More

    ರೈಲ್ವೇ ನಿಲ್ದಾಣದಲ್ಲಿ ಶವ ಪತ್ತೆ ಪ್ರಕರಣ | ಮೂವರ ಬಂಧನ; ಪೊಲೀಸರಿಗೆ ಹಂತಕರ ಸುಳಿವು ನೀಡಿದ್ದು ಡ್ರಮ್ ಮೇಲಿದ್ದ ಸ್ಟಿಕ್ಕರ್

    ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​ನೊಳಗೆ ಮಹಿಳೆಯ ಶವ ಪತ್ತೆಯಾಗುತ್ತಿದ್ದಂತೆ, ರೈಲ್ವೇ ಪೊಲೀಸರು ವ್ಯಾಪಕ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದರು. ಇದೀಗ ಡ್ರಮ್​ನಲ್ಲಿದ್ದ ಶವ ಯಾರದ್ದೆಂದು ಪತ್ತೆ ಮಾಡುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದು, ತಮನ್ನಾ ಎಂಬಾಕೆ ಕೊಲೆಯಾಗಿರುವ ಮಹಿಳೆ ಎಂಬುದು ಇದೀಗ ಬಹಿರಂಗಗೊಂಡಿದೆ.

    ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಮೇನ್ ಗೇಟ್ ಬಳಿಯೇ ಶವ ಇರಿಸಿ ಹೋಗಲಾಗಿತ್ತು. ಸತ್ತಿರುವ ಮಹಿಳೆಯ ವಯಸ್ಸು ಸುಮಾರು 30-35 ವರ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಶವ ಇದ್ದ ಡ್ರಮ್​ ಮೂವರು ಜೊತೆಯಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋದಲ್ಲಿ ತಂದಿಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿತ್ತು. ದುರ್ವಾಸನೆ ಬರುತ್ತಿರುವ ಬಗ್ಗೆ ರಾತ್ರಿ ಏಳೂವರೆ ಸುಮಾರಿಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಡ್ರಮ್​ನಲ್ಲಿ ಶವ ಪತ್ತೆಯಾಗಿದೆ ಎಂದು ರೈಲ್ವೆ ಎಸ್​ಪಿ ಸೌಮ್ಯಲತಾ ತಿಳಿಸಿದ್ದರು.

    ಇದನ್ನೂ ಓದಿ: ಬಾಗಲಕೋಟೆ | ಸಾಲದ ಹಣ ಹಿಂತಿರುಗಿಸದೆ ಸತಾಯಿಸಿದ ಸ್ನೇಹಿತರು; ಮನನೊಂದು ವಿಷ ಸೇವಿಸಿದ ಪಶುವೈದ್ಯ

    ಕೌಟುಂಬಿಕ ಕಲಹ ತಮನ್ನಾ ಕೊಲೆಗೆ ಕಾರಣವೆಂಬುದು ಆರೋಪಿಗಳ ಬಂಧನದಿಂದ ಬಹಿರಂಗಗೊಂಡಿದೆ. ತಮನ್ನಾಳ ಹತ್ಯೆಯಲ್ಲಿ ಎಂಟು ಜನರು ಭಾಗಿಯಾಗಿದ್ದು, ಕಮಾಲ್, ತನ್ವೀರ್, ಶಾಕೀಬ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಹತ್ಯೆಗೆ ಕಾರಣ?

    ತಮನ್ನಾ ಅಫ್ರೋಜ್ ಎಂಬ ವಿಶೇಷ ಚೇತನನನ್ನು ಮದುವೆಯಾಗಿದ್ದಳು. ಕೆಲ ಸಮಯದ ನಂತರ ಆತನಿಂದ ವಿಚ್ಛೇದನ ಪಡೆದು ಇಂತಿಕಾಬ್ ಎಂಬಾತನೊಂದಿಗೆ ವಿವಾಹವಾಗಿ, ಜಿಗಣಿ ಎಂಬಲ್ಲಿ ವಾಸವಾಗಿದ್ದಳು. ತಮನ್ನಾ ವಿಚ್ಛೇದನ ಪಡೆದುಕೊಂಡಿದ್ದ ಅಫ್ರೋಜ್, ಎರಡನೇ ಪತಿ ಇಂತಿಕಾಬ್​ನ ದೊಡ್ಡಪ್ಪನ ಮಗನಾಗಿದ್ದ.

    ತಮನ್ನಾ ವಿಚ್ಛೇದನ ಪಡೆದು ಮೊದಲ ಗಂಡನ ಸಹೋದರನನ್ನೇ ಮದುವೆ ಆಗಿರುವುದು ಕುಟುಂಬಸ್ಥರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಾಗಿ ಆರೋಪಿ ನವಾಬ್ ಎಂಬಾತ, ತಮನ್ನಾ ನಮ್ಮ ಇಡೀ ಕುಟುಂಬವನ್ನೇ ಹಾಳು ಮಾಡಿದ್ದಾಳೆ ಎಂದು ಸಿಟ್ಟಿನಲ್ಲಿ ಕೊಲೆ ಮಾಡಲು ಮುಂದಾಗಿದ್ದಾನೆ. ಹೀಗಾಗಿ ಹಂತಕರು ಬೆಂಗಳೂರು ತೋರಿಸುವ ನೆಪವೊಡ್ಡಿ ಇಂತಿಕಾಬ್ ಹಾಗೂ ತಮನ್ನಾಳನ್ನು ಜಿಗಣಿಯಿಂದ ಕರೆಯಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅಂತಿಮ ಹಂತದಲ್ಲಿ ಮದುವೆ ಬೇಡವೆಂದ ವರ; ಮದುವೆ ಗಂಡಿನ ನಿರ್ಧಾರ ತಿಳಿದರೆ ಆಚ್ಚರಿಯಾಗ್ತೀರಾ!

    ಸುಳಿವು ನೀಡಿದ್ದು ಸ್ಟಿಕ್ಕರ್!

    ಬಳಿಕ ಭಾನುವಾರ ಪಾರ್ಟಿ ಇದೆ ಎಂದು ಕರೆಯಿಸಿಕೊಂಡು ಕಲಾಸಿಪಾಳ್ಯದ ಮನೆಯಲ್ಲಿ ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಸಂಜೆ 6 ಗಂಟೆಯ ವೇಳೆಗೆ ಕೊಲೆ ಮಾಡಿದ್ದು, ರಾತ್ರಿ 11.45 ಕ್ಕೆ ರೈಲ್ವೇ ನಿಲ್ದಾಣದಲ್ಲಿ ಮೃತದೇಹವಿದ್ದ ಡ್ರಮ್ ಇಟ್ಟು ಬಂದಿದ್ದಾರೆ. ನವಾಬ್, ಜಮಾಲ್, ಮಜರ್, ಅಸ್ಸಾಬ್, ಸಬೂಲ್, ಕಮಾಲ್, ತನ್ವೀರ್, ಶಾಕೀಬ್ ಸೇರಿ ತಮನ್ನಾಳನ್ನು ಹತ್ಯೆ ಮಾಡಿದ್ದಾರೆ.

    ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಸುಳಿವು ನೀಡಿದ್ದು ಡ್ರಮ್​ನ ಮೇಲಿದ್ದ ಒಂದು ಸ್ಟಿಕ್ಟರ್. ಹೌದು, ಸ್ಟಿಕ್ಕರ್ ಬೆನ್ನಟ್ಟಿ ಹೋದ ಪೊಲೀಸರಿಗೆ ಸದ್ಯ ಮೂವರು ಹಂತಕರು ಸಿಕ್ಕಿ ಬಿದ್ದಿದ್ದಾರೆ. ಡ್ರಮ್​ನ ಮೇಲೆ ಆರೋಪಿ ಕಮಾಲ್ ಹೆಸರು ಮತ್ತು ವಿಳಾಸ ಪತ್ತೆಯಾಗಿದೆ. ಇದೇ ಸ್ಟಿಕ್ಕರ್ ಆಧಾರದ ಮೇಲೆ ಆರೋಪಿಗಳ ಬಂಧನವಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಇದನ್ನೂ ಓದಿ: ಕಪ್ಪು ಆಲೂಗಡ್ಡೆ ಬಗ್ಗೆ ಗೊತ್ತಿದೆಯಾ? ಇದರ ಬೆಲೆ ಕೆ.ಜಿ.ಗೆ 500 ರೂ.! ಇಲ್ಲಿದೆ ಸಂಪೂರ್ಣ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts