More

    ಮುಂಬೈ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ಬಿಡುವವರಾರು?

    ಮುಂಬೈ: ಕಾನ್ಪುರ ಟೆಸ್ಟ್‌ನಲ್ಲಿ ಕೇವಲ 1 ವಿಕೆಟ್‌ನಿಂದ ಗೆಲುವು ಕೈತಪ್ಪಿ ನಿರಾಸೆ ಅನುಭವಿಸಿದ ಬಳಿಕ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವಿಗೆ ನಿರ್ಣಾಯಕವಾದ ಮುಂಬೈ ಟೆಸ್ಟ್‌ಗೆ ನಾಯಕ ವಿರಾಟ್ ಕೊಹ್ಲಿ ಸೇರ್ಪಡೆಯಿಂದ ಟೀಮ್ ಇಂಡಿಯಾದ ಬಲ ಹೆಚ್ಚಿದೆ. ಜತೆಗೆ ಕೊಹ್ಲಿ ಆಗಮನ ಟೀಮ್ ಮ್ಯಾನೇಜ್‌ಮೆಂಟ್ ತಲೆನೋವು ಕೂಡ ತಂದಿದೆ. ಯಾಕೆಂದರೆ ಕೊಹ್ಲಿಗೆ ಆಡುವ ಬಳಗದಲ್ಲಿ ಸ್ಥಾನ ಬಿಟ್ಟುಕೊಡುವವರು ಯಾರು ಎಂಬುದು ಗೊಂದಲ ಸೃಷ್ಟಿಸಿದೆ.

    ಕಳೆದ ಕೆಲ ಸಮಯದಿಂದ ರನ್‌ಬರ ಎದುರಿಸುತ್ತಿರುವ ಟೆಸ್ಟ್ ತಜ್ಞ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಲ್ಲೊಬ್ಬರು ಕೊಹ್ಲಿಗೆ ಸ್ಥಾನ ಬಿಟ್ಟುಕೊಡಬೇಕಾಗಬಹುದು ಎಂದು ಮೇಲುನೋಟಕ್ಕೆ ಕಾಣಿಸುತ್ತಿದೆ. ಆದರೆ ಮುಂಬರುವ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಈ ಇಬ್ಬರು ಅನುಭವಿ ಆಟಗಾರರಿಗೆ ಕೊಕ್ ನೀಡಲು ಕೋಚ್ ರಾಹುಲ್ ದ್ರಾವಿಡ್ ಮನಸ್ಸು ಮಾಡುವರೇ ಎಂಬ ಅನುಮಾನವಿದೆ.

    ಕಾನ್ಪುರ ಟೆಸ್ಟ್‌ನಲ್ಲಿ ಹಂಗಾಮಿ ನಾಯಕ ಮತ್ತು ಉಪನಾಯಕರಾಗಿದ್ದ ರಹಾನೆ ಮತ್ತು ಪೂಜಾರ, ಕಳೆದ ಡಬ್ಲ್ಯುಟಿಸಿ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಿಂದಲೂ ರನ್‌ಬರ ಎದುರಿಸುತ್ತಿದ್ದಾರೆ. ಇವರಿಬ್ಬರ ಸ್ಥಾನದ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿವೆ. ಕೊಹ್ಲಿ ಬಂದಾಗ ರಹಾನೆ ತಂಡದ ಉಪನಾಯಕರಾಗಲಿದ್ದು, ಅವರನ್ನು ಕೈಬಿಡುವುದು ಸುಲಭವಲ್ಲ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಅವರ ಸಾಮರ್ಥ್ಯದ ಬಗ್ಗೆ ದ್ರಾವಿಡ್‌ಗೆ ಸಾಕಷ್ಟು ನಂಬಿಕೆ ಇದೆ. ಹೀಗಾಗಿ ಇವರಿಬ್ಬರಲ್ಲಿ ಯಾರನ್ನು ಕೈಬಿಡಬಹುದು ಅಥವಾ ಅವರಿಬ್ಬರೂ ಉಳಿದರೆ ಬೇರೆ ಯಾರ ಸ್ಥಾನಕ್ಕೆ ಸಂಚಕಾರ ಬರಬಹುದು ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.

    ಮಯಾಂಕ್ ಕೈಬಿಡುವರೇ?
    ಮುಂಬೈ ಟೆಸ್ಟ್‌ಗೆ ರಹಾನೆ-ಪೂಜಾರ ಇಬ್ಬರನ್ನೂ ತಂಡದಲ್ಲಿ ಉಳಿಸಿಕೊಳ್ಳಬೇಕಾದರೆ ಇರುವ ಮತ್ತೊಂದು ಆಯ್ಕೆ ಆರಂಭಿಕ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಡುವುದು. ಕನ್ನಡಿಗ ಮಯಾಂಕ್ ಕೂಡ ಕಳೆದ ಕೆಲಸಮಯದಿಂದ ರನ್‌ಬರ ಎದುರಿಸುತ್ತಿದ್ದಾರೆ. ಕಾನ್ಪುರದಲ್ಲೂ ಅವರು 2 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 13 ಮತ್ತು 17 ರನ್ ಗಳಿಸಿದ್ದರು. ಇವರನ್ನು ಕೈಬಿಟ್ಟರೆ ಪೂಜಾರ ಅವರನ್ನು ಶುಭಮಾನ್ ಗಿಲ್ ಜತೆಗೆ ಆರಂಭಿಕರನ್ನಾಗಿ ಆಡಿಸಬೇಕಾಗುತ್ತದೆ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಮತ್ತು ಐಪಿಎಲ್‌ನಲ್ಲಿ ಇನಿಂಗ್ಸ್ ಆರಂಭಿಸಿದ ಅನುಭವ ಹೊಂದಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡ ಆರಂಭಿಕನ ಸ್ಥಾನಕ್ಕೆ ಪರಿಗಣಿಸಲ್ಪಡಬಹುದು.

    ಸಾಹ ಫಿಟ್ನೆಸ್ ಗೊಂದಲ
    ವೃದ್ಧಿಮಾನ್ ಸಾಹ ಕುತ್ತಿಗೆ ನೋವಿನಿಂದಾಗಿ ಕಾನ್ಪುರ ಟೆಸ್ಟ್‌ನಲ್ಲಿ 3ನೇ ದಿನದಾಟದ ಬಳಿಕ ಕೀಪಿಂಗ್ ಮಾಡಿರಲಿಲ್ಲ. ಆದರೆ ನೋವಿನ ನಡುವೆಯೂ 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದೀಗ 2ನೇ ಟೆಸ್ಟ್‌ಗೆ ಅವರ ಫಿಟ್ನೆಸ್ ಬಗ್ಗೆ ಗೊಂದಲವಿದ್ದು, ಪಂದ್ಯಕ್ಕೆ ಅವರ ಲಭ್ಯತೆ ಸ್ಪಷ್ಟವಾಗಿಲ್ಲ. ಪಂದ್ಯದ ವೇಳೆಗೆ ಫಿಸಿಯೋ ನೀಡುವ ಮಾಹಿತಿಯ ಆಧಾರದಲ್ಲಿ ನಾವು ಸಾಹರನ್ನು ಆಡಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ ತಿಳಿಸಿದ್ದಾರೆ. ಒಂದು ವೇಳೆ ಸಾಹ ಮುಂಬೈ ಟೆಸ್ಟ್‌ಗೆ ಅಲಭ್ಯರಾದರೆ, ಕೆಎಸ್ ಭರತ್ ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆಯಲಿದ್ದಾರೆ. ಕಾನ್ಪುರದಲ್ಲೂ ಭರತ್, ಸಾಹ ಗೈರಿನಲ್ಲಿ ಕೀಪಿಂಗ್ ನಿರ್ವಹಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ದಾಖಲೆ ಹೊಂದಿರುವ ಆಂಧ್ರದ ಭರತ್, ಆರಂಭಿಕರಾಗಿ ಆಡಬಲ್ಲರು. ಇದು ಆಡುವ 11ರ ಬಳಗದ ಮಧ್ಯಮ ಕ್ರಮಾಂಕದಲ್ಲಿ ಪೂಜಾರ-ರಹಾನೆ ಇಬ್ಬರನ್ನೂ ಉಳಿಸಿಕೊಳ್ಳಲು ನೆರವಾಗಲಿದೆ. ಆಗಲೂ ಮಯಾಂಕ್ ಸ್ಥಾನಕ್ಕೆ ಕಂಟಕ ಎದುರಾಗಲಿದೆ.

    ಕರುಣ್ ಮಾದರಿ ಶ್ರೇಯಸ್‌ಗೆ ಕೊಕ್?
    ಕಾನ್ಪುರದಲ್ಲಿ ಕೊಹ್ಲಿ ಗೈರಿನಲ್ಲಿ ಶ್ರೇಯಸ್ ಅಯ್ಯರ್ ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆದುಕೊಂಡಿದ್ದರು. ಇದನ್ನು ಅತ್ಯುತ್ತಮವಾಗಿ ಬಳಸಿಕೊಂಡ ಶ್ರೇಯಸ್ ಶತಕ ಮತ್ತು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೂ ಮುಂಬೈ ಟೆಸ್ಟ್‌ಗೆ ಅವರ ಸ್ಥಾನ ಭದ್ರವೆನಿಸಿಲ್ಲ. ಈ ಹಿಂದೆ ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರೂ, ಮುಂದಿನ ಬಾಂಗ್ಲಾ ವಿರುದ್ಧ ಟೆಸ್ಟ್‌ಗೆ ಅನುಭವಿ ರಹಾನೆ ಬಂದಾಗ ಸ್ಥಾನ ಕಳೆದುಕೊಂಡಿದ್ದರು. ಅದೇ ಪರಿಸ್ಥಿತಿ ಶ್ರೇಯಸ್‌ಗೂ ಎದುರಾಗುವುದನ್ನು ತಳ್ಳಿಹಾಕುವಂತಿಲ್ಲ. ಆದರೆ ಇದು ಅತ್ಯಂತ ಕ್ಷೀಣ ಸಾಧ್ಯತೆ.

    ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts