More

    ಯಾರ ಪಾಲಾಗುತ್ತೆ ಮಧುಗಿರಿ? ; ರಂಗೇರಿದ ಗ್ರಾಪಂ ಚುನಾವಣೆ ಕಮಲಕ್ಕೆ ಖಾತೆ ತೆರೆಯುವ ಕನಸು

    ಮಧುಗಿರ: ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ದೊರಕಿಸಿಕೊಡುವ ಮೂಲಕ ಪಕ್ಷ ಸಧೃಡಗೊಳಿಸುವ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳು ಮುಳುಗಿವೆ.

    ತಾಲೂಕಿನ ಒಟ್ಟು 39 ಗ್ರಾಪಂಗಳಲ್ಲಿ 33 ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿವೆ. ಉಳಿದ 6 ಗ್ರಾಪಂಗಳು ಕೊರಟಗೆರೆ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಒಟ್ಟು 615 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 100443 ಪುರುಷ, 97471 ಮಹಿಳಾ, 4 ಇತರ ಮತದಾರರಿದ್ದಾರೆ. ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಪಂ 23 ಸದಸ್ಯ ಬಲ ಹೊಂದುವ ಮೂಲಕ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದಬ್ಬೇಘಟ್ಟ ಗ್ರಾಪಂ 13 ಸದಸ್ಯರನ್ನು ಹೊಂದಿರುವ ಅತೀ ಚಿಕ್ಕ ಪಂಚಾಯಿತಿಯಾಗಿದೆ.

    ಕಾಂಗ್ರೆಸ್‌ನಲ್ಲಿ ಡಿಮಾಂಡ್: ಕಳೆದ ಗ್ರಾಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33ರಲ್ಲಿ 26 ಪಂಚಾಯಿತಿಗಳನ್ನು ಮುಡಿಗೇರಿಸಿಕೊಂಡು ಗೆಲುವಿನ ಕೇಕೆ ಹಾಕಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲೂ ಅದೇ ಉತ್ಸಾಹದಲ್ಲಿ ಮುನ್ನುಗ್ಗುತ್ತಿದ್ದು, ನಿರೀಕ್ಷೆಯಂತೆ ಈ ಬಾರಿಯೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ಪರ್ಧೆಗೆ ಪೈಪೋಟಿ ಕಂಡು ಬರುತ್ತಿದೆ.

    ಮಾಜಿ ಶಾಸಕ ಕೆ.ಎನ್.ರಾಜಣ್ಣ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶತಾಯಗತಾಯ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಅವರಿಗೆ ರಾಜಕೀಯ ಶಕ್ತಿ ನೀಡಬೇಕೆಂದು ಪಣ ತೊಟ್ಟಿದ್ದಾರೆ. ಕಳೆದ ವಾರದಿಂದ ಮಧುಗಿರಿಯ ಸ್ವಗೃಹದಲ್ಲಿ ವಾಸ್ತವ್ಯ ಹೂಡಿ ಪ್ರತಿ ದಿನ ಒಂದೊಂದು ಹೋಬಳಿಯ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದು, ಪ್ರಮುಖ ಮುಖಂಡರಿಗೆ ಪಂಚಾಯಿತಿವಾರು ಜವಾಬ್ದಾರಿ ವಹಿಸಿದ್ದು, ಈ ಬಾರಿಯೂ ಹೆಚ್ಚು ಗ್ರಾಪಂಗಳನ್ನು ವಶಪಡಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

    ಖಾತೆ ತೆರೆಯುವ ನಿರೀಕ್ಷೆಯಲ್ಲಿ ಬಿಜೆಪಿ: ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಮೊದಲಿನಿಂದಲೂ ಇಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಬಿಜೆಪಿ ಅಚ್ಚರಿ ರೀತಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಸಾಧನೆ ಮಾಡಿತ್ತು.. ಕಳೆದ ಬಾರಿ ಗ್ರಾಪಂ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಆದರೆ, ನೆರೆಯ ಶಿರಾ ಉಪಸಮರದಲ್ಲಿ ಬಿಜೆಪಿ ಗೆಲುವು ತಾಲೂಕಿನ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿದೆ.

    ಗೊಂದಲದಲ್ಲಿ ಜೆಡಿಎಸ್: ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬಳಸಿಕೊಂಡು ನಂತರ ಮರೆತು ಬಿಡುತ್ತಾರೆ ಎಂಬುದು ಮೊದಲಿನಿಂದಲೂ ಜೆಡಿಎಸ್ ಕಾರ್ಯಕರ್ತರ ಆರೋಪ. ಆದರೆ ಬಿಜೆಪಿಯಲ್ಲಿರುವಷ್ಟು ಉತ್ಸಾಹ ಜೆಡಿಎಸ್‌ನಲ್ಲಿ ಕಂಡು ಬರುತ್ತಿಲ್ಲ. ಶಾಸಕರಿದ್ದರೂ ಪಕ್ಷದ ಕಾರ್ಯಕರ್ತರಲ್ಲಿ ಹುರುಪಿಲ್ಲ. ಹಾಗಾಗಿ, ಅತೃಪ್ತ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡುವಂತೆ ಮಾಡಿದೆ. ಕಳೆದ ಬಾರಿ 33 ಗ್ರಾಪಂಗಳಲ್ಲಿ ಕೇವಲ 7 ಗ್ರಾಪಂಗಳಲ್ಲಿ ಮಾತ್ರ ಅಧಿಕಾರ ಹಿಡಿದಿದ್ದ ಜೆಡಿಎಸ್ ಈ ಬಾರಿ ಯಾವ ಮ್ಯಾಜಿಕ್ ಮಾಡುತ್ತದೋ ಕಾದು ನೊಡಬೇಕಿದೆ.

    ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜಿಪಿ ಗೆಲುವು ಸಾಧಿಸಿರುವುದು ತಾಲೂಕಿನ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ರಾಜ್ಯದ ನಾಯಕರು ತಾಲೂಕಿಗೆ ಭೇಟಿ ನೀಡಿ ಗ್ರಾಮ ಸ್ವರಾಜ್ ಯಾತ್ರೆಯ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು, ಈ ಬಾರಿ ಹೆಚ್ಚು ಗ್ರಾಪಂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.
    ಪಿ.ಎಲ್.ನರಸಿಂಹಮೂರ್ತಿ ಅಧ್ಯಕ್ಷ, ಮಧುಗಿರಿ ತಾಲೂಕು ಬಿಜೆಪಿ ಮಂಡಲ

    ಕಾರ್ಯಕರ್ತರಿಗೆ ಅಧಿಕಾರ ನೀಡುವ ಗ್ರಾಪಂ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಕಳೆದೊಂದು ವಾರದಿಂದ ಹೋಬಳಿವಾರು ಸಭೆ ನಡೆಸಿ ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಸಮರ್ಥ ಅಭ್ಯರ್ಥಿಗಳನ್ನು ಬೆಂಬಲಿಸಿ ಹೆಚ್ಚು ಗ್ರಾಪಂಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.
    ಕೆ.ಎನ್.ರಾಜಣ್ಣ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts