More

    ಪ್ರಾಣಿಗಳಿಗೆ ಆಹಾರ ನೀಡುವವರಿಗೆ ದಂಡ, ಆಗುಂಬೆ ಘಾಟಿಯಲ್ಲಿ ವನ್ಯಜೀವಿ ವಿಭಾಗ ಕಾರ್ಯಾಚರಣೆ

    ಹೆಬ್ರಿ: ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿ ರಸ್ತೆಯಲ್ಲಿ ಕಾಡುಪ್ರಾಣಿಗಳಿಗೆ ಆಹಾರ ತಿನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ಕಾರ್ಯಾಚರಣೆಗೆ ಇಳಿದಿದೆ.

    ಶನಿವಾರ ಸೋಮೇಶ್ವರದಿಂದ ಆಗುಂಬೆವರೆಗಿನ 10 ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ಧಾಪುರ ವನ್ಯಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿ ನಿಂತು, ಪ್ರಾಣಿಗಳಿಗೆ ಆಹಾರ ತಿನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಿದ್ದಾರೆ. ಘಾಟಿ ಆರಂಭದ ಸೋಮೇಶ್ವರ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅರಿವು ಮೂಡಿಸಲು ರಸ್ತೆಯ ಅಲ್ಲಲ್ಲಿ ಜಾಗೃತಿ ಫಲಕಗಳನ್ನು ನೆಡಲಾಯಿತು.

    ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವನ್‌ದಾಸ್ ಕುಡ್ತಲ್ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

    ಆಗುಂಬೆ ಘಾಟಿ ರಸ್ತೆಯಲ್ಲಿ ಪ್ರಯಾಣಿಕರು ವನ್ಯಜೀವಿಗಳಿಗೆ ಆಹಾರ ನೀಡುತ್ತಿರುವ ಬಗ್ಗೆ ಹಾಗೂ ಇದರಿಂದ ಅಳಿವಿನಂಚಿನಲ್ಲಿರುವ ಸಿಂಗಳೀಕ ಸಹಿತ ಇತರ ಪ್ರಾಣಿಗಳಿಗೆ ಆಗುವ ಅನಾಹುತಗಳ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿ ಗಮನಿಸಿದ ಕುದುರೆಮುಖ ವನ್ಯಜೀವಿ ವಿಭಾಗ ಡಿಸಿಎಫ್ ರುದ್ರನ್ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

    ಮನುಷ್ಯ ಸೇವಿಸುವ ಆಹಾರ, ಜಂಕ್‌ಫುಡ್ ಪ್ರಾಣಿಗಳಿಗೆ ನೀಡುವುದರಿಂದ ಅದರ ಆರೋಗ್ಯದ ಮೇಲೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವುಗಳ ಆಹಾರ ಕ್ರಮ ಬದಲಾಗಿ, ಇದೇ ಆಹಾರಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯವೂ ಇದೆ. ರೋಗ ಹರಡುವಿಕೆಗೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆ ನಡೆಸಲಾಗುತ್ತಿದೆ.
    ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ, ಹೆಬ್ರಿ ವನ್ಯಜೀವಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts