ಕುರುಗೋಡು: ಜೋಳ ಖರೀದಿಸಬೇಕೆಂದು ಒತ್ತಾಯಿಸಿ ಎಐಕೆಕೆಎಂಎಸ್ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಎಂ. ರೇಣುಕಾಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ ಮಾತನಾಡಿ, ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಸುವ ಪ್ರಕ್ರಿಯೆ ನಿಧಾನವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಈಗ ಖಾಲಿ ಚೀಲ ಕೊರತೆ ನೆಪದಲ್ಲಿ ಖರೀದಿ ಪ್ರಕ್ರಿಯೆ ನಿಲ್ಲಿಸಿರುವುದು ಖಂಡನೀಯ. ಅಲ್ಲದೆ ಈವರೆಗೆ ಸರಿಯಾಗಿ ಜೋಳ ಖರೀದಿಸಿಲ್ಲ.
ವಿಳಂಬದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಯಾವುದೇ ಸಬೂಬುಗಳನ್ನು ಹೇಳದೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ತ್ವರಿತವಾಗಿ ಜೋಳ ಖರೀದಿಸಬೇಕು. ವಿಳಂಬ ಮಾಡದೆ ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು. ರೈತರಾದ ಶಿವಕುಮಾರ್ ರೆಡ್ಡಿ, ಬೈಲೂರು ಶೇಖಣ್ಣ ಇತರರಿದ್ದರು.