ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

randeep
Published on

ನವದೆಹಲಿ: ದಿನದಿಂದ ದಿನಕ್ಕೆ ಕರೊನಾ ಸೋಂಕಿನ ಮತ್ತೊಂದು ಬೃಹತ್​ ಅಲೆಯ ಸಾಧ್ಯತೆ ಕ್ಷೀಣಿಸುತ್ತಿದೆ. ಮೊದಲೆರಡು ಅಲೆಗಳ ಪ್ರಮಾಣದ ಮೂರನೇ ಅಲೆಯನ್ನು ಭಾರತದಲ್ಲಿ ನೋಡುತ್ತೇವೆ ಅನ್ನಿಸುತ್ತಿಲ್ಲ ಎಂದು ಏಮ್ಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಅವರು ಮಂಗಳವಾರ ಐಸಿಎಂಆರ್​ನ ಡೈರೆಕ್ಟರ್​ ಜನರಲ್ ಡಾ.ಬಲರಾಂ ಭಾರ್ಗವ ಬರೆದಿರುವ 'ಗೋಯಿಂಗ್​ ವೈರಲ್: ಮೇಕಿಂಗ್​ ಆಫ್ ಕೋವಾಕ್ಸಿನ್​ - ದ ಇನ್​ಸೈಡ್​ ಸ್ಟೋರಿ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ತೀವ್ರ ಮಟ್ಟದ ಸೋಂಕು ಮತ್ತು ಆಸ್ಪತ್ರೆಗೆ ಸೇರುವಂತಹ ಸ್ಥಿತಿಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯುತ್ತದೆ ಎಂದರು.

"ಲಸಿಕೆಯ ರೂಪದಲ್ಲಿ ನಮಗೆ ಉತ್ತಮ ರಕ್ಷಣೆ ಸಿಕ್ಕಿದೆ. ಹೆಚ್ಚು ಹೆಚ್ಚು ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆಯುವಂತೆ ಗಮನಹರಿಸಬೇಕು. ಸೋಂಕು ಪ್ರಕರಣದಲ್ಲಿ ಏರಿಕೆಯಿಲ್ಲದ್ದರಿಂದ ಸದ್ಯಕ್ಕೆ ಲಸಿಕೆಯ ಬೂಸ್ಟರ್​ ಡೋಸ್ ಅಥವಾ ಮೂರನೇ ಡೋಸ್​ನ ಅವಶ್ಯಕತೆಯೂ ಇಲ್ಲ" ಎಂದು ಗುಲೇರಿಯ ಹೇಳಿದ್ದಾರೆ.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ಮಾತನಾಡಿ, ಎಲ್ಲ ಅರ್ಹ ಜನಸಂಖ್ಯೆಗೆ ಮೊದಲನೇ ಮತ್ತು ಎರಡನೇ ಡೋಸ್​ ಕರೊನಾ ಲಸಿಕೆ ನೀಡುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ. "ಸಾಂಕ್ರಾಮಿಕ ರೋಗವು ಮುಗಿದಿಲ್ಲ ಮತ್ತು ಸದ್ಯಕ್ಕೆ ಅದು ಅಂತ್ಯಗೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ಹರಡುವ ರೋಗದ ರೂಪವನ್ನು ತಲುಪಬಹುದು... ಈಗ ಆರೋಗ್ಯ ಮೂಲಸೌಕರ್ಯದ ವಿಚಾರದಲ್ಲಿ ನಾವು ಉತ್ತಮವಾಗಿ ಸಜ್ಜಾಗಿದ್ದೇವೆ. ಆದರೆ, ಮೈಮರೆಯುವಂತಿಲ್ಲ, ಕೋವಿಡ್​ ಸೂಕ್ತ ನಡವಳಿಕೆಯನ್ನು ಮುಂದುವರೆಸಬೇಕು" ಎಂದು ಎಚ್ಚರಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net