More

    ತಲೆನೋವಿನಿಂದ ಬಳಲುತ್ತಿದ್ದ ಯುವತಿಗೆ ಆಪರೇಷನ್​ ಮಾಡುವಾಗ ಮೆದುಳಿನಲ್ಲಿ ಸಿಕ್ಕ ಜೀವಿ ಕಂಡು ವೈದ್ಯರು ಶಾಕ್​​!

    ಬೀಜಿಂಗ್​: ಗಂಭೀರವಾದ ತಲೆನೋವಿನಿಂದ ಬಳಲುತ್ತಿದ್ದ ಚೀನಾದ 23 ವರ್ಷದ ಯುವತಿಯೊಬ್ಬಳು ಶಸ್ತ್ರಚಿಕಿತ್ಸೆಗೆ ಒಳಗಾದಾಗ ಆಕೆಯ ಮೆದುಳಿನಿಂದ 6 ಇಂಚಿನ ಜೀವಂತ ಹುಳುವನ್ನು ಹೊರತೆಗೆದಂತಹ ಆತಂಕಕಾರಿ ಘಟನೆ ನಡೆದಿದೆ.

    ರೋಗಿಯ ತಲೆಯಿಂದ ಹೊರತಗೆಯಲಾದ ಬಿಳಿ ಬಣ್ಣದ ಪರಾವಲಂಬಿ ಜೀವಿಯು ಬೌಲ್​ನಲ್ಲಿ ಅಡ್ಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗಿದ್ದು, ಕಚ್ಛಾ ಅಥವಾ ಅರ್ಧ ಬೇಯಿಸಿದ ವನ್ಯಜೀವಿ ಮಾಂಸಾಹಾರ ಹಾಗೂ ಆರೋಗ್ಯವಲ್ಲದ ಆಹಾರವನ್ನು ಸೇವಿಸಿದರೆ ಈ ರೀತಿಯ ಮೆದುಳು ಸೋಂಕು ಉಂಟಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದರು.

    ಕ್ಸಿಯಾವೋ ಯಿ ಎಂಬಾಕೆ ನಿರಂತರ ತಲೆನೋವಿನಿಂದ ಬಳಲಿ ಪೂರ್ವ ಚೀನಾದ ಜಿಯಾಂಗ್ಸೂ ಪ್ರಾಂತ್ಯದ ಸ್ಥಳೀಯ ಕ್ಲೀನಿಕ್ ಜನವರಿಯಲ್ಲಿ ದಾಖಲಾಗಿದ್ದರು.​ ಬಳಿಕ ಮೂರ್ಛೆರೋಗಕ್ಕೀಡಾದ ಆಕೆಯನ್ನು ನಂಜಿಂಗ್​ನಲ್ಲಿರುವ ಪ್ರಾಂತೀಯ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ತಕ್ಷಣ ಅಲ್ಲಿನ ವೈದ್ಯರು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದಾಗ, ಪರಾವಲಂಬಿಯ ಸೋಂಕಿಗೀಡಾಗಿರುವುದು ಪತ್ತೆಯಾಗಿತ್ತು.

    ಇದನ್ನೂ ಓದಿ: ಜನರು ಹೇಳಿದ್ರಂತೂ ಕೇಳಲ್ಲ, ನಮ್ಮನ್ನಾದ್ರೂ ನೋಡಿ ಕಲಿತೀರಾ ಅಂತಿವೆ ಈ ಕೋತಿಗಳು!

    ಈ ಬಗ್ಗೆ ಆಪರೇಷನ್​ ನಡೆಸಿದ ನಂಜಿಂಗ್​ ವಿಶ್ವವಿದ್ಯಾಲಯದ ಗುಲೌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ದೈ ವೀ ಮಾತನಾಡಿ, ಮೆದುಳಿನಲ್ಲಿ ತೆವಳುತ್ತಿದ್ದ 10 ಸೆಂಟಿಮೀಟರ್​ಗೂ ಉದ್ದದ ಜೀವಂತೆ ಹುಳು ಪತ್ತೆಯಾಯಿತು. ಅದು ನೋಡಲು ನೂಡಲ್​ ರೀತಿ, ಬಿಳಿಬಣ್ಣವನ್ನು ಹೊಂದಿತ್ತು. ಅದನ್ನು ಸಂಪೂರ್ಣವಾಗಿ ಹೊರತೆಗೆದು ಬೌಲ್​ ಒಂದರಲ್ಲಿ ಇಟ್ಟಾಗಲೂ ಅದು ಚಲಿಸುತ್ತಿತ್ತು ಎಂದು ತಿಳಿಸಿದ್ದಾರೆ.

    ವನ್ಯಜೀವಿಗಳ ಮಾಂಸವನ್ನು ಬೇಯಿಸದೇ ಅಥವಾ ಅರ್ಧ ಬೇಯಿಸಿ ತಿಂದರೆ ಈ ರೀತಿಯ ಸೋಂಕು ತಗುಲುತ್ತದೆ. ಹುಳು ಸಾಮಾನ್ಯವಾಗಿ ಕಚ್ಛಾ ಮಾಂಸದಿಂದ ಬರುತ್ತದೆ. ಹೆಚ್ಚಾಗಿ ಸಮುದ್ರ ಆಹಾರದಲ್ಲಿರುತ್ತವೆ. ಇಂತಹ ಆಹಾರವು ಹೆಚ್ಚಾಗಿ ಪರಾವಲಂಬಿಗಳನ್ನು ಹೊಂದಿರುತ್ತವೆ. ಈ ಹುಳುಗಳು ಕೆಲವೊಮ್ಮೆ ರಕ್ತದ ಮೂಲಕ ವ್ಯಕ್ತಿಯ ಮೆದುಳಿಗೆ ಸೇರಿ, ಅಲ್ಲಿಯೇ ಬೆಳೆಯುತ್ತವೆ ಎಂದು ಡಾ. ದೈ ವೀ ವಿವರಿಸಿದರು.

    23 ವರ್ಷದ ರೋಗಿ ತಾನೋರ್ವ ಮಾಂಸಾಹಾರ ಪ್ರಿಯೆ ಎಂದು ವೈದ್ಯರ ಮುಂದೆ ಒಪ್ಪಿಕೊಂಡಿದ್ದು, ಎರಡು ವರ್ಷಗಳ ಹಿಂದಿನ ಪ್ರವಾಸವೊಂದರಲ್ಲಿ ಕಪ್ಪೆಯ ಆಹಾರವನ್ನು ಸೇವಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ.

    ಬಹುಶಃ ಆಕೆಯ ಪ್ರವಾಸದ ವೇಳೆ ಭೇಟಿ ನೀಡಿದ ರೆಸ್ಟೋರೆಂಟ್​ನಲ್ಲಿ ಆರೋಗ್ಯಕರವಲ್ಲದ ಅಥವಾ ಯಾವುದೇ ನೈರ್ಮಲ್ಯದ ಗುಣಮಟ್ಟವಿಲ್ಲದೇ ತಯಾರಿಸಿದ ಆಹಾರವನ್ನು ಸೇವಿಸಿದ್ದರಿಂದ ಹೀಗಾಗಿರಬಹುದೆಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: VIDEO| ಇಡೀ ಜಿಂಕೆಯ ದೇಹವನ್ನೇ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

    ಸದ್ಯ ಯುವತಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಅದರಿಂದ ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೇ ಮುಂದುವರಿದಿದೆ.

    ಚೀನಾದ ದುರಾಭ್ಯಸವೆಂದರೆ ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನೆಲ್ಲಾ ತಿನ್ನುವುದು. ಇದೀಗ ಜಾಗತಿಕವಾಗಿ ಮೃತ್ಯುಕೂಪ ನಿರ್ಮಿಸಿ, ಸಾವಿನ ರಣಕೇಕೆ ಹಾಕುತ್ತಿರುವ ಕರೊನಾ ವೈರಸ್​ ಹುಟ್ಟಿದ್ದು ಕೂಡ ಇದೇ ಚೀನಾ ಪ್ರಾಣಿ ಮಾರುಕಟ್ಟೆಯಲ್ಲೇ. ಚೀನಾದ ಆಹಾರಾಭ್ಯಾಸ ಸೃಷ್ಟಿಸುತ್ತಿರುವ ತೊಡಕು ಒಂದೆರಡಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗೀಗ ಚೀನಾದಲ್ಲಿ ವನ್ಯಜೀವಿ ಮಾಂಸಾಹಾರವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್​)

    ಭಾರತ ಮೂಲದ ದಂಪತಿಯ ದುರಂತ ಅಂತ್ಯ: ಒಬ್ಬರು ಅಪಾರ್ಟ್​ಮೆಂಟ್​, ಮತ್ತೊಬ್ಬರು ನದಿಯಲ್ಲಿ ಶವವಾಗಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts