More

    ಭಾರತೀಯ ವಿದ್ಯಾರ್ಥಿನಿಯನ್ನು ಕೊಂದ ಪೊಲೀಸ್​ ಅಧಿಕಾರಿ ವಿರುದ್ಧ ಕೇಸು ದಾಖಲಿಸದ US ಕೋರ್ಟ್​!

    ನವದೆಹಲಿ: ಅತಿವೇಗದ ಪೊಲೀಸ್​ ವಾಹನ ಡಿಕ್ಕಿಯಾಗಿ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕಳೆದ ವರ್ಷ ಜನವರಿ 23ರಂದು ಅಮೆರಿಕದ ವಾಷಿಂಗ್ಟನ್​ ರಾಜ್ಯದ ಸಿಯಾಟಲ್​ನಲ್ಲಿ ಮೃತಪಟ್ಟಳು. ನ್ಯಾಯಾಲಯದ ವಿಚಾರಣೆಯಲ್ಲಿ ಭಾರತ ಮತ್ತು ಅಮೆರಿಕ ಸರ್ಕಾರದ ಹೇಳಿಕೆಗಳನ್ನು ಪಡೆಯಲಾಗಿತ್ತು. ವರ್ಷಗಟ್ಟಲೆ ನಡೆದ ಕಾನೂನು ಹೋರಾಟ ಕೊನೆಗೂ ವಿಫಲವಾಗಿದ್ದು, ಜಾಹ್ನವಿ ಮೇಲೆ ಕಾರು ಹರಿಸಿದ ಆರೋಪ ಹೊತ್ತಿದ್ದ ಆರೋಪಿ ಇದೀಗ ಆರೋಪಮುಕ್ತವಾಗಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾನೆ.

    ಗಂಟೆ 120 ಕಿ.ಮೀ ವೇಗದಲ್ಲಿ ಬಂದ ಜಾಹ್ನವಿಗೆ ಡಿಕ್ಕಿ ಹೊಡೆದ ಸಿಯಾಟಲ್​ ಪೊಲೀಸ್ ಅಧಿಕಾರಿ ಕೆವಿನ್​ ಡೇವ್​ ವಿರುದ್ಧ ಕ್ರಿಮಿನಲ್​ ಪ್ರಕರಣವನ್ನು ದಾಖಲಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ನ್ಯಾಯಾಲಯ ಹೇಳಿದ್ದು, ಭಾರತದ ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ ಮತ್ತು ಜಾಹ್ನವಿ ಅಕಾಲಿಕ ಸಾವಿಗೆ ಕೊನೆಗೂ ನ್ಯಾಯ ಸಿಗಲಿಲ್ಲ.

    ಅಂದಹಾಗೆ ಜಾಹ್ನವಿ ಆಂಧ್ರ ಪ್ರದೇಶ ಮೂಲದವಳು. ಸಿಯಾಟಲ್​ನ ನಾರ್ಥ್​ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು. 2023ರ ಜನವರಿ 23ರಂದು ರಸ್ತೆ ದಾಟುತ್ತಿದ್ದ ವೇಳೆ ಜಾಹ್ನವಿಗೆ ಪೊಲೀಸ್​ ವಾಹನ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಳು.

    ಬಾಡಿವೋರ್ನ್​ ಕ್ಯಾಮೆರಾದಲ್ಲಿ ಸೆರೆ
    ಘಟನೆಯ ಬಳಿಕ ಸಿಯಾಟಲ್​ ಪೊಲೀಸ್​ ಇಲಾಖೆ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ವಿದ್ಯಾರ್ಥಿನಿಗೆ ಕಾರು ಡಿಕ್ಕಿಯಾದ ಬಳಿಕ ಪೊಲೀಸ್​ ಸಿಬ್ಬಂದಿ ಆಕೆಯ ಸಾವನ್ನು ಅಪಹಾಸ್ಯ ಮಾಡಿರುವುದು ಬಹಿರಂಗವಾಗಿತ್ತು. ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಕಾರಿನಲ್ಲಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಆದರೆ, ಬಾಡಿ ವೋರ್ನ್​ ಕ್ಯಾಮೆರಾ ಇರುವುದನ್ನು ಗಮನಿಸದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆಕೆ ಸತ್ತು ಹೋದಳು ಎಂದು ಹೇಳಿ ಡೇನಿಯಲ್ ಔಡೆರೆರ್ ಗಹಗಹಿಸಿ ನಕ್ಕಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿತ್ತು. ಅಲ್ಲದೆ, ಜಾಹ್ನವಿ ಸಾಮಾನ್ಯ ವ್ಯಕ್ತಿ ಎಂದು ಹೇಳಿದ್ದರು. ಕೇವಲ ಒಂದು ಚೆಕ್​ ಬರೆದರೆ ಮುಗಿತು, ಅದು ಕೂಡ ಹನ್ನೊಂದು ಸಾವಿರ ಡಾಲರ್ ಎಂದು ಹೇಳಿ ನಕ್ಕಿದ್ದರು. ಏನೇ ಇರಲಿ ಆಕೆಗೆ ಕೇವಲ 26 ವರ್ಷ. ಆಕೆ ಸೀಮಿತ ಮೌಲ್ಯವನ್ನು ಹೊಂದಿದ್ದಳು ಎಂದು ಅಪಘಾತವನ್ನು ಅಪಹಾಸ್ಯ ಮಾಡಿರುವುದು ಬಾಡಿವೋರ್ನ್​ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ವಿಡಿಯೋ ವೈರಲ್​ ಆಗಿ ಭಾರೀ ಚರ್ಚೆಯ ಜತೆಗೆ ಟೀಕೆಗೂ ಗುರಿಯಾಗಿತ್ತು.

    ಕಿಂಗ್ ಕೌಂಟಿಯ ಪ್ರಾಸಿಕ್ಯೂಟಿಂಗ್ ಅಟಾರ್ನಿ ಲೀಸಾ ಮ್ಯಾನಿಯನ್ ಅವರು ಆಡೆರರ್ ಅಂದು ಆಡಿದ್ದ ಮಾತಿಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಆಡೆರರ್​ ಮಾತುಗಳು ಭಯಾನಕ ಎಂದು ಮ್ಯಾನಿಯನ್​ ಕರೆದರು.

    ಸೆಪ್ಟೆಂಬರ್ 2023ರಲ್ಲಿ ಗಸ್ತು ತಿರುಗುವಿಕೆ ಸ್ಥಾನದಿಂದ ಆಡೆರರ್​ನನ್ನು ಕೆಳಗಿಳಿಸಲಾಗಿದ್ದು, “ಕಾರ್ಯನಿರ್ವಹಣೆಯಿಲ್ಲದ ಸ್ಥಾನಕ್ಕೆ” ಮರುನಿಯೋಜಿಸಲಾಗಿದೆ. ಮುಂದಿನ ಮಾರ್ಚ್ 4 ರಂದು ಶಿಸ್ತಿನ ವಿಚಾರಣೆಯ ನಿಗದಿಪಡಿಸಲಾಗಿದೆ. ಆಡೆರರ್ ಜಾಹ್ನವಿ ಸಾವಿನ ಬಗ್ಗೆ ನಿರ್ದಯವಾಗಿ ಚರ್ಚಿಸಿರುವುದು ಸಿಯಾಟಲ್ ಪೊಲೀಸರೊಳಗಿನ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾಹ್ನವಿ ಸಾವಿಗೆ ನ್ಯಾಯ ದೊರಕಲಿಲ್ಲ ಎಂಬ ಅಸಮಾಧಾನವೂ ಇದೆ.

    ಜಾಹ್ನವಿ ಮೃತಪಟ್ಟ ದಿನ ಅವರ ಚಿಕ್ಕಪ್ಪ ಅಶೋಕ್​ ಕಂದುಲಾ ಮಾತನಾಡಿ, ನಮ್ಮ ಕುಟುಂಬಕ್ಕೆ ಹೇಳಲು ಏನೂ ಇಲ್ಲ. ಈ ಪುರುಷ ಪ್ರಧಾನ ಜಗತ್ತಿನಲ್ಲಿ ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳಿಗೆ ಏನಾದರೂ ಬೆಲೆ ಇದೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ. ಜೀವನ ಅಂದರೆ ಒಂದು ಜೀವನ ಅಷ್ಟೇ ಎಂದಿದ್ದರು. (ಏಜೆನ್ಸೀಸ್​)

    ದೆಹಲಿ ಮದ್ಯ ಹಗರಣ: ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 7 ನೇ ಬಾರಿಗೆ ಇಡಿ ಸಮನ್ಸ್‌

    ಇದುವರೆಗೂ ಕಂಡಿರದ ಅತಿದೊಡ್ಡ ಅನಕೊಂಡ ಪತ್ತೆ! ಕಾರಿನ ಟೈರಿನಷ್ಟು ದಪ್ಪ, ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts