More

    ದೇಶಪಾಂಡೆ ಸ್ಪೀಕರ್ ಹುದ್ದೆ ಅಲಂಕರಿಸುವರೇ?

    • ಗಣಪತಿ ಭಟ್ ಹುಬ್ಬಳ್ಳಿ

    ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಸದನದ ಅತ್ಯಂತ ಹಿರಿಯ ಸದಸ್ಯ ಹಾಗೂ ಹಳಿಯಾಳ-ಜೊಯಿಡಾ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಹಂಗಾಮಿ ಸಭಾಧ್ಯಕ್ಷರಾಗಿ ಸದನದ ಕಾರ್ಯಕಲಾಪಗಳನ್ನು ಮುನ್ನಡೆಸಲಿದ್ದಾರೆ. ಈ ನಡುವೆ ದೇಶಪಾಂಡೆ ಅವರೇ ಸಭಾಧ್ಯಕ್ಷರಾಗಿ ಮುಂದುವರಿಯುವರೇ? ಎನ್ನುವ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ನಡೆಯುತ್ತಿದೆ.

    ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಸೇರಿದಂತೆ 8 ಸಂಪುಟ ದರ್ಜೆ ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ದೇಶಪಾಂಡೆ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ, ಅವಕಾಶ ಸಿಕ್ಕಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಸ್ವೀಕರ್ ಆಗಿ ಆಯ್ಕೆ ಮಾಡಬಹುದು ಎನ್ನುವ ಚರ್ಚೆ ನಡೆದಿದೆ. ಆದರೆ, ಹಿರಿಯ ಶಾಸಕರಾದ ಟಿ.ಬಿ. ಜಯಚಂದ್ರ, ಎಚ್. ಕೆ. ಪಾಟೀಲ ಹಾಗೂ ಆರ್.ವಿ. ದೇಶಪಾಂಡೆ ಹೆಸರು ಚಾಲ್ತಿಯಲ್ಲಿದ್ದು, ಅಂತಿಮವಾಗಿ ಯಾರು ಸ್ಪೀಕರ್ ಹುದ್ದೆ ಅಲಂಕರಿಸಲಿದ್ದಾರೆ ಎನ್ನುವುದು ಸೋಮವಾರದ ವಿಶೇಷ ಅಧಿವೇಶನದಲ್ಲಿ ನಿರ್ಧಾರವಾಗಲಿದೆ.

    16ನೇ ವಿಧಾನಸಭೆ ರಚನೆ ಹಾಗೂ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಿಂದ ಮೂರು ದಿನದ ವಿಶೇಷ ಅಧಿವೇಶನ ಕರೆದಿದ್ದಾರೆ. ಹಂಗಾಮಿ ಸ್ಪೀಕರ್ ಆಗಿ ಸದನದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ನೇಮಿಸಲಾಗಿದ್ದು, ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಅಂದೇ ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

    ಆರ್.ವಿ.ದೇಶಪಾಂಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ 9ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಸದನದಲ್ಲಿ ಅತ್ಯಂತ ಹಿರಿಯ ಶಾಸಕರೆಂಬ ಹಿರಿಮೆ ಹೊಂದಿದ್ದಾರೆ. ಅಲ್ಲದೆ, ಕಳೆದ ಸಾಲಿನಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಉತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.

    ದೇಶಪಾಂಡೆ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಖಾತೆ ನಿರ್ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಕೈ ಹೈಕಮಾಂಡ್​ನೊಂದಿಗೂ ಉತ್ತಮ ಒಡನಾಟ ಹೊಂದಿದ್ದು, ಅವರ ಮುತ್ಸದ್ದಿತನ, ವಿರೋಧ ಪಕ್ಷ ಸೇರಿ ಎಲ್ಲರೊಂದಿಗೆ ಹೊಂದಿರುವ ಉತ್ತಮ ಸಂಪರ್ಕದಿಂದ ಅವರನ್ನೇ ಸ್ಪೀಕರ್ ಹುದ್ದೆಗೆ ನೇಮಕ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ಸಿಗುತ್ತಿದ್ದಂತೆ ಸ್ಪೀಕರ್ ಹುದ್ದೆಗೆ ದೇಶಪಾಂಡೆ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ, ದೇಶಪಾಂಡೆ ಅವರಿಗೆ ಸ್ಪೀಕರ್ ಕುರ್ಚಿಯಲ್ಲಿ ಕೂರಲು ಮನಸ್ಸಿದ್ದಂತಿಲ್ಲ. ಏಕೆಂದರೆ ಎರಡು ದಿನದ ಹಿಂದೆ ಸ್ವತಃ ಅವರೇ ಈ ಕುರಿತು ಪ್ರತಿಕ್ರಿಯಿಸಿದ್ದು, ಸ್ಪೀಕರ್ ಹುದ್ದೆ ನಿಭಾಯಿಸುವಷ್ಟು ಅರ್ಹತೆ ನನಗಿಲ್ಲ ಎಂದಿದ್ದರು.

    ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಚಿವರ ಮೊದಲ ಪಟ್ಟಿಯಲ್ಲಿ ದೇಶಪಾಂಡೆ ಅವರನ್ನು ಸೇರ್ಪಡೆ ಮಾಡಿಲ್ಲ. ಅಲ್ಲದೆ, ಸೋಮವಾರದಿಂದ ನಡೆಯುವ ವಿಶೇಷ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಆರ್​ವಿಡಿ ಅವರನ್ನು ನೇಮಿಸಲಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ದೇಶಪಾಂಡೆ ಅವರನ್ನೇ ಸ್ಪೀಕರ್ ಹುದ್ದೆಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಸಚಿವರ ಪಟ್ಟಿಯಲ್ಲಿ ತನ್ನ ಹೆಸರಿಲ್ಲದ್ದಕ್ಕೆ ಶನಿವಾರ ಬೆಳಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ದೇಶಪಾಂಡೆ ಅವರು, ಸದನದ ಹಿರಿಯ ಶಾಸಕನಾದ ನನ್ನನ್ನು ಕೈ ಬಿಟ್ಟಿರುವುದು ಆಶ್ಚರ್ಯವಾಗಿದೆ. ನಾನು 8 ಮುಖ್ಯಮಂತ್ರಿ ಜತೆ ಕೆಲಸ ಮಾಡಿದ್ದೇನೆ. ಸ್ಪೀಕರ್ ಹುದ್ದೆ ಕುರಿತು ನನ್ನೊಂದಿಗೆ ಯಾರೂ ಚರ್ಚೆ ಮಾಡಿಲ್ಲ ಎನ್ನುವ ಮೂಲಕ ಸಂಪುಟ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕಾಂಗ್ರೆಸ್ ಹಾಗೂ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಆರ್.ವಿ.ದೇಶಪಾಂಡೆ ಅವರೇ ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಇದೀಗ ಬದಲಾದ ಸನ್ನಿವೇಶದಲ್ಲಿ ಒಂದು ವೇಳೆ ದೇಶಪಾಂಡೆ ಅವರು ಸ್ಪೀಕರ್ ಆಗಿ ಆಯ್ಕೆಯಾದರೆ ಮಂತ್ರಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಚರ್ಚೆ ಜೋರಾಗಿದೆ. ದೇಶಪಾಂಡೆ ಬಿಟ್ಟರೆ ಭಟ್ಕಳ ಕ್ಷೇತ್ರದಿಂದ ಮಂಕಾಳ ವೈದ್ಯ ಹಾಗೂ ಕಾರವಾರ ಕ್ಷೇತ್ರದಿಂದ ಸತೀಶ ಸೈಲ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಶಿರಸಿ ಕ್ಷೇತ್ರದಿಂದ ಭೀಮಣ್ಣ ನಾಯ್ಕ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಕುತೂಹಲಕಾರಿ ಚರ್ಚೆಯೂ ಜಿಲ್ಲೆಯಲ್ಲಿ ನಡೆದಿದೆ.

    ಬಿಜೆಪಿ ಅವಧಿಯಲ್ಲಿ ಕಾಗೇರಿ ಸ್ಪೀಕರ್

    ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಯ್ಕೆಯಾಗಿದ್ದರು. ಸಂವಿಧಾನ ವಿಷಯದ ಕುರಿತು ಚರ್ಚೆ ನಡೆಸುವ ಮೂಲಕ ವಿಧಾನ ಮಂಡಲವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದೀಗ ಮತ್ತೆ ಉತ್ತರ ಕನ್ನಡ ಜಿಲ್ಲೆಯವರಿಗೆ ಸ್ಪೀಕರ್ ಹುದ್ದೆ ನೀಡುವ ಬಗ್ಗೆ ಮಾತು ಕೇಳಿ ಬಂದಿದೆ. ಒಂದುವೇಳೆ ಆರ್.ವಿ.ದೇಶಪಾಂಡೆ ಅವರನ್ನು ಸ್ಪೀಕರ್ ಹುದ್ದೆಗೆ ನೇಮಿಸಿದ್ದೇ ಆದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಎರಡನೇ ಬಾರಿಗೆ ಗೌರವಾನ್ವಿತ ಹುದ್ದೆ ದೊರಕಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts