More

    ಷೇರು ಮಾರುಕಟ್ಟೆ ಶಿಖರ ಮುಟ್ಟಿದ್ದೇಕೆ?

    ಭಾರತೀಯ ಷೇರು ಮಾರು ಕಟ್ಟೆಯಲ್ಲಿ ಈಗ ಗೂಳಿಯು ಗುಟುರು ಹಾಕುತ್ತಿದೆ. ಷೇರು ಸೂಚ್ಯಂಕವು ದಾಖಲೆಯ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಎಫ್​ಪಿಐಗಳು. ಇವರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರೆ ಭಾರತದ ಡಿಐಐಗಳು ಮಾರಾಟ ಮಾಡಿ ಲಾಭ ಗಿಟ್ಟಿಸಿಕೊಳ್ಳುತ್ತಿವೆ.

    |ಜಗದೀಶ ಬುರ್ಲಬಡ್ಡಿ

    ವಿದೇಶಿ ಬಂಡವಾಳ ಹೂಡಿಕೆದಾರರು (ಫಾರೆನ್ ಪೋರ್ಟ್​ಫೋಲಿಯೋ ಇನ್ವೆಸ್ಟ್​ರ್ಸ್- ಎಫ್​ಪಿಐ) ಭಾರತದ ಷೇರು ಮಾರುಕಟ್ಟೆಯನ್ನು ಪ್ರತಿದಿನ ಹೊಸ ಶಿಖರಗಳಿಗೆ ಏರಿಸುತ್ತಿದ್ದಾರೆ. ಹೂಡಿಕೆದಾರರನ್ನು ಖರೀದಿ ಸಂಭ್ರಮಕ್ಕೆ ಕಳುಹಿಸುತ್ತಿದ್ದಾರೆ. ಎಫ್​ಪಿಐಗಳ ಪುನರಾಸಕ್ತಿಯು 2024ರ ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಷೇರು ಸೂಚ್ಯಂಕ ಏರಿಕೆಗೆ ಅಂದಾಜು 10 ಪ್ರತಿಶತದಷ್ಟು ಸಹಾಯ ಮಾಡಿದೆ. ಮಿತಿಮೀರಿದ ರೀತಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸದಂತೆ ಹೂಡಿಕೆದಾರರನ್ನು ವಿಶ್ಲೇಷಕರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

    ದೇಶೀಯ ಷೇರು ಮಾರುಕಟ್ಟೆಗಳು ಕೆಲ ದಿನಗಳಿಂದ ರ‍್ಯಾಲಿ ಮುಂದುವರಿಸಿವೆ. ಕಳೆದ ವಾರ 66,000 ಮಟ್ಟ ಮೀರಿ ಮುಕ್ತಾಯ ಕಂಡಿದ್ದ ಬಿಎಸ್​ಇ ಸೆನ್ಸೆಕ್ಸ್ ಈಗ 67,751.90ರ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಅಲ್ಲದೆ, ಎನ್​ಎಸ್​ಇ ನಿಫ್ಟಿ ಸೆನ್ಸೆಕ್ಸ್ 19,979.15ಕ್ಕೆ ಜಿಗಿದಿದೆ.

    ಎಫ್​ಪಿಐಗಳ ವಾಪಸಾತಿ, ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆ, ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಮತ್ತು ಭಾರತದಲ್ಲಿ ಹಣದುಬ್ಬರ ತಗ್ಗಿರುವುದು ಮಾರುಕಟ್ಟೆಯು ಏರಿಕೆ ಕಾಣಲು ಪ್ರಮುಖ ಕಾರಣಗಳಾಗಿವೆ.

    ಅಮೆರಿಕದಲ್ಲಿ ಗ್ರಾಹಕ ಹಣದುಬ್ಬರವು ನಿರೀಕ್ಷೆಗಿಂತ ಹೆಚ್ಚಾಗಿ ಶೇಕಡಾ 3ಕ್ಕೆ ಇಳಿಕೆ ಕಂಡು ಸನ್ನಿವೇಶವು ಬದಲಾಗಿರುವುದರಿಂದ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ಚಕ್ರವು ಅಂತ್ಯಗೊಳ್ಳುವ ಸ್ಥಿತಿ ಸಮೀಪಿಸಿದೆ ಎಂಬ ಭರವಸೆ ಮೂಡುತ್ತಿದೆ. ಇದರ ಪರಿಣಾಮವಾಗಿ, ಅಮೆರಿಕದ 10 ವರ್ಷ ಅವಧಿಯ ಬಾಂಡ್​ಗಳಿಂದ ಬರುವ ಲಾಭವು ಶೇಕಡಾ 5.1 ರಿಂದ ಶೇಕಡಾ 4.7ಕ್ಕೆ ಕುಸಿದಿದೆ. ಅಲ್ಲದೆ, ಡಾಲರ್ ಸೂಚ್ಯಂಕವು 103.57 ರಿಂದ 99.9ಕ್ಕೆ, ಅಂದರೆ ಅಂದಾಜು 4 ಪ್ರತಿಶತ ಕುಸಿದಿದೆ. ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ ಇದು ಸಕಾರಾತ್ಮಕ ಅಂಶವಾಗಿ ಪರಿಣಮಿಸಿದ್ದು, ಹೆಚ್ಚಿನ ಬಂಡವಾಳ ಹರಿವಿಗೆ ಸಾಕ್ಷಿಯಾಗುವ ಬೆಳವಣಿಗೆ ನಡೆಯುತ್ತಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

    Share Market

    ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ನಿವಾರಣೆಯಾಗುತ್ತಿದೆ ಎಂಬುದನ್ನು ಇತ್ತೀಚಿನ ಆರ್ಥಿಕ ದತ್ತಾಂಶಗಳು ಸೂಚಿಸಿರುವುದು ಜಾಗತಿಕ ಷೇರು ಮಾರುಕಟ್ಟೆಗಳ ಚೇತರಿಕೆಗೆ ಬೆಂಬಲವಾಗಿ ಪರಿಣಮಿಸಿದೆ. ಇಂಧನ, ಹಣಕಾಸು, ಲೋಹ ಮತ್ತು ಎಫ್​ಎಂಸಿಜಿ ವಲಯಗಳ ಉತ್ತಮ ಪ್ರದರ್ಶನದಿಂದಾಗಿ ಭಾರತದ ಷೇರು ಮಾರುಕಟ್ಟೆಯು ಬೆಳವಣಿಗೆಯನ್ನು ದಾಖಲಿಸಿದೆ. ಉತ್ಪಾದನಾ ಪಿಎಂಐ (ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) 57.8 ಅಂಕಗಳ ಮಟ್ಟವನ್ನು ತಲುಪುವುದರೊಂದಿಗೆ ಆರ್ಥಿಕ ಚಟುವಟಿಕೆಗಳು ಬಲವನ್ನು ಪಡೆಯುತ್ತಿವೆ. ಪಿಎಂಐ ಅಂಕಗಳು 50ಕ್ಕಿಂತ ಹೆಚ್ಚು ಇರುವುದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. ಈ ಸೂಚ್ಯಂಕವು ಉತ್ಪನ್ನಗಳಿಗೆ ನಿರಂತರ ಬೇಡಿಕೆಯನ್ನು ಸೂಚಿಸುತ್ತದೆ ಹಾಗೂ ಉತ್ಪಾದನೆ ನಿರೀಕ್ಷೆಗಳಲ್ಲಿ ವಿಶ್ವಾಸದ ಭಾವನೆಯನ್ನು ಉತ್ತೇಜಿಸುತ್ತದೆ.

    ಎಫ್​ಪಿಐಗಳ ಅಬ್ಬರದ ವಾಪಸಾತಿ ಏಕೆ?

    ಎಫ್​ಪಿಐಗಳು ಜುಲೈನಲ್ಲಿ ಇದುವರೆಗೆ 30,660 ಕೋಟಿ ರೂ.ಗಳನ್ನು ಭಾರತದ ಷೇರುಗಳಿಗೆ ಹೂಡಿಕೆ ಮಾಡುವ ಮೂಲಕ ಷೇರು ಮೌಲ್ಯವನ್ನು ಹೆಚ್ಚಿಸಿದ್ದಾರೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್​ಎಸ್​ಡಿಎಲ್) ಮಾಹಿತಿಯ ಪ್ರಕಾರ, ಏಪ್ರಿಲ್-ಜುಲೈ ಅವಧಿಯಲ್ಲಿ ಎಫ್​ಪಿಐಗಳು 1.07 ಲಕ್ಷ ಕೋಟಿ ರೂಪಾಯಿಗಳನ್ನು (12.5 ಬಿಲಿಯನ್ ಡಾಲರ್) ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಅವರು ಸ್ಥಿರ ಖರೀದಿದಾರರಾಗಿ ಮುಂದುವರಿದಿದ್ದಾರೆ. ಜುಲೈ ತಿಂಗಳಲ್ಲಿ ಪ್ರತಿದಿನ ಸರಾಸರಿ 2,000 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಷೇರುಗಳಲ್ಲಿ 47,148 ಕೋಟಿ ರೂ. ವಿದೇಶಿ ಬಂಡವಾಳ ಹರಿದುಬಂದಿದೆ. 2022ರ ಆಗಸ್ಟ್ ನಂತರದಲ್ಲಿ ಅತಿಹೆಚ್ಚು ಬಂಡವಾಳ ಒಳಹರಿವು ಇದಾಗಿದೆ. 2022ರ ಆಗಸ್ಟ್​ನಲ್ಲಿ 51,204 ಕೋಟಿ ರೂಪಾಯಿ ವಿದೇಶ ಬಂಡವಾಳವು ಷೇರು ಮಾರುಕಟ್ಟೆಗೆ ಹರಿದುಬಂದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕಳೆದೆರಡು ವರ್ಷಗಳಲ್ಲಿ ತನ್ನ ಬಡ್ಡಿ ದರವನ್ನು ಹೆಚ್ಚಿಸಿಕೊಂಡು ಬಂದಿದೆ. ಆದರೆ, ಇನ್ನು ಮುಂದೆ ಅದು ಬಡ್ಡಿ ದರ ಹೆಚ್ಚಿಸುವುದಿಲ್ಲ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಎಫ್​ಪಿಐಗಳು ಭಾರತೀಯ ಷೇರುಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ, ಚಿಲ್ಲರೆ ಹಣದುಬ್ಬರವು ಕಳೆದ ಜೂನ್​ನಲ್ಲಿ ಶೇಕಡಾ 4.81ಕ್ಕೆ ತಲುಪಿದೆ. ಇತರ ದೇಶಗಳಿಗೆ ಹೋಲಿಸಿದರೆ ಪ್ರಸ್ತುತವಾಗಿ ಭಾರತವು ಅತ್ಯುತ್ತಮ ಕಾರ್ಯಕ್ಷಮತೆಯ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ಹಣಕಾಸು ವರ್ಷದ ನಾಲ್ಕನೇ ತ್ರೖೆಮಾಸಿಕದಲ್ಲಿ ಕಾರ್ಪೆರೇಟ್ (ಬೃಹತ್ ಕಂಪನಿಗಳು) ವಲಯದ ವಹಿವಾಟು ಕೂಡ ಸುಧಾರಣೆ ಕಂಡಿದೆ. ಈ ಅಂಶಗಳಿಂದಾಗಿ ಭಾರತದಲ್ಲಿ ಎಫ್​ಪಿಐಗಳು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

     ಷೇರು ಮಾರುಕಟ್ಟೆ ಶಿಖರ ಮುಟ್ಟಿದ್ದೇಕೆ? 

    ದೇಶೀಯ ಸಂಸ್ಥೆಗಳೇಕೆ ಮಾರಾಟ ಮಾಡುತ್ತಿವೆ?

    ಎಫ್​ಪಿಐಗಳಿಗಿಂತ ಭಿನ್ನವಾಗಿ, ವಿಮೆ ಕಂಪನಿಯಾದ ಎಲ್​ಐಸಿ ಸೇರಿದಂತೆ ಸಾಕಷ್ಟು ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡೊಮೆಸ್ಟಿಕ್ ಇನ್​ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್- ಡಿಐಐ) ಹಾಗೂ ಮ್ಯುಚುವಲ್ ಫಂಡ್​ಗಳು ಈಗ ಅನೇಕ ದಿನಗಳಿಂದ ಷೇರುಗಳನ್ನು ಮಾರಾಟ ಮಾಡುತ್ತಿವೆ. 2022-23ನೇ ಹಣಕಾಸು ವರ್ಷದ ಎರಡನೇ ತ್ರೖೆಮಾಸಿಕ ಮತ್ತು ನಾಲ್ಕನೇ ತ್ರೖೆಮಾಸಿಕದಲ್ಲಿ ಮಾರುಕಟ್ಟೆಯಲ್ಲಿ ಸೂಚ್ಯಂಕವು ಕಡಿಮೆಯಾದ ಸಂದರ್ಭದಲ್ಲಿ ಈ ದೇಶೀಯ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಖರೀದಿ ಮಾಡಿದ್ದವು. 2022-23 ಹಣಕಾಸು ವರ್ಷದ ಕೊನೆಯ ತ್ರೖೆಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ಡಿಐಐಗಳು 83 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ಎಫ್​ಪಿಐಗಳು 50 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ‘ದೇಶೀಯ ಸಂಸ್ಥೆಗಳು ವಿರುದ್ಧವಾಗಿ ವರ್ತಿಸುತ್ತವೆ. ಎಫ್​ಪಿಐಗಳಂತಹ ದೊಡ್ಡ ನಿರ್ವಾಹಕರು ಷೇರುಗಳನ್ನು ಮಾರಾಟ ಮಾಡಿದಾಗ ಖರೀದಿಸುತ್ತವೆ. ಎಫ್​ಪಿಐಗಳು ಮತ್ತು ಇತರರು ಖರೀದಿಸಿದಾಗ ದೇಶೀಯ ಸಂಸ್ಥೆಗಳು ಮಾರಾಟ ಮಾಡುತ್ತವೆ. ಈ ತಂತ್ರದ ಮೂಲಕ ಇವು ಉತ್ತಮ ಲಾಭ ಗಳಿಸಿವೆ’ ಎಂದು ಫಂಡ್ ಮ್ಯಾನೇಜರ್ ಅಭಿಪ್ರಾಯಪಡುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ಹೂಡಿಕೆದಾರನಾಗಿರುವ ಎಲ್​ಐಸಿ, ಮಾರುಕಟ್ಟೆಯು ಹೊಸ ಶಿಖರಗಳಿಗೆ ಏರಿದಾಗ ಸಾಮಾನ್ಯವಾಗಿ ಷೇರುಗಳನ್ನು ಮಾರಾಟ ಮಾಡುತ್ತದೆ. ಕಡಿಮೆ ದರ ಇದ್ದಾಗ ಖರೀದಿ ಮಾಡುತ್ತದೆ. ಈ ಮೂಲಕ ಎಲ್​ಐಸಿ ನಿರಂತರವಾಗಿ ಲಾಭ ಗಳಿಸುತ್ತಿದೆ.

    ಚಿಲ್ಲರೆ ಹೂಡಿಕೆದಾರರು ಏಕೆ ಜಾಗರೂಕರಾಗಿರಬೇಕು?

    ಚಿಲ್ಲರೆ ಹೂಡಿಕೆದಾರರು ನೇರವಾಗಿ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರವೃತ್ತಿ ಹೊಂದಿದ್ದು, ಬೆಲೆಗಳು ಗರಿಷ್ಠ ಮಟ್ಟಕ್ಕೆ ಬಂದಾಗ ಆಕ್ರಮಣಕಾರಿಯಾಗಿ ಖರೀದಿಗಳನ್ನು ಮಾಡುವುದು ಸಾಮಾನ್ಯವಾಗಿದೆ. ಪ್ರಸಕ್ತ ಮಾರುಕಟ್ಟೆಯ ರ್ಯಾಲಿಯು ಮಿತಿಮೀರಿ ಹೋಗುವುದಕ್ಕೆ ಅವಕಾಶವಿಲ್ಲ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಜಾಗತಿಕವಾಗಿ ಆರ್ಥಿಕ ಬೆಳವಣಿಗೆಯು ಕಡಿಮೆಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಅಮೆರಿಕದ ಆರ್ಥಿಕತೆಯು ನಿಧಾನಗೊಳ್ಳುವ ಸಾಧ್ಯತೆಯಿದೆ. ಇದು ಭಾರತದ ರಫ್ತು ಮತ್ತು ಆ ಮೂಲಕ ಭಾರತದ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದಾಗಿದೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ರ್ಯಾಲಿಯು ಮೌಲ್ಯಮಾಪನಗಳನ್ನು ಹೆಚ್ಚಿಸಿದೆ. ಹೆಚ್ಚಿನ ಮೌಲ್ಯಮಾಪನಗಳಲ್ಲಿ ಅಪಾಯವು ಹೆಚ್ಚಾಗಿರುತ್ತದೆ. ಕೆಲವು ನಕಾರಾತ್ಮಕ ಬೆಳವಣಿಗೆಗಳು ಜರುಗಿದಾಗ ಷೇರು ಬೆಲೆಗಳಲ್ಲಿ ತೀಕ್ಷ್ಣವಾದ ತಿದ್ದುಪಡಿ ಆಗಬಹುದಾಗಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಜಾಗರೂಕರಾಗಿರಬೇಕು. ವಿದೇಶಿ ಆಟಗಾರರು ಅವರು ಪ್ರವೇಶಿಸುವುದಕ್ಕಿಂತ ವೇಗವಾಗಿ ಮಾರುಕಟ್ಟೆಯಿಂದ ನಿರ್ಗಮಿಸುತ್ತಾರೆ. ಚಿಲ್ಲರೆ ಹೂಡಿಕೆದಾರರನ್ನು ನಡುಗಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಡಿಡಿಐಗಳು ಹಣಕಾಸು ವರ್ಷ 2023ರ ಕೊನೆಯ ತ್ರೖೆಮಾಸಿಕದಲ್ಲಿ ಮಾಡಿದ ಹೂಡಿಕೆಗಳ ಮೇಲೆ ಉತ್ತಮ ಲಾಭ ಮಾಡಿಕೊಂಡಿದ್ದಾರೆ. ಅವರು ಹೆಚ್ಚಿನ ಮಟ್ಟದಲ್ಲಿ ಷೇರುಗಳನ್ನು ಸಂಗ್ರಹಿಸುತ್ತಿಲ್ಲ. ಚಿಲ್ಲರೆ ಹೂಡಿಕೆದಾರರು ಕೂಡ ಇದೇ ಹೂಡಿಕೆ ತಂತ್ರ ಅನುಸರಿಸಬೇಕು. ಆಗ ನಷ್ಟವಾಗುವುದಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.

    ಷೇರು ಮಾರುಕಟ್ಟೆ ಶಿಖರ ಮುಟ್ಟಿದ್ದೇಕೆ?

    ರೂಪಾಯಿ ಮೌಲ್ಯವರ್ಧನೆಗೆ ಕಾರಣ

    ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಹೆಚ್ಚಳದಿಂದಾಗಿ ಈ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ರೂಪಾಯಿ ಮೌಲ್ಯವು ಸ್ಥಿರತೆ ಕಾಪಾಡಿಕೊಳ್ಳಲು ಕಾರಣವಾಗಿದೆ. ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಪ್ರತಿ ಡಾಲರ್ ಬೆಲೆಯು 81.68 ರಿಂದ 82.90 ರೂಪಾಯಿ ನಡುವೆ ಇತ್ತು.

    ಷೇರು ಮಾರುಕಟ್ಟೆ ಶಿಖರ ಮುಟ್ಟಿದ್ದೇಕೆ?

    ಷೇರು ಮಾರುಕಟ್ಟೆ ಏರಿಕೆಗೆ ಕಾರಣಗಳು

    • ಜೂನ್ ತಿಂಗಳಲ್ಲಿ 1.60 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದ ಭಾರತದ ಬಲವಾದ ಜಿಎಸ್​ಟಿ ಸಂಗ್ರಹಣೆ.
    • ಜೂನ್​ನಲ್ಲಿ ಮುಂಗಾರು ಉತ್ತಮ ಚೇತರಿಕೆ ಮತ್ತು ಜುಲೈನಲ್ಲಿ ಸಾಮಾನ್ಯ ಮಳೆಯ ನಿರೀಕ್ಷೆ, ವಿಶ್ವದಾದ್ಯಂತ ನಿರೀಕ್ಷಿತ ಸ್ಥಿರ ಬಡ್ಡಿ ದರದ ಸನ್ನಿವೇಶ.
    • ಅಮೆರಿಕದಲ್ಲಿ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಮರುಮೌಲ್ಯಮಾಪನವು ಶೇ. 1.3 ರಿಂದ ಶೇ. 2ಕ್ಕೆ ಹೆಚ್ಚಳ.
    • ಅಮೆರಿಕದಲ್ಲಿ ಬೆಲೆ ಸೂಚ್ಯಂಕವು ಇಳಿಕೆಯಾಗಿ ಹಣದುಬ್ಬರವನ್ನು ಸರಾಗಗೊಳಿಸುವುದರಿಂದ ಹೂಡಿಕೆದಾರರಿಗೆ ಮತ್ತಷ್ಟು ಬಡ್ಡಿ ದರ ಹೆಚ್ಚಳವಾಗುವ ಭೀತಿ ನಿವಾರಣೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts