ಕೆನಡ: ಟೊರೊಂಟೊದಲ್ಲಿನ ಅಗಾ ಖಾನ್ ಮ್ಯೂಸಿಯಮ್ನಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರ ‘ಕಾಳಿ’ಯ ಪೋಸ್ಟರ್ನಲ್ಲಿ ದೇವಿಯ ಬಾಯಲ್ಲಿ ಸಿಗರೇಟ್ ಇರುವಂತೆ ಚಿತ್ರಿಸಿದ್ದರಿಂದ ಅದು ಇಂದು ಭಾರಿ ವಿವಾದಕ್ಕೆ ಒಳಗಾಗಿತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡದಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಧ್ಯಪ್ರವೇಶಿಸಿದೆ.
ಲೀನಾ ಮಣಿಮೇಕಲೈ ಎಂಬಾಕೆ ತನ್ನ ನಿರ್ದೇಶನದ ಸಾಕ್ಷ್ಯಚಿತ್ರ ಕಾಳಿಯ ಲಾಂಚ್ ಕುರಿತು ಇಂದು ಮಾಹಿತಿ ಹಂಚಿಕೊಂಡಿದ್ದು, ಅದರ ಪೋಸ್ಟರ್ ಭಾರಿ ವಿವಾದ ಸೃಷ್ಟಿಸಿತ್ತು. ದೇವಿಯ ಬಾಯಲ್ಲಿ ಸಿಗರೇಟ್ ಇರುವಂತೆ ಪೋಸ್ಟರ್ ಸೃಷ್ಟಿಸಿದ್ದಕ್ಕೆ ಹಿಂದುಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಈ ಚಿತ್ರ ಕೆನಡ ರಿದಮ್ಸ್ ಆಫ್ ಕೆನಡ ಭಾಗವಾಗಿ ಅಗಾ ಖಾನ್ ಮ್ಯೂಸಿಯಮ್ನಲ್ಲಿ ಪ್ರದರ್ಶನಗೊಳ್ಳಲಿರುವುದರಿಂದ ಅಲ್ಲಿರುವ ಹಿಂದುಗಳೂ ದನಿ ಎತ್ತಿದ್ದಾರೆ.
ಹೀಗಾಗಿ ಕೆನಡದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ. ಕಾಳಿ ಚಿತ್ರದಲ್ಲಿ ಹಿಂದು ದೇವತೆಯನ್ನು ಆಕ್ಷೇಪಾರ್ಹವಾಗಿ ತೋರಿಸಿರುವ ಕುರಿತು ಕೆನಡದಲ್ಲಿರುವ ಹಿಂದು ಸಮುದಾಯದವರಿಂದ ನಮಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಂಥ ಪ್ರಚೋದನಾತ್ಮಕ ಸಾಕ್ಷ್ಯಚಿತ್ರ ಹಿಂಪಡೆಯುವಂತೆ ಕಾರ್ಯಕ್ರಮ ಸಂಯೋಜಕರಿಗೆ ಹಾಗೂ ಕೆನಡದ ಆಡಳಿತದವರಿಗೆ ತಿಳಿಸಲಾಗಿದೆ ಎಂಬುದಾಗಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.