More

    ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲೂ ನಟಿಸ್ತೀನಿ: ಪುಷ್ಪ ಗುಂಗಲ್ಲಿ ಶ್ರೀವಲ್ಲಿ ರಶ್ಮಿಕಾ ಜತೆ ಮಾತುಕತೆ

    | ಮಂಜು ಕೊಟಗುಣಸಿ

    ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೇಕರ್​ಗಳ ಸಂಪರ್ಕಕ್ಕೇ ದಕ್ಕುವುದಿಲ್ಲ ಎಂಬ ಮಾತಿದೆ. ಅವರನ್ನು ಸಂಪರ್ಕಿಸುವುದು ಹೇಗೆ? ಅವರು ಸಿಗ್ತಾರಾ? ಇತ್ತೀಚಿನ ದಿನಗಳ ಬೆಳವಣಿಗೆ ನೋಡಿದರೆ ಹೀಗೆ ಹಲವು ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಆದರೆ, ‘ಸಿನಿಮಾ ವಿಚಾರದಲ್ಲಿ ನಾನು ಯಾವಾಗಲೂ ಸಂಪರ್ಕಕ್ಕೆ ಸಿಗುತ್ತೇನೆ …’ ಎನ್ನುವ ಮೂಲಕ ಅಂಥ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದು, ಆ ಚಿತ್ರ ಕನ್ನಡದಲ್ಲಿಯೂ ಡಬ್ ಆಗಿ ಇಂದು (ಡಿ. 17) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಜತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ ರಶ್ಮಿಕಾ, ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

    ಒಳ್ಳೆಯ ಕಥೆ ಸಿಕ್ಕರೆ ನಟಿಸಲು ಸಿದ್ಧ: ‘ಸದ್ಯ ನನ್ನ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ‘ಪೊಗರು’ ಮುಗಿದ ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಏನೆನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಒಪ್ಪಿಕೊಂಡಿರುವ ಸಿನಿಮಾಗಳೆಲ್ಲವೂ ಕೊನೆಯ ಹಂತದಲ್ಲಿವೆ. ಇದೀಗ ಹೊಸ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. ಬೇರೆಬೇರೆ ಭಾಷೆಗಳಿಂದಲೂ ಕಥೆಗಳು ಬರುತ್ತಿವೆ. ಅದೇ ರೀತಿ ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲಿಯೂ ನಾನು ನಟಿಸಲು ಸಿದ್ಧ. ನಾನೇಕೆ ಕನ್ನಡದಿಂದ ಮರೆಯಾಗಲಿ?’ ಎಂಬುದು ಅವರ ಪ್ರಶ್ನೆ.

    ಭಾರತೀಯ ಸಿನಿಮಾ ನನ್ನನ್ನು ಸ್ವಾಗತಿಸಿದೆ…: ‘ಸಿನಿಮಾಕ್ಕೆ ಯಾವುದೇ ಗಡಿಯ ಹಂಗಿಲ್ಲ. ಪ್ರತಿಭೆ ಇದ್ದರೆ, ಎಲ್ಲ ಕಡೆಗೂ ಸಲ್ಲಬಹುದು. ಹಾಗಾಗಿ ಸ್ಯಾಂಡಲ್​ವುಡ್, ಟಾಲಿವುಡ್, ಕಾಲಿವುಡ್​ನಲ್ಲಿ ಸಿಕ್ಕಷ್ಟೇ ಪ್ರೀತಿ ಬಾಲಿವುಡ್​ನಲ್ಲೂ ಸಿಕ್ಕಿದೆ. ನಾನು ದಕ್ಷಿಣದವಳು ಎಂದು ನನ್ನನ್ನು ಭಿನ್ನವಾಗಿ ಯಾರೂ ನೋಡುವುದಿಲ್ಲ. ಈವರೆಗೂ ನಾನು ಕೆಲಸ ಮಾಡಿದ ಸಂಸ್ಥೆಗಳೆಲ್ಲವೂ ತುಂಬು ಪ್ರೀತಿಯನ್ನೇ ಕೊಟ್ಟು ಕಳಿಸಿವೆ. ಅಷ್ಟೇ ವಿಶೇಷ ವ್ಯಕ್ತಿಗಳ ಜತೆಗೂ ನಟಿಸುವ ಅವಕಾಶ ಸಿಗುತ್ತಿದೆ. ಮುಂದೆ ಅವಕಾಶ ಸಿಕ್ಕರೆ ಹಾಲಿವುಡ್ ಸಹ ಪ್ರಯತ್ನ ಮಾಡಿದರಾಯಿತು’ ಎನ್ನುತ್ತಾರೆ.

    ಶ್ರೀವಲ್ಲಿ ತಯಾರಿ ಬಲು ಕಷ್ಟ…: ‘ನಿರ್ದೇಶಕ ಸುಕುಮಾರ್ ಸಣ್ಣಸಣ್ಣ ವಿಚಾರವನ್ನೂ ತುಂಬ ಗಮನಿಸುತ್ತಾರೆ. ಚಿತ್ರಕ್ಕಾಗಿ ನನ್ನ ಲುಕ್ ಟೆಸ್ಟ್ ಸಲುವಾಗಿಯೇ ಸಾಕಷ್ಟು ಸರ್ಕಸ್ ಮಾಡಿದ್ದರು. ಈ ಚಿತ್ರದ ತೆಲುಗು ನನಗೆ ತುಂಬ ಹೊಸದು. ಶ್ರೀವಲ್ಲಿಯ ಮ್ಯಾನರಿಸಂ ವಿಭಿನ್ನ. ತುಂಬ ಚಾಲೆಂಜಿಂಗ್ ಮತ್ತು ಬೋಲ್ಡ್ ಅನಿಸುವ ಪಾತ್ರವಿದು. ಸ್ಥಳೀಯ ಕಥೆಯಾದರೂ, ಬೇರೊಂದು ಹಂತಕ್ಕೆ ಅದನ್ನು ಕೊಂಡೊಯ್ಯಬಹುದೆಂದು ಸುಕುಮಾರ್ ಇಲ್ಲಿ ತೋರಿಸಿದ್ದಾರೆ’ ಎಂದು ಹೇಳಿಕೊಂಡರು.

    ವಿವಾದದ ಕಿಡಿ ಹೊತ್ತಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts