More

    ಏನ್… ನಿನ್ನ ಫೇಸಬುಕ್ ಅಕೌಂಟ್ ಹ್ಯಾಕ್ ಆಗೇದಂತ?

    ಏನ್… ನಿನ್ನ ಫೇಸಬುಕ್ ಅಕೌಂಟ್ ಹ್ಯಾಕ್ ಆಗೇದಂತ? ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ. ಮುಂಜಾನೆ ಎದ್ದ ಯಾರ ಮಾರಿ ನೋಡಿದ್ನೋ ಏನೋ? ಅಲ್ಲಾ ಹಂಗ ಮನ್ಯಾಗ ಮಲ್ಕೊಂಡಿದ್ದೆ ಅಂದ ಮ್ಯಾಲೆ ಹೆಂಡ್ತಿ ಮಾರಿ ನೋಡಿನ ಎದ್ದಿರತೇನಿ ಆ ಮಾತ ಬ್ಯಾರೆ, ಒಟ್ಟ ಅವತ್ತ ಎದ್ದದ್ದ ಮುಹೂರ್ತ ಛಲೋ ಇರಲಿಲ್ಲಾ ಅನ್ನರಿ. ಮಟಾ ಮಟಾ ಮಧ್ಯಾಹ್ನ ವಾಟ್ಸಪ್ ಒಳಗ ಒಂದ ಮೆಸೇಜ್ ಬಂತ, ಅನ್ನೌನ್ ನಂಬರದಿಂದ ಬಂತ, ಅದರಾಗ ಒಂದ ಇಮೇಜ್ ಇತ್ತ. ಅದ ಪೂರ್ತಿ ಡೌನ್​ಲೋಡ್ ಆಗೋಕಿಂತ ಮುಂಚೆ ಒಂಥರಾ ಯಾರೋ ತಿರ್ಕೆಂಡಿದ್ದ ಶ್ರದ್ಧಾಂಜಲಿ ಗ್ರಾಫಿಕ್ಸ್ ಮಾಡಿ ವಾಟ್ಸಪ್ ಬಿಟ್ಟಿರ್ತಾರಲಾ ಹಂಗ ಇತ್ತ. ನಾ ಮತ್ತ ಯಾರ ಹೋದರಪಾ ಅಂತ ಡೌನ್​ಲೋಡ್ ಮಾಡಿ ನೋಡಿದರ ಅದರಾಗ ನಂದ ಫೋಟೊ ಇತ್ತ. ನಾ ಗಾಬರಿ ಆಗಿ ಝುೂಮ್ ಮಾಡಿ ನೋಡಿದರ ನನ್ನ ಫೇಸಬುಕ್ ಪೋಸ್ಟದ್ದ ಸ್ಕ್ರೀನ್​ಶಾಟ್ ಇತ್ತ. ಏನ ಅಂತ ಡಿಟೇಲ್ಸ್ ಓದಿದರ ನಾ ಏನೋ ಎಪ್ಪತ್ತ ಸಾವಿರ ರೂಪಾಯಿ ಬಿಟ್ ಕ್ವಾಯಿನ್ಸ್ ಒಳಗ ಇನ್ವೆಸ್ಟ್ ಮಾಡಿ ಮೂರ ತಾಸ ಒಳಗ ಏಳೂವರಿ ಲಕ್ಷಗಳಸೇನಂತ ಒಂದ ದೊಡ್ಡ ಕಥಿ ಬರದ ಮ್ಯಾಲೆ ನನ್ನ ಅಕೌಂಟಿಗೆ ರೊಕ್ಕ ಜಮಾ ಆಗಿದ್ದ ಒಂದ ಫೇಕ್ ಸ್ಕ್ರೀನ್​ಶಾಟ್ ಬ್ಯಾರೆ ಹಾಕಿದ್ದರು.

    ನಂಗ ಒಮ್ಮಿಕ್ಕಲೇ ಏನಂತ ತಿಳಿಲೇ ಇಲ್ಲಾ. ಆದರೂ ಒಂದ ಸರತೆ ಎಲ್ಲೇರ ನನ್ನ ಅಕೌಂಟಿಗೆ ಖರೇನ ಏಳುವರಿ ಲಕ್ಷ ಜಮಾ ಆಗೇದೇನ ಅಂತ ಬ್ಯಾಂಕ್ ಅಕೌಂಟ್ ಚೆಕ್ ಮಾಡಿದೆ, ಒಂದ ರೂಪಾಯಿನೂ ಜಮಾ ಆಗಿರಲಿಲ್ಲಾ. ಅಷ್ಟರಾಗ ಆ ಇಮೇಜ್ ಕಳಸಿದವರ ‘ಇಸ್ ಇಟ್ ಟ್ರು? ಆರ್ ಯುವರ್ ಅಕೌಂಟ್ ಇಸ್ ಹ್ಯಾಕಡ್?’ ಅಂತ ಕೇಳಿದರು. ನಾ ಇಮ್ಮಿಡಿಯೇಟ್ ಆಗಿ ಫೇಸಬುಕ್ ಒಪನ್ ಮಾಡಿದರ ನನ್ನ ಲಾಗಿನ್ ಬಂದ ಆಗಿತ್ತ. ನನ್ನ ಅಕೌಂಟ್ ಹ್ಯಾಕ್ ಆಗೇದ ಅಂತ ಗ್ಯಾರಂಟಿ ಆತ. ಅವರಿಗೆ ನನ್ನ ಅಕೌಂಟ್ ಹ್ಯಾಕ್ ಆಗೇದ ಅಂತ ಹೇಳೊದರಾಗ ಹಂತಾವ ಒಂದ ಹತ್ತ-ಹದಿನೈದ ಮೆಸೇಜ್, ಕಂಟಿನ್ಯೂ ಕಾಲ್ ಬರಲಿಕ್ಕೆ ಶುರು ಆದ್ವು.

    ನಂಗರ ಎಲ್ಲಾರಿಗೂ ನನಗ ಒಂದ ಹತ್ತ ಪೈಸಾ ಬಂದಿಲ್ಲಾ, ಅಕೌಂಟ್ ಹ್ಯಾಕ್ ಆಗೇದ ಅಂತ ಹೇಳೋದರಾಗ ರಗಡ-ರಗಡ ಆತ. ಒಂದ ಕಡೆ ಅಕೌಂಟ್ ಹ್ಯಾಕ್ ಆಗಿದ್ದ ಹೆಂಗ ರಿಟ್ರೀವ್ ಮಾಡ್ಬೇಕ ಅನ್ನೋ ಸಂಕಟಾ, ಇತ್ತಲಾಗ ನಂಗ ಏಳುವರಿ ಲಕ್ಷ ಬಂದದ ಅಂತ ತಿಳ್ಕೊಂಡ ಸಾಲಾ ಕೊಟ್ಟೋರ, ಇನ್ನ ಮುಂದ ಸಾಲಾ ಇಸ್ಗೋಳೊರ ಫೋನ್ ಮಾಡ್ಲಿಕತ್ತಿದ್ದರ. ಅದರಾಗ ನಾ ಫೇಸಬುಕ್ ಸೆಲೆಬ್ರಿಟಿ ಬ್ಯಾರೆ, ಫೇಸಬುಕ್ ಒಳಗ ಏಳ ಎಂಟ ಸಾವಿರ ಮಂದಿ ಹಚಗೊಂಡಿದ್ದೆ, ಹಿಂಗಾಗಿ ಫೋನ್, ಮೆಸೇಜ್ ಬಂದಿದ್ದ ಬಂದಿದ್ದ.

    ಕಡಿಕೆ ತಲಿ ಕೆಟ್ಟ ವಾಟ್ಸಪ್ ಒಳಗ ಎಂದೂ ಸ್ಟೇಟಸ್ ಇಡಲಾರದಂವಾ ನನ್ನ ಫೇಸಬುಕ್ ಹ್ಯಾಕ್ ಆಗೇದ ನನ್ನ ಫೇಸಬುಕ್- ಪೋಸ್ಟ್ ನಂಬಬ್ಯಾಡ್ರಿ ಅಂತ ಸ್ಟೇಟಸ್ ಇಡೊ ಪ್ರಸಂಗ ಬಂತ. ಇನ್ನ ಹ್ಯಾಕ್ ಆಗಿದ್ದನ್ನ ತಗಿಲಿಕ್ಕೆ ಎಷ್ಟ ಗುದ್ದಾಡಿದರು ಬರಲಿಲ್ಲಾ, ನನ್ನ ಇ-ಮೇಲ್ ಐ.ಡಿ ಸಹಿತ ಅವರ ಚೇಂಜ್ ಮಾಡಿದ್ದರು. ಏನಿಲ್ಲದ ಚ್ಞ್ಡಛಿಠಿಢ ಟಚಠಿಜಿಛ್ಞಿಠಿ ತೊಗೊ ಕೇಳ್ತಿರೇನ್ ನನಗ ಹುಚ್ಚ ಹಿಡದಂಗ ಆತ. ಏನ್ಮಾಡಬೇಕ ತಿಳಿಲಿಲ್ಲಾ, ಅಷ್ಟರಾಗ ಸಂಜಿ ಆಗಿತ್ತ, ಆಗಿದ್ದ ಆಗಿ ಹೋತ ನಾಳೇ ನೋಡಿದರಾತ ನಡಿ ಅಂತ ಒಂದ ನಾಲ್ಕ ಮಂದಿ ದೊಸ್ತರನ ಕರಕೊಂಡ ನನ್ನ ಫೇಸಬುಕ್ ಅಕೌಂಟಿಗೆ ಶ್ರದ್ಧಾಂಜಲಿ ಸಭಾ ಮಾಡಲಿಕ್ಕೆ ಕಾಟನ್​ಕೌಂಟಿ ಕ್ಲಬ್​ಗೆ ಕರ್ಕೆಂಡ ಹೋದೆ.

    ಇತ್ತಲಾಗ ನನ್ನ ವಾಟ್ಸಪ್​ಗ್ರೂಪ್ ಒಳಗ ನನ್ನ ಫೇಸಬುಕ್ ಪೋಸ್ಟ್ ಇಮೇಜ್ ಹರದಾಡಲಿಕತ್ತ, ಹ್ಯಾಕ್ ಆಗಿದ್ದ ಗೊತ್ತಿರಲಾರದವರ ‘ಕಂಗ್ರಾಜ್ಯುಲೇಶನ್ಸ್, ಪಾರ್ಟಿ…’ ಅಂತ ಕೇಳಿದರು, ಕೆಲವೊಬ್ಬರ ಇದ ಖರೇನೋ ಸುಳ್ಳೊ ಆಡ್ಯಾನ ಹೇಳ್ಬೇಕ ಅಂತ ಅಂದರ ಖರೆ ಆದರ ನನ್ನ ಕಡೆ ಏನ ರಿಪ್ಲೈ ಬರಲಾರದ ನೋಡಿ, ‘ಏ ಆಡ್ಯಾ ರೊಕ್ಕಾ ಏಣಸಾಕತ್ತಾರ, ಬಿಜಿ ಇದ್ದಾನ ಮಗಾ’ ಅಂತ ಅಂದರ, ಇನ್ನೊಂದಿಷ್ಟ ಮಂದಿ ‘ಮಗಾ ನೋಡ, ನಮಗ ಹೇಳಲಾರದ ತಾ ಒಬ್ಬನ ಇನ್ವೆಸ್ಟ್ ಮಾಡ್ಯಾನ’ ಅಂದರು. ಕೆಲವೊಬ್ಬರು, ‘ಏನ… ಹುಚ್ಚ ಅದಾನಲೇ… ರೊಕ್ಕ ಬಂದಿದ್ದನ್ನೂ ಯಾರರ ಫೇಸಬುಕ್ಕಿನಾಗ ಹಾಕ್ತಾರ ಏನ’ ಅಂದರು.

    ನನ್ನ ಸಂಕಟ ನನಗ, ಈ ಮಕ್ಕಳಿಗೆ ಹುಡಗಾಟ ಆಗಿತ್ತ. ಅಲ್ಲಾ ಏನಿಲ್ಲಾಂದರೂ ಒಂದ ಹದಿನೈದ ವರ್ಷದ ಅಕೌಂಟ್, ಎಷ್ಟ ಜನಾ ಫ್ರೇಂಡ್ಸ್ ಇದ್ದರು, ಎಷ್ಟ ಜನಾ ಫಾಲೋ ಮಾಡ್ತಿದ್ದರು. ಇನ್ನ ಹಂತಾ ಅಕೌಂಟ್ ಹೋದರ ನನ ಗತಿ ಏನಪಾ ಅಂತ ಚಿಂತಿ ಹತ್ತಿ ಬಿಡ್ತ. ಅದರಾಗ ಒಂದಿಷ್ಟ ಸೋಷಿಯಲ್ ಮೀಡಿಯಾ ಟೆಕ್ನಿಕಲ್ ಎಕ್ಸ್​ಪರ್ಟ್ ಇದ್ದೋರಿಗೆ ನನ್ನ ಪ್ರಾಬ್ಲೇಮ್ ಸಾಲ್ವ್ ಮಾಡ್ಲಿಕ್ಕೆ ಹೇಳಿದರ ಅವರು ಕೈ ಎತ್ತಿ, ‘ಐ ಥಿಂಕ್ ಯುವರ್ ಅಕೌಂಟ್ ಇಸ್ ಡಿಲಿಟೆಡ್ ಮ್ಯಾನ್’ ಅಂತ ಅಂದರು.

    ಇನ್ನ ದೊಡ್ಡಿಸ್ತನಾ ಮಾಡಿ ವಾಟ್ಸಪ್ ಸ್ಟೇಟಸ್ ಇಟ್ಟಿದ್ದಕ್ಕ ಫೇಸಬುಕ್ ಒಳಗ ಇರಲಾರದ ಜನಾ ಸಹಿತ ಅದನ್ನ ನೋಡಿ ಕಂಡೋಲೆನ್ಸ್ ಮೆಸೇಜ್ ಕಳಸಲಿಕತ್ತರ. ಏನೋ ಅಗದಿ ನಮ್ಮ ಪೈಕಿ ಯಾರೋ ಸತ್ತಾರೇನೊ ಅನ್ನೊಹಂಗ ಮೆಸೇಜ್ ಬರಲಿಕತ್ತವು. ‘ಛೇ..ಹಿಂಗ ಆಗಬಾರದಿತ್ತ’ ಅಂತ ಒಬ್ಬರ ಅಂದರ, ‘ಸುದ್ದಿ ಕೇಳಿದ್ವಿಪಾ ಭಾಳ ಕೆಟ್ಟ ಅನಸ್ತ… ಸ್ವಾರಿ ಟು ಹಿಯರ್’ ಅಂತ ಮತ್ತೊಬ್ಬರ ಅನ್ನೋರ. ಒಂದಿಷ್ಟ ಮಂದಿ ‘ನಿನ್ನ ಫೇಸಬುಕ್ ಅಕೌಂಟ್ ಹೋತ ಅಂತಲೋ’ ಅಂತ ಕೆದಕಿ-ಕೆದಕಿ ಕೇಳೋರ. ಅದರಾಗ ಫೇಸಬುಕನಾಗ ಇಷ್ಟ ಫೇಮಸ್ ಇದ್ದ ನನಗಂತೂ ಖರೇನ ಫೇಸಬುಕ್ ಅಕೌಂಟ್ ಹ್ಯಾಕ್ ಆಗಿ ವಾಪಸ್ ರಿಟ್ರೀವ್ ಆಗಲಾರದಕ್ಕ ಇದ್ದರೂ ಸತ್ತಂಗ ಅನಸಲಿಕತ್ತಿತ್ತ. ಯಾರೋ ನನ್ನ ಜೊತಿ ಒಂದ ಹದಿನೈದ ವರ್ಷ ಇದ್ದ ಸಂಸಾರ ಮಾಡಿ ನನ್ನ ಬಿಟ್ಟ ಹೋದಂಗ ಅನಸಲಿಕತ್ತ.

    ಇತ್ತಲಾಗ ಒಂದಿಷ್ಟ ದೋಸ್ತರ ನಾ ಖರೇನ ಎರಡ-ಮೂರ ತಾಸನಾಗ ಅಷ್ಟ ರೊಕ್ಕಾ ಮಾಡೇನಿ, ಇಲ್ಲಾಂದರ ಆಡೂರ ಸುಳ್ಳ-ಸುಳ್ಳ ಫೇಸಬುಕ್ ಒಳಗ ಹಿಂಗೆಲ್ಲ ಹಾಕೋಂವ ಅಲ್ಲಾ ಅಂತ ನನ್ನ ಅಕೌಂಟ್ ಹ್ಯಾಕ್ ಮಾಡಿದ್ದ ಆ ನೈಜಿರಿಯನ್ ಹುಡುಗಿಗೆ ಪರ್ಸನಲ್ ಚಾಟ್ ಒಳಗ ಹೋಗಿ ‘ಹಾಯ್, ಮಿನಿಮಮ್ ಹೌ ಮಚ್ ಐ ಹ್ಯಾವ್ ಟು ಇನ್ವೆಸ್ಟ್’ ಅಂತ ಮೆಸೇಜ್ ಬ್ಯಾರೆ ಕಳಸಿ ಬಿಟ್ಟಿದ್ದರು.

    ನಾ ರಾತ್ರಿ ಬೆಳತನಕ ಫೇಸಬುಕ್ ಬಗ್ಗೆ ವಿಚಾರ ಮಾಡಿ ಮಾಡಿ ಮುಂಜಾನೆ ಏಳೋದರಾಗ ಆಸಿಡಿಟಿ ಆಗೋ ಹಂಗ ಆತ ಖರೆ. ಆದರ ಅಕೌಂಟ್ ಏನ ವಾಪಸ ಬರಲಿಲ್ಲಾ. ಹಂಗ ಲಗ್ನಾ ಮಾಡ್ಕೊಂಡ ಜೀವನಾನ ಹ್ಯಾಕ್ ಮಾಡಿಸ್ಗೊಂಡ ನನಗ ಫೇಸಬುಕ್ ಒಂದರ ಒಂದ ಸ್ವಲ್ಪ ಆಧಾರ ಆಗಿತ್ತ, ಈಗ ಅದು ಹ್ಯಾಕ್ ಆತಲಪಾ, ಇನ್ನ ಮುಂದ ಜೀವನಾ ಹೆಂಗ ಕಳಿಯೋದ ಅಂತ ಚಿಂತಿ ಹತ್ತತ.

    ಹಂಗ ಒಂದಿಷ್ಟ ಮಂದಿ , ‘ಏ, ಭಾಳ ತಲಿಗೆಡಸಿಕೋ ಬ್ಯಾಡಾ. ಇನ್ನೊಂದ ಅಕೌಂಟ್ ಓಪನ್ ಮಾಡ, ನೀನಗೇನ ಕಣ್ಣಮುಚ್ಚಿ ಕಣ್ಣ ತಗೆಯೋದರಾಗ ಐದ-ಆರ ಸಾವಿರ ಮಂದಿ ಫ್ರೇಂಡ್ಸ್ ಆಗ್ತಾರ’ ಅಂದರ. ‘ಯಪ್ಪಾ… ಇಷ್ಟ ವಯಸ್ಸಾದ ಮ್ಯಾಲೆ ಇನ್ನೇಲ್ಲಿ ಹೊಸ ಅಕೌಂಟ್ ಬಿಡ್ಲೆ’ ಅಂತ ನಾ ಅಂದರ ‘ಮಗನ ನಿನಗ ಇನ್ನೊಂದ ಫೇಸಬುಕ್ ಅಕೌಂಟ್ ಓಪನ್ ಮಾಡ ಅಂತ ಅನ್ನಲಿಕತ್ತೇವಿ, ಲಗ್ನಾ ಮಾಡ್ಕೊಳಿಕ್ಕಲ್ಲಾ’ ಅಂತ ಉಲ್ಟಾ ನನಗ ಅಂದರು. ನೋಡೋಣ. ಎಲ್ಲಾ ಆ ಹರಿ ಇಚ್ಛೆ. ಹಂಗ ನನ್ನ ತಲ್ಯಾಗ ಎರಡ ಸುಳಿ ಇದ್ದರೂ ಮದ್ವಿ ಅಂತೂ ಒಂದ ಆತ. ಆದರ ಹಣೆಬರಹದಾಗ ಇನ್ನೊಂದ ಫೇಸಬುಕ್ ಅಕೌಂಟ್ ಬರದಿದ್ದರ ಯಾರ ಕಡೆಯಿಂದ ತಪ್ಪಸಲಿಕ್ಕೆ ಆಗ್ತದ ಅಂತ ನಾ ಒಂದ ವಾರ ಸುಮ್ಮನ ಹಳೇ ಅಕೌಂಟ್ ರಿಟ್ರೀವ್ ಮಾಡ್ಲಿಕ್ಕೆ ಗುದ್ದಾಡಲಿಕತ್ತಿದ್ದೆ. ಕಡಿಕ ಇನ್ನೇನ ನನ್ನ ಅಕೌಂಟಿಗೆ ಹತ್ತನೇ ದಿವಸ ಧರ್ವೇದಕ ಮಾಡಿ ನೀರ ಬಿಡಬೇಕ ಅನ್ನೊದಕ್ಕ ಅಕೌಂಟ್ ರಿಟ್ರೀವ್ ಆತ ಅನ್ನರಿ.

    ಇನ್ನ ಮೊದ್ಲಿನಂಗ ನಮ್ಮ ಫೇಸಬುಕ್ ಒಳಗಿನ ಪ್ರೀತಿ, ವಿಶ್ವಾಸ ಫಾಲೊ-ಅನಫಾಲೊ ಮುಂದವರಿಲಿ. ನಾವೆಲ್ಲ ಫೇಸಬುಕ್ ಒಳಗ ಒಬ್ಬರದೊಬ್ಬರ ಲೈಕ್ ಮಾಡ್ಕೋತ ಕಮೆಂಟ್ ಮಾಡ್ಕೋತ ಹಿಂಗ ಇರೋಣ. ಆದರೂ ಕಾಲಮಾನ ಭಾಳ ಸುಮಾರ ಅದ, ಸೋಷಿಯಲ್ ಮೀಡಿಯಾ ಒಳಗ ಹುಷಾರ ಇರ್ರಿಪಾ. ನಿಮ್ಮ ಫೇಸಬುಕ್ ಅಕೌಂಟ್ ಬಗ್ಗೆ ಲಕ್ಷ ಇರಲಿ. ಆವಾಗ-ಇವಾಗ ಪಾಸವರ್ಡ್ ಚೇಂಜ್ ಮಾಡ್ಕೋತ ಇರ್ರಿ, ಗೊರ್ತ ಖೂನ್ ಇರಲಾರದ ಲಿಂಕ್ ಕ್ಲಿಕ್ ಮಾಡಬ್ಯಾಡ್ರಿ. ಎಲ್ಲೇರ ನಿಮ್ಮ ಅಕೌಂಟ್ ಹ್ಯಾಕ್ ಆಗಿ-ಗಿಗಿತ್ತ.

    (ಲೇಖಕರು ಹಾಸ್ಯ ಬರಹಗಾರರು)

    ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts