More

    ಊಟ, ಬಸ್ ಇಲ್ಲದೆ ಪರದಾಡಿದ ಮಹಿಳೆ

    ಬ್ಯಾಡಗಿ: ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿದ್ದ ಮಹಿಳೆಯೊಬ್ಬಳು ವಾಪಸ್ ತೆರಳಲು ಬಸ್ ಇಲ್ಲದೆ ಮೂರು ದಿನಗಳ ಕಾಲ ನಿಲ್ದಾಣದ ಕಟ್ಟೆಯಲ್ಲಿ ಪರದಾಡಿದ ಘಟನೆ ನಡೆದಿದೆ.

    ದಾವಣಗೆರೆ ಮೂಲದ ಮಹಿಳೆ ಶುಕ್ರವಾರ ಮೆಣಸಿನಕಾಯಿ ಖರೀದಿಸಲು ಇಲ್ಲಿನ ಮಾರುಕಟ್ಟೆಗೆ ಆಗಮಿಸಿದ್ದಳು. ತನ್ನೂರಿಗೆ ವಾಪಸ್ ತೆರಳಲು ಶುಕ್ರವಾರ, ಶನಿವಾರ ಸೇರಿದಂತೆ ಭಾನುವಾರ ಬೆಳಗ್ಗೆ 12 ಗಂಟೆಯವರೆಗೂ ನಿಲ್ದಾಣದಲ್ಲಿ ಕಾಲ ಕಳೆದು ತೀವ್ರ ಸಂಕಟ ಅನುಭವಿಸಿದ್ದಾಳೆ. ಮಹಿಳೆಗೆ ಕರ್ಫ್ಯೂ ಜಾರಿಯಿರುವ ವಿಷಯ ಗೊತ್ತಿಲ್ಲದೆ ಶುಕ್ರವಾರ ಬೆಳಗ್ಗೆ ಬ್ಯಾಡಗಿಗೆ ಬಂದಿದ್ದಾಳೆ. ಸಂಜೆ 6 ಗಂಟೆಯಿಂದ ಬಸ್, ಟೆಂಪೋ ಹಾಗೂ ಖಾಸಗಿ ವಾಹನಗಳ ಓಡಾಟ ನಿಂತು ಹೋಗಿದ್ದು, ಬಸ್​ಗಾಗಿ ಕಾಯ್ದು ಸುಸ್ತಾಗಿದ್ದಾಳೆ. ಶನಿವಾರ ಪೂರ್ಣ ಹೊತ್ತು ನಿಲ್ದಾಣದಲ್ಲಿ ಕುಳಿತುಕೊಂಡು ಬಸ್ ಕಾಯುತ್ತ ಕಾಲ ಕಳೆದಿದ್ದಾಳೆ. ನಿಲ್ದಾಣದಲ್ಲಿ ಮೆಣಸಿನಕಾಯಿ ಮೂಟೆ ಇಟ್ಟುಕೊಂಡು ಕುಳಿತ ದೃಶ್ಯ ಎಲ್ಲರ ಮನಕರಗುವಂತಿತ್ತು.

    ಅನ್ನ ನೀಡಿದ ಹಮಾಲಿ: ಮಹಿಳೆ ಬಸ್ ಇಲ್ಲದೆ ತಾನು ಖರೀದಿಸಿದ ಮೆಣಸಿನಕಾಯಿ ಚೀಲ ಹೊತ್ತು ಅಲ್ಲಲ್ಲಿ ತಿರುಗಾಡುತ್ತಿದ್ದಳು. ಇದನ್ನು ಗಮನಿಸಿದ ಮೆಣಸಿನಕಾಯಿ ಮಾರುಕಟ್ಟೆಯ ಹಮಾಲಿಯೊಬ್ಬ, ಉಪವಾಸ ಇರುವುದನ್ನು ತಿಳಿದು, ಮನೆಯಿಂದ ಅನ್ನ ತಂದು ಕೊಟ್ಟಿದ್ದಾನೆ. ಅದನ್ನು ತಿಂದ ಮಹಿಳೆ, ಶನಿವಾರ ಮಧ್ಯಾಹ್ನದಿಂದ ಊಟವಿಲ್ಲದೆ ಪರದಾಡಿದ್ದಾಳೆ. ಭಾನುವಾರ ಬೆಳಗಿನ ಜಾವ ಪತ್ರಿಕೆ ಹಂಚುವ ಪ್ರತಿನಿಧಿಗಳು ವಿಚಾರಿಸಿದಾಗ, ದುಃಖ ಹೇಳಿಕೊಂಡಳು. ಆಗ, ‘ನೀನು ಇವತ್ತು ರಾತ್ರಿವರೆಗೂ ಕೂತರೂ ಬಸ್ ಸಿಗಲ್ಲ. ಸುಮ್ಮನೆ ಚೀಲ ತಲೆಮೇಲೆ ಹೊತ್ತು ರಾಣೆಬೆನ್ನೂರು ಕಡೆಗೆ ಹೋಗು, ಅಲ್ಲಿಂದ ದಾವಣಗೆರೆಗೆ ತೆರಳಬಹುದು’ ಎಂದು ತಿಳಿಸಿದ್ದಾರೆ. ಬಳಿಕ 12 ಗಂಟೆಯವರೆಗೆ ಬಸ್​ಗಾಗಿ ಕಾಯ್ದ ಮಹಿಳೆ, ರಸ್ತೆ ಮೂಲಕ ನಡೆಯುತ್ತ ತೆರಳಿರುವುದಾಗಿ ಪ್ರತ್ಯಕ್ಷದರ್ಶಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಇಂತಹ ಘಟನೆಗಳಿಂದ ಸಾಕಷ್ಟು ಮಂದಿಗೆ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಮುಂದಾಗಿ ಅಂತಹವರಿಗೆ ನೆರವು ಒದಗಿಸಬೇಕು ಎಂದು ಅಭಿಪ್ರಾಯ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts