ಮಾಡದಂತೆ ಸೂಚಿಸಿದ್ದಾರೆ. ಈ ವೇಳೆ ನೀರನ್ನು ಹೇಗಾದರೂ ಸರಿ ನಾವು ತುಂಬಿಸಿಕೊಡುತ್ತೇವೆ ಎಂದು ಗ್ರಾಮಸ್ಥರು ಹೇಳಿದರೂ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಗ್ರಾಮಸ್ಥರು ಒಡವೆ ಹೊರತೆಗೆಯಲು ಸಾಧ್ಯವಾಗದೇ ಪರಿತಪಿಸುವಂತಾಗಿದೆ.

    ದೂರಿನಲ್ಲಿ ಏನಿದೆ?: ಮತ್ತೊಂದೆಡೆ ರಾಜೇಂದ್ರ ನೀಡಿರುವ ದೂರಿನಲ್ಲಿ, ಹೊಲ ಕಟಾವು ಮಾಡುವಾಗ ಒಡವೆ ಕಳೆದುಕೊಂಡಿದ್ದಾರೆ. ಈ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಆದರೆ, ಗಂಡ ಹೆಂಡತಿ ಜಗಳದ ಕಾರಣದಿಂದ ಒಡವೆಯನ್ನು ಕೆರೆಗೆ ಎಸೆದಿದ್ದೇನೆ ಎನ್ನುವ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದುಕೊಂಡಿರುವ ಸಾಧ್ಯತೆ: ಮಹಿಳೆಯ ಮಾಂಗಲ್ಯ ಸರವನ್ನು ಬೇರೊಬ್ಬರಿಗೆ ಕೊಟ್ಟು ಕಳೆದುಕೊಂಡಿರುವ ಸಾಧ್ಯತೆ ಇದೆ. ಇದರಿಂದ ತಮಗೆ ಆಗುವ ಅಪಮಾನ ತಪ್ಪಿಸಿಕೊಳ್ಳಲು ಈ ರೀತಿಯ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾಳೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

    ಮಾಂಗಲ್ಯ ಸರವನ್ನು ಕೆರೆಗೆ ಎಸೆದಿದ್ದೇನೆ ಎಂದು ಮಹಿಳೆ ನೀಡಿದ್ದ ಸುಳ್ಳು ಮಾಹಿತಿ ಮೇಲೆ ಗ್ರಾಮಕ್ಕೆ ಆಧಾರವಾದ ಕೆರೆ ನೀರು ಖಾಲಿ ಮಾಡಲು ಗ್ರಾಮದ ಕೆಲವರು ಮುಂದಾಗಿದ್ದರು. ಇವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಯಾವುದೇ ಕಾರಣಕ್ಕೂ ಕೆರೆ ನೀರು ಖಾಲಿ ಮಾಡಲು ಬಿಡುವುದಿಲ್ಲ.

    | ಬಿ.ಕೆ.ರಾಜೇಂದ್ರ ದೂರುದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts