More

    ಭತ್ತಕ್ಕೆ ವನ್ಯಪ್ರಾಣಿಗಳ ಸವಾಲು

    ಬೆಳ್ತಂಗಡಿ: ಇತ್ತೀಚೆಗೆ ಭತ್ತದ ಬೆಳೆಗೆ ರೈತರು ಹೆಚ್ಚಿನ ಒಲವು ತೋರಿಸುತ್ತಿದ್ದು, ಉತ್ತಮ ಬೆಳೆ ಬಂದರೂ ಕಟಾವು ಹಂತದಲ್ಲಿ ಕಾಡುಪ್ರಾಣಿ, ಪಕ್ಷಿಗಳ ಕಾಟ ಸವಾಲಾಗಿ ಪರಿಣಮಿಸುತ್ತಿದೆ.

    ಕುದುರೆಮುಖ ವನ್ಯಜೀವಿ ಅರಣ್ಯ ಪ್ರದೇಶ ಅಂಚಿನಲ್ಲಿರುವ ಮಿತ್ತಬಾಗಿಲು, ದಿಡುಪೆ, ಕುಕ್ಕಾವು ಪ್ರದೇಶಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಡುಪ್ರಾಣಿಗಳ ಹಾವಳಿ ರೈತರ ನಿದ್ದೆಗೆಡಿಸಿದೆ. ನಗರ ಪ್ರದೇಶಗಳಲ್ಲಿ ವಾಣಿಜ್ಯ ವ್ಯವಹಾರ ಮಾಡುತ್ತಿದ್ದ ಗ್ರಾಮೀಣ ಭಾಗದ ಹಲವು ಕುಟುಂಬಗಳು ಕರೊನಾ ಕಾರಣದಿಂದ ಮತ್ತೆ ಗ್ರಾಮೀಣ ಪ್ರದೇಶಗಳಿಗೆ ಹಿಂತಿರುಗಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಜತೆಗೆ ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭತ್ತ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ.

    ಇವೆಲ್ಲದರ ಮಧ್ಯೆ ಕೃಷಿಗೆ ನವಿಲು, ಹಂದಿ, ಮಂಗ, ಕಡವೆ, ಮೊಲ, ಜಿಂಕೆ, ಹೆಗ್ಗಣ, ಕಾಡಾನೆಗಳ ಕಾಟ ಜಾಸ್ತಿಯಾಗಿರುವ ಕಾರಣ ಮನೆಯವರು ಪಾಳಿಯಲ್ಲಿ ಗದ್ದೆ ಕಾಯುವ ಕೆಲಸ ಮಾಡುವಂತಾಗಿದೆ. ಪ್ರಾಣಿಗಳನ್ನು ಓಡಿಸದಿದ್ದಲ್ಲಿ ಅರ್ಧಕ್ಕರ್ಧ ಇವುಗಳ ಪಾಲಾಗುತ್ತದೆ.

    ಕಾಡಾನೆ ಹಾವಳಿ: ಮಿತ್ತಬಾಗಿಲು ಗ್ರಾಮದಲ್ಲಿ 140ರಷ್ಟು ಭತ್ತದ ಗದ್ದೆಗಳಿವೆ. ಆದರೆ ಕಜಕೆ, ಮಕ್ಕಿ, ಪರ್ಲ, ದೈಪಿತ್ತಿಲು, ಇಲ್ಯಾರಕಂಡ, ಬೈಲು ಬದನಾಜೆ, ಕಡ್ತಿಕುಮೇರು, ಮಲ್ಲ, ಕಡಮಗುಂಡಿ ಪ್ರದೇಶದಲ್ಲಿ ಭತ್ತ ಕೃಷಿಗೆ ಆನೆ ಕಾಟ ಹೆಚ್ಚಿದೆ. ಪ್ರಾಣಿಗಳಿಗೆ ಊರಿನಲ್ಲಿ ಸಿದ್ಧ ಆಹಾರ ಲಭ್ಯವಾಗುತ್ತಿದೆ. ಇದಕ್ಕೆ ಒಗ್ಗಿಕೊಂಡಿದ್ದರಿಂದ ಕೃಷಿ ಭೂಮಿಗೆ ಬಂದು ಉಪಟಳ ಮಾಡುತ್ತಿವೆ ಎನ್ನುತ್ತಾರೆ ಕೃಷಿ ತಜ್ಞರು.

    ಭತ್ತ ಬೆಳೆಗೆ ಪೂರಕ ವಾತಾವರಣ ಸವಾಲಾಗಿರುವ ನಡುವೆ ಕಾಡುಪ್ರಾಣಿಗಳು ಬಂದು ಬೆಳೆಗಳನ್ನು ನಾಶ ಮಾಡುತ್ತಿವೆ. ತೋಟಕ್ಕೆ ಏಕಕಾಲದಲ್ಲಿ 50 ಮಂಗಗಳು ಲಗ್ಗೆ ಇಡುತ್ತಿವೆ. ಪ್ರಾಣಿಗಳು ಗ್ರಾಮಾಂತರದಲ್ಲಿ ಆಹಾರದ ರುಚಿ ಹಿಡಿದು ಲಗ್ಗೆ ಇಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇವುಗಳ ನಿಯಂತ್ರಣದ ಸವಾಲು ಹೆಚ್ಚಿದೆ.
    -ಬಿ.ಕೆ.ದೇವರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭತ್ತ ತಳಿ ತಜ್ಞ

    ಭತ್ತ ಕೃಷಿಯನ್ನು ಆನೆ ಅಥವಾ ಇತರ ಕಾಡುಪ್ರಾಣಿಗಳು ತಿಂದು ನಾಶ ಮಾಡಿದರೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅವಕಾಶವಿದೆ. ಕೃಷಿ ರಕ್ಷಣೆಗೆ ಸೋಲಾರ್ ಬೇಲಿ ಅಳವಡಿಸಲು ಅನುಮತಿ ಇದ್ದು ಅರಣ್ಯ ಇಲಾಖೆಯಿಂದ ಶೇ.50 ಸಹಾಯಧನ ಲಭಿಸಲಿದೆ.
    -ತ್ಯಾಗರಾಜ್, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts