More

    ರಾಜ್ಯದ ಜೀವ ನದಿಗಳ, ಉಪನದಿಗಳ ಕಾಯಕಲ್ಪ ಯಾವಾಗ?

    ಬೆಂಗಳೂರು:ರಾಜ್ಯದ ಜೀವ ನದಿಗಳು, ಉಪ ನದಿಗಳು ಹಾಗೂ ಸಾವಿರಾರು ಕೆರೆಗಳ ನೀರೆಲ್ಲಾ ಮಲಿನಗೊಂಡಿವೆ. ಚಾಮರಾಜನಗರದಿಂದ ಹಿಡಿದು ಬೀದರ್‌ವರೆಗೆ ಹರಿಯುತ್ತಿರುವ ಎಲ್ಲ ನದಿಗಳು ಕಲ್ಮಷದ ಬಲೆಯೊಳಗೆ ಸಿಲುಕಿದ್ದು, ಕುಡಿಯುವುದು ಮಾತ್ರವಲ್ಲ ಈ ನದಿಗಳಲ್ಲಿ ಸ್ನಾನ ಮಾಡಿದರೆ ಸಾಂಕ್ರಾಮಿಕ ರೋಗಗಳು ಬರಲಿವೆ. ಕೃಷಿಗೆ ಬಳಸಲು ಸಾಧ್ಯವಾಗದಂಥ ಹಂತಕ್ಕೆ ಈ ನೀರು ತಲುಪಿರುವುದು ಕಳವಳ ವ್ಯಕ್ತವಾಗಿದೆ.ಜೀವಸೆಲೆಯಾದ ನದಿಗಳ ಮತ್ತು ಉಪನದಿಗಳಿಂದ ಸಾವಿರಾರು ಕೆರೆಗಳು ಸಹ ಕಲುಷಿತಗೊಂಡಿವೆ.

    ಸಾಮಾನ್ಯವಾಗಿ ಕುಡಿಯುವ ನೀರು ‘ಎ’ ಗ್ರೇಡ್‌ನಲ್ಲಿ ಇರಬೇಕು. ಆದರೆ, ಬಹುತೇಕ ನದಿಗಳ ನೀರು ‘ಸಿ’ ಗ್ರೇಡ್ ಹಂತಕ್ಕೆ ತಲುಪಿದ್ದು, ಸಂಪೂರ್ಣವಾಗಿ ಮಲಿನವಾಗಿದೆ. ಬರೀ ಜಲಚರ ಪ್ರಾಣಿಗಳು ವಾಸಿಸಲು ಹಾಗೂ ಕಾರ್ಖಾನೆಗಳ ಯಂತ್ರಗಳ ಸ್ವಚ್ಛತೆಗೆ ಬಳಸಬಹುದಾಗಿದೆ.ನದಿಯಂಚಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ನಿವಾಸಿಗಳು ವಿಧಿಯಿಲ್ಲದೆ ನದಿಯಲ್ಲಿ ಹರಿಯುವ ಕಚ್ಚಾ ನೀರನ್ನೇ ಕುಡಿಯಲು ಬಳಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಇನ್ನಷ್ಟು ಮಲಿನವಾಗುತ್ತಿರುವ ನದಿಗಳ ನೀರು ಭವಿಷ್ಯದಲ್ಲಿ ಜಲಚರ ಪ್ರಾಣಿಗಳ ಪ್ರಾಣಕ್ಕೂ ಸಂಚಕಾರ ತಂದೊಡ್ಡಲಿದೆ.

    ನಾಡಿನ ಜೀವನದಿ ಎಂದು ಖ್ಯಾತಿ ಪಡೆದಿರುವ ಕಾವೇರಿ ನದಿ ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರ ಪಾಲಿಗೆ, ಬೆಂಗಳೂರು ಜನತೆಗೆ ಜೀವಜಲವಾಗಿದೆ. ವರ್ಷದಿಂದ ವರ್ಷಕ್ಕೆ ಕಾವೇರಿ ನದಿ ಹೆಚ್ಚು ಕಲುಷಿತಗೊಳ್ಳುತ್ತಿದ್ದು, ಆತಂಕ ಮೂಡಿದೆ.ಇದರ ಜತೆಗೆ ಕಬಿನಿ ನದಿಯೂ ಮಲಿನವಾಗಿದೆ. ದಾವಣಗೆರೆ, ರಾಯಚೂರು, ಕಲಬುರಗಿ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ವಿಜಯಪುರ, ಯಾದಗಿರಿ ಮತ್ತು ಬೀದರ್ ಸೇರಿ ಉತ್ತರ ಕರ್ನಾಟಕ ಇತರೆ ಜಿಲ್ಲೆಗಳ ಕೋಟ್ಯಂತರ ರೈತರಿಗೆ ವರದಾನವಾಗಬೇಕಿದ್ದ ಕೃಷ್ಣ, ಭೀಮಾ, ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ಭದ್ರಾ ಹಾಗೂ ಕಾಳಿ ನದಿಗಳು ಮಲಿನಗೊಂಡಿವೆ. ಅದೇರೀತಿ, ಹಾಸನದಲ್ಲಿ ಹರಿಯುವ ಹೇಮಾವತಿ, ಯಗಚಿ, ಮಂಗಳೂರಿನಲ್ಲಿ ಹರಿಯುವ ನೇತ್ರಾವತಿ, ಕುಮಾರದ್ವಾರ, ತುಮಕೂರಿನ ಶಿಂಸಾ ಹಾಗೂ ರಾಮನಗರದ ಅರ್ಕಾವತಿ ನದಿಗಳೂ ಅಪಾಯ ಮಟ್ಟದಲ್ಲಿ ಮಲಿನಗೊಂಡಿವೆ.

    ಗ್ರೇಡ್ ಬದಲಾವಣೆ:
    ಕಾವೇರಿ, ಕಬಿನಿ, ಹೇಮಾವತಿ, ಯಗಚಿ, ನೇತ್ರಾವತಿ, ಕುಮಾರದ್ವಾರ, ಲಕ್ಷ್ಮಣ ತೀರ್ಥ, ಶರಾವತಿ, ಕೃಷ್ಣ, ಭೀಮಾ, ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ಭದ್ರಾ, ಶಿಂಸಾ, ಕಾಳಿ, ವಾಣಿವಿಲಾಸ ಸೇರಿ ನದಿಗಳು ಮತ್ತು ಉಪನದಿಗಳು ‘ಸಿ’ ಗ್ರೇಡ್ ಹಂತಕ್ಕೆ ತಲುಪಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿ ಬಹಿರಂಗವಾಗಿದೆ. ಸಾಮಾನ್ಯ ಸಂಸ್ಕರಣೆ ಮಾಡಿಯೂ ಕುಡಿಯಬಹುದಾದ ನದಿಗಳ ಜಲಮೂಲ ಇಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ 110ಕ್ಕೂ ಅಧಿಕ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಿರುವ ಮಂಡಳಿ, ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಬಿಡುಗಡೆ ಮಾಡುತ್ತಿದೆ. ಒಂದೊಂದು ತಿಂಗಳಲ್ಲಿ ನದಿಗಳ ನೀರಿನ ಗ್ರೇಡ್ ಬದಲಾಗುತ್ತಿದೆ.

    ಮಲಿನ ಹೇಗೆ?
    ಪರಿಸರ ಮತ್ತು ನೈರ್ಮಲ್ಯ ಇಲಾಖೆ ನಿಯಮ ಪ್ರಕಾರ ನದಿಗಳಿಗೆ ಕೊಳಚೆ ನೀರು ಬಿಡಬಾರದು. ಆದರೆ, ಅಪಾಯಕಾರಿ ಕೈಗಾರಿಕೆಗಳಿಂದ ಹೊರಬಿಡುವ ರಾಸಾಯನಿಕಯುಕ್ತ ಕೊಳಚೆ ನೀರು ನದಿಗಳ ಮತ್ತು ಉಪನದಿಗಳ ಒಡಲಿಗೆ ಅಪಾರ ಪ್ರಮಾಣದಲ್ಲಿ ಸೇರುವಂತಾಗಿದೆ. ಕಸ, ಕೋಳಿ, ಕೃಷಿ, ವೈದ್ಯಕೀಯ ತ್ಯಾಜ್ಯ, ತೈಲ ಸೋರಿಕೆಯಿಂದ ನದಿಗಳ ನೀರು ಕಲುಷಿತವಾಗುತ್ತಿದೆ.

    193 ಪ್ರಮುಖ ಕೆರೆಗಳು ಮಲಿನ:
    ಬೆಂಗಳೂರು 123, ಹಾಸನ 20, ಧಾರವಾಡ, ತುಮಕೂರು 8, ಮೈಸೂರು 7, ದಾವಣಗರೆ, ರಾಯಚೂರು, ಕೋಲಾರ 4, ರಾಮನಗರ 3 ಸೇರಿ ರಾಜ್ಯಾದ್ಯಂತ 193 ಪ್ರಮುಖ ಕೆರೆಗಳ ನೀರು ಕಲ್ಮಷವಾಗಿದೆ. ರಾಜ್ಯದಲ್ಲಿ ಒಟ್ಟು 3,670 ಕೆರೆಗಳಿದ್ದು, ಇದರಲ್ಲಿ 870 ಕೆರೆಗಳು ಪೂರ್ಣವಾಗಿ ತುಂಬಿದರೆ 999 ಕೆರೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ. 1,454 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ಹಾಗೂ 347 ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಏರಿ ಬಲರ್ವಧನೆ, ಕೋಡಿ ಮತ್ತು ಕಾಲುವೆ ದುರಸ್ತಿ, ಹೊಳು ತೆಗೆಯುವುದು ಸೇರಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಅವಶ್ಯವಿರುವ ಹಣಕಾಸಿನ ಬೇಡಿಕೆಯನ್ನು ನಿಖರವಾಗಿ ಲೆಕ್ಕ ಮಾಡುವುದು ಕಷ್ಟವೆಂದು ಸರ್ಕಾರವೇ ಒಪ್ಪಿಕೊಂಡಿರುವುದು ಕೆರೆಗಳ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

    ಇಚ್ಛಾಶಕ್ತಿ ತೋರಲಿ:
    ನದಿ, ಉಪನದಿಗಳು, ಕೆರೆಗಳಿಗೆ ಕಾಯಕಲ್ಪ ನೀಡಲು ಸರ್ಕಾರಗಳು ಹಲವು ವರ್ಷಗಳಿಂದ ನಿರ್ಲಕ್ಷ್ಯ ವಹಿಸಿವೆ. ಇವುಗಳ ಉಳಿವಿಗೆ ಈಗಲೇ ಎಚ್ಚೆತ್ತು ಕಾಯಕಲ್ಪ ನೀಡದಿದ್ದರೆ, ಭವಿಷ್ಯದಲ್ಲಿ ಕುಡಿಯಲು ಶುದ್ಧ ನೀರು ಸಿಗದೆ ಪರಿತಪಿಸಬೇಕಾಗುತ್ತದೆ. ಸರ್ಕಾರಗಳು ಹೊರಡಿಸುವ ಆದೇಶಗಳು, ಮಂಡಳಿ ನೀಡಿರುವ ಶಿಾರಸ್ಸು ಕಾಗದಕ್ಕೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತಾಗಬೇಕು. ಇದಕ್ಕೆ ಖಾಸಗಿ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಬೇಕು.

    ವರ್ಗವಾರು ವಿವರ
    ಗ್ರೇಡ್ ‘ಎ’- ಕುಡಿಯುವ ನೀರಿನ ಮೂಲ
    ಗ್ರೇಡ್‌‘ಬಿ’- ಹೊರಾಂಗಣ ಸ್ನಾನಕ್ಕೆ ಯೋಗ್ಯ
    ಗ್ರೇಡ್‌‘ಸಿ’- ಕಡ್ಡಾಯ ಶುದ್ಧೀಕರಣ ನಂತರ ಕುಡಿಯುವಂಥದ್ದು
    ಗ್ರೇಡ್‌‘ಡಿ’- ಜಲಚರ ಪ್ರಾಣಿಗಳು ವಾಸಿಸಲು ಉಪಯುಕ್ತ
    ಗ್ರೇಡ್‌‘ಇ’- ನೀರಾವರಿಗೆ, ಕಾರ್ಖಾನೆಗಳ ಯಂತ್ರಗಳ ತೊಳೆಯಲು ಸೂಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts