

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸರ್ವಸ್ವವಾಗಿದ್ದು, ಅದಿಲ್ಲದಿದ್ದರೆ ಜೀವನವೇ ಇಲ್ಲವೇನೋ ಎಂಬ ಮನೋಭಾವ ಬೆಳೆಯುತ್ತಿದೆ. ಅನ್ನ-ಆಹಾರ ಸೇರಿ ಏನಿಲ್ಲದಿದ್ದರೂ ಜನ ಬದುಕುತ್ತಾರೆ. ಆದರೆ ಈ ಅಂಗೈ ಅಗಲದ ಮೊಬೈಲ್ ಇಲ್ಲದಿದ್ದರೆ ಬದುಕಲಾರರೇನೋ..ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಇಂದಿರಾನಗರದಿಂದ ವರದಿಯಾಗಿದೆ. ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದ ಮೊಬೈಲ್ ಎತ್ತಿಕೊಳ್ಳಲು ತನ್ನ ಪ್ರಾಣವನ್ನೂ ಲೆಕ್ಕಿಸದೆ ನಮ್ಮ ಮೆಟ್ರೊ ಹಳಿಗೆ ಧುಮುಕಿದ ಘಟನೆ ಇಂದಿರಾ ನಗರದಲ್ಲಿ ನಡೆದಿದೆ.
ಮಂಗಳವಾರ ಸಂಜೆ ಮೆಅ್ರೋ ರೈಲ್ಗಾಗಿ ಕಾಯುತ್ತಿದ್ದ ಮಹಿಳೆ ಹಳಿ ಅಂಚಿನಲ್ಲಿ ಮೊಬೈಲ್ ಸಂಭಾಷಣೆಯಲ್ಲಿ ನಿರತರಾಗಿದ್ದರು. ಆಗ ಆಕಸ್ಮಿಕವಾಗಿ ಆಕೆ ಕೈಯಿಂದ ಮೊಬೈಲ್ ಜಾರಿ ಹಳಿ ಮೇಲೆ ಬಿದ್ದಿದೆ. ಆಗ ಹಿಂದೆ ಮುಂದೆ ನೋಡದೆ ಹೈವೋಲ್ಟೇಜ್ ವಿದ್ಯುತ್ ಇರುತ್ತದೆ ಎಂಬುದನ್ನೂ ಮರೆತು
ತಕ್ಷಣವೇ ಮೊಬೈಲ್ ಎತ್ತಿಕೊಳ‍್ಳಲು ಆಕೆ ಹಳಿಗೆ ಧುಮುಕಿದ್ದಾಳೆ.
ಅದೃಷ್ಟವಶಾತ್ ಇದನ್ನು ಗಮನಿಸಿದ ಮೆಟ್ರೊ ಸಿಬ್ಬಂದಿ ಹಳಿಗಳ ಮೇಲಿನ ವಿದ್ಯುತ್ ಸಂಪರ್ಕವನ್ನು ಕ್ಷಣಾರ್ಧದಲ್ಲಿ ಕಡಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ತಕ್ಷಣವೇ ಆಕೆಯನ್ನು ಮೇಲಕ್ಕೆ ಎಳೆದುಕೊಂಡು ರಕ್ಷಿಸಿದ್ದಾರೆ. ಹೀಗಾಗಿ ಯಾವುದೇ ಅನಾಹುತವಾಗಲಿಲ್ಲ.
ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಮತ್ತೆ ರಿಸೆಟ್ ಮಾಡಲು ಕಾಲಾವಕಾಶ ತೆಗೆದುಕೊಂಡಿದೆ. ಇದರಿಂದ ಪರ್ಪಲ್ ಲೈನ್ ಮೆಟ್ರೊ ಸಂಚಾರದಲ್ಲಿ 15 ನಿಮಿಷ ವ್ಯತ್ಯಯವಾಗಿತ್ತು.