More

    ಅತಿವೃಷ್ಟಿ ಪರಿಹಾರ ವಿತರಣೆ ಯಾವಾಗ ?

    ಹಾನಗಲ್ಲ: ಕಳೆದ ವರ್ಷದ ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಮಾಡಿದ ಅವ್ಯವಹಾರದಿಂದ ಸಾವಿರಾರು ರೈತರಿಗೆ ಪರಿಹಾರದ ಹಣ ಬರದಂತಾಗಿದೆ. ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ತಾಪಂ ಸದಸ್ಯ ಶಿವಬಸಪ್ಪ ಪೂಜಾರ ಆರೋಪಿಸಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ರಾಜ್ಯಾದ್ಯಂತ ಕಂದಾಯ ಇಲಾಖೆ ಸಿಬ್ಬಂದಿ ಅವ್ಯವಹಾರ ನಡೆಸಿದ್ದು ಬೆಳಕಿಗೆ ಬರುತ್ತಿದ್ದಂತೆ ಪರಿಹಾರ ವಿತರಣೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಸಾವಿರಾರು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಕೆಲವು ರೈತರ ಪರಿಹಾರವನ್ನು ಸಿಬ್ಬಂದಿ ತಮ್ಮ ಸಂಬಂಧಿಕರ ಖಾತೆಗೆ ಹಾಕಿಕೊಂಡಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಪಂ ಸದಸ್ಯರ ಅನುದಾನ ಸಕಾಲದಲ್ಲಿ ಬಿಡುಗಡೆಯಾಗಿಲ್ಲ. ಹೀಗಾಗಿ ಬಳಕೆ ಮಾಡಿಕೊಳ್ಳಲು ಸಮಯ ಸಾಲದ್ದರಿಂದ ಪ್ರಸ್ತುತ ವರ್ಷದ ಕೋಟಿ ರೂ.ನಷ್ಟು ಅನುದಾನ ಮರಳಿ ಹೋಗುವಂತಾಗಿದೆ. ಇದರಿಂದಾಗಿ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಜೂನ್​ನಲ್ಲಿ ಬರಬೇಕಿದ್ದ ಅನುದಾನದ ಕಂತು ಆಗಸ್ಟ್​ನಲ್ಲಿ ಬಂದಿದೆ. ಈಗ ಬರುತ್ತಿರುವ ಅನುದಾನವೂ ಸಾಕಾಗುತ್ತಿಲ್ಲ. ಅದನ್ನು ಹೆಚ್ಚಿಸಬೇಕು ಎಂದು ಪೂಜಾರ ಆಗ್ರಹಿಸಿದರು.

    ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಪರಿಹಾರ ವಿತರಣೆಯಲ್ಲಾದ ಅಕ್ರಮ ಪ್ರಕರಣ ತನಿಖಾ ಹಂತದಲ್ಲಿದೆ. ಪೊಲೀಸ್ ಇಲಾಖೆ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ನಂತರ ಅರ್ಹ ರೈತರಿಗೆ ಪರಿಹಾರ ಬರಲಿದೆ ಎಂದು ವಿವರಿಸಿದರು.

    ಮಲಗುಂದ ಗ್ರಾಮದಲ್ಲಿ 5 ಎಕರೆ ಜಮೀನಿನಲ್ಲಿ ಸರ್ಕಾರಿ ಶಾಲೆ ನಿರ್ವಣಗೊಂಡು 40 ವರ್ಷಗಳಾಗಿವೆ. ಆದರೆ, ಇದುವರೆಗೂ ಈ ಭೂಮಿ ಮಾಲೀಕತ್ವವನ್ನು ಶಿಕ್ಷಣ ಇಲಾಖೆಗೆ ದಾಖಲೆಗಳಲ್ಲಿ ನಮೂದಿಸಿ, ಹಸ್ತಾಂತರಿಸಿಲ್ಲ ಎಂದು ತಿಪ್ಪಣ್ಣ ದೊಡ್ಡಕೋವಿ ಆರೋಪಿಸಿದರು. ಆಗ ತಹಸೀಲ್ದಾರ್, ದಾಖಲೆಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದರು.

    2018-19ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಹಣ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ತಾಲೂಕಿನಲ್ಲಿ ಒಟ್ಟು 3371 ಮನೆಗಳು ಬಿದ್ದಿದ್ದು, ಅವುಗಳಲ್ಲಿ 290 ಮನೆಗಳಿಗೆ ವಿಭಾಗ (ಎ ಮತ್ತು ಬಿ ಕೆಟಗರಿ) ಆಧರಿಸಿ 5 ಲಕ್ಷ ಪರಿಹಾರ ಒದಗಿಸಲಾಗುತ್ತಿದೆ. ಸಿ ಕೆಟಗರಿ ಮನೆಗಳಿಗೆ ತಾಂತ್ರಿಕ ದೋಷ ಸರಿಪಡಿಸಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.

    ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರಳಾ ಜಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ಪ್ಯಾಟಿ, ಇಒ ಚನ್ನಪ್ಪ ರಾಯಣ್ಣನವರ, ಯೋಜನಾಧಿಕಾರಿ ಚಂದ್ರಶೇಖರ ಸೂಡಂಬಿ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts