More

    ಭಗವದ್ಗೀತೆಯಿಂದ ಶಿಕ್ಷಕರು ಕಲಿಯಬೇಕಾದ್ದು…

    ಭಗವದ್ಗೀತೆಯಿಂದ ಶಿಕ್ಷಕರು ಕಲಿಯಬೇಕಾದ್ದು…ಮಾನಸಿಕ ಗೊಂದಲ ಮತ್ತು ಧರ್ಮಸಂಕಟಗಳಿಂದ ವಿಚಲಿತನಾದ ಅರ್ಜುನನಿಗೆ ಶ್ರೀಕೃಷ್ಣನು ಗುರುವಿನ ಪಾತ್ರವನ್ನು ವಹಿಸಿ, ಕರ್ತವ್ಯಗಳನ್ನು ಬೋಧಿಸಿದುದು ಗೀತೆಯ ಸಾರಸರ್ವಸ್ವ. ಶ್ರೀಕೃಷ್ಣನ ಬೋಧನಾ ವಿಧಾನವನ್ನು ಶಿಕ್ಷಕರು ಸಹ ಅಳವಡಿಸಿಕೊಂಡು ವೃತ್ತಿಯಲ್ಲಿ ಸಾರ್ಥಕತೆ ಕಾಣಬಹುದು.

    ಭಗವದ್ಗೀತೆಯು ಸುಲಭವಾಗಿ ಆಚರಣೆಗೆ ತರಬಲ್ಲ ಬೋಧನೆಗಳನ್ನೊಳಗೊಂಡ ಆಧ್ಯಾತ್ಮಿಕ ಗ್ರಂಥವಾಗಿದ್ದು, ಎಪ್ಪತ್ತೈದಕ್ಕೂ ಹೆಚ್ಚಿನ ಜಾಗತಿಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಐದು ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ನಡೆದ ಶ್ರೀಕೃಷ್ಣಾರ್ಜುನ ಸಂವಾದವು ಭಗವದ್ಗೀತೆಯ ವಿಷಯವಾಗಿದೆ. ಪ್ರತಿವರ್ಷ ಮಾರ್ಗಶಿರ ಮಾಸದ ಶುಕ್ಲ ಏಕಾದಶಿಯಂದು ವಿಶ್ವದಾದ್ಯಂತ ಗೀತಾ ಜಯಂತಿ ಆಚರಿಸುತ್ತಾರೆ. ಅಂತೆಯೇ, ಇದೇ ಡಿಸೆಂಬರ್ 3ರಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಗವದ್ಗೀತೆಯ ಮಹಾನ್ ಆಧ್ಯಾತ್ಮಿಕ ಪರಂಪರೆಯನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪರಿಚಯಿಸಲು ಗೀತಾ ಜಯಂತಿ ಆಚರಿಸಲ್ಪಟ್ಟಿತು.

    ಭಗವದ್ಗೀತೆಯಿಂದ ಎಲ್ಲರೂ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ. ಕರ್ಮಯೋಗ- ನಿಸ್ವಾರ್ಥ ಕರ್ಮದ ಹಾದಿ; ಭಕ್ತಿಯೋಗ- ಮಾಡುವ ಸರ್ವಕರ್ಮಗಳನ್ನು ಭಗವಂತನಿಗೆ ಅರ್ಪಿಸುವುದು; ಜ್ಞಾನಯೋಗ – ಆತ್ಮವಿಚಾರ ಮತ್ತು ಮನನ-ಧ್ಯಾನಗಳ ಮೂಲಕ ಪರಮಜ್ಞಾನವನ್ನು ಹೊಂದುವುದು; ಅಂತಿಮವಾಗಿ ಧ್ಯಾನ ಅಥವಾ ರಾಜಯೋಗ- ಧ್ಯಾನದ ಅತ್ಯುನ್ನತ ಹಂತವಾದ ಸಮಾಧಿ ಸ್ಥಿತಿಯಲ್ಲಿ ವೈಯಕ್ತಿಕ ಅಸ್ತಿತ್ವವನ್ನು ಪರಮಾತ್ಮನಲ್ಲಿ ಲೀನ ಮಾಡುವುದು. ಈ ಎಲ್ಲ ಮೋಕ್ಷಮಾರ್ಗಗಳನ್ನು ಭಗವದ್ಗೀತೆಯು ಬೋಧಿಸುತ್ತದೆ. ಇಷ್ಟೇ ಅಲ್ಲದೆ, ಎಲ್ಲರೂ ಅರಿಯಬೇಕಾದ, ಅದರಲ್ಲೂ ವಿಶೇಷವಾಗಿ ಬೋಧಕರಿಗೆ ಅನ್ವಯಿಸುವ ಬೋಧನಾ ಶಾಸ್ತ್ರವು ಭಗವದ್ಗೀತೆಯಲ್ಲಿ ಅಡಕವಾಗಿದೆಯೆಂಬುದು ಆಸಕ್ತಿಕರವಾದ ಸಂಗತಿ. ಮಾನಸಿಕ ಗೊಂದಲ ಮತ್ತು ಧರ್ಮಸಂಕಟಗಳಿಂದ ವಿಚಲಿತನಾದ ಶಿಷ್ಯನಾದ ಅರ್ಜುನನಿಗೆ ಶ್ರೀಕೃಷ್ಣನು ಗುರುವಿನ ಪಾತ್ರವನ್ನು ವಹಿಸಿ, ಅವನಿಗೆ ಅವನ ಕರ್ತವ್ಯಗಳನ್ನು ಬೋಧಿಸಿದುದು ಗೀತೆಯ ಸಾರಸರ್ವಸ್ವ. ಈ ಸಂದರ್ಭದಲ್ಲಿ ಶ್ರೀಕೃಷ್ಣನು ಅನುಸರಿಸಿದ ಬೋಧನಾ ವಿಧಾನದಿಂದ ಜಗತ್ತಿನ ಶಿಕ್ಷಕರು ಹಲವು ಪಾಠಗಳನ್ನು ಕಲಿಯಬಹುದಾಗಿದೆ. ಈ ವಿಷಯದಲ್ಲಿ ನಾನು ಕಂಡುಕೊಂಡಂತಹ ಕೆಲವು ಅಂಶಗಳು ಇಂತಿವೆ:

    ಕ್ರಿಯಾಶೀಲ ಬೋಧನೆ: ಭಗವದ್ಗೀತೆಯನ್ನು ಯುದ್ಧಭೂಮಿ ಬಿಟ್ಟು ಬೇರೆ ಸ್ಥಳದಲ್ಲಿ, ಬೇರೆ ಸಮಯದಲ್ಲಿ ಹಾಗೂ ಬೇರೆ ರೀತಿಯಲ್ಲಿ ಬೋಧಿಸಿದ್ದರೆ, ಅಷ್ಟು ಪರಿಣಾಮಕಾರಿಯಾಗಲು ಸಾಧ್ಯವಿತ್ತೆ? ಯುದ್ಧಕ್ಕೆ ಸಂಪೂರ್ಣ ಸಿದ್ಧನಾಗಿಯೇ ಬಂದ ಅರ್ಜುನನು ಶತ್ರುಪಕ್ಷದಲ್ಲಿರುವವರನ್ನು ಸರಿಯಾಗಿ ನೋಡಲು ಸಾಧ್ಯವಾಗುವಂತೆ ಎರಡೂ ಸೇನೆಗಳ ಮಧ್ಯೆ ರಥವನ್ನು ನಿಲ್ಲಿಸುವಂತೆ ಶ್ರೀಕೃಷ್ಣನಿಗೆ ಆದೇಶಿಸುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನ ಪರಮಶತ್ರುಗಳಾದ ಕರ್ಣ-ದುರ್ಯೋಧನಾದಿಗಳು ಮಾತ್ರ ಕಾಣುವ ಸ್ಥಳದಲ್ಲಿ ರಥವನ್ನು ನಿಲ್ಲಿಸಬಹುದಿತ್ತು. ಆದರೆ, ಅರ್ಜುನನಿಗೆ ಪ್ರೀತಿಪಾತ್ರರಾದ ಭೀಷ್ಮ-ದ್ರೋಣರ ಎದುರಿಗೆ ರಥವನ್ನು ನಿಲ್ಲಿಸುತ್ತಾನೆ. ಇದರಿಂದ ಮೋಹವಶನಾದ ಅರ್ಜುನನು ವಿಚಲಿತನಾಗಿ ಯುದ್ಧದಿಂದಲೇ ಹಿಂಜರಿಯುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಈ ಹಿನ್ನೆಲೆಯಲ್ಲಿ ಕೃಷ್ಣಾರ್ಜುನರ ಸಂವಾದ ಆರಂಭಗೊಳ್ಳುತ್ತದೆ.

    ಹೀಗೆ, ಪಾಠವನ್ನು ಕಾರ್ಯೋಪಯೋಗಿಯಾಗಿ ಬೋಧಿಸಲು ಅನುಕೂಲ ವಾತಾವರಣವನ್ನು ಕೃಷ್ಣನು ಮೊದಲಿಗೆ ಸೃಷ್ಟಿಸುತ್ತಾನೆ. ನಮ್ಮ ಶಿಕ್ಷಣ ಪದ್ಧತಿಯನ್ನು ಒಮ್ಮೆ ಅವಲೋಕಿಸೋಣ. ನಮ್ಮ ಮಕ್ಕಳಿಗೆ ತರಗತಿಗಳು ನಡೆಯುವುದೆಲ್ಲಿ? ಕೇವಲ ಕೆಲ ಚಿತ್ರ-ಪದಗಳಿಂದ ಕೂಡಿದ ಪಠ್ಯಪುಸ್ತಕಗಳ ಮೂಲಕ, ಅನುಭವಾತ್ಮಕವಲ್ಲದ, ಹೊರ ಜಗತ್ತಿನ ಸಂಪರ್ಕವೇ ಇಲ್ಲದ ನಾಲ್ಕು ಗೋಡೆಗಳ ನಡುವೆ! ಕೇವಲ ಕಂಠಪಾಠದ ಮೇಲೆಯೇ ಅವಲಂಬಿತವಾಗಿರುವ ಈ ಪದ್ಧತಿ ಪ್ರಭಾವರಹಿತವಾಗಿದ್ದು, ಮಕ್ಕಳ ಸೃಜನಶೀಲತೆಗೆ ಮತ್ತು ಕಲಿಕಾ ಸ್ಪೂರ್ತಿಗೆ ಮಾರಕವಾಗಿದೆ.

    ಮೊದಲು ಆಲಿಸು, ನಂತರ ಬೋಧಿಸು: ಇನ್ನು ಅಧ್ಯಾಪಕರ ವಿಷಯಕ್ಕೆ ಬಂದರೆ, ಶ್ರೀಕೃಷ್ಣನ ಮೊದಲ ಪಾಠ ಮೊದಲು ಸರಿಯಾಗಿ ಆಲಿಸು, ಎಂಬುದು. ನಾವು ಸಾಧಾರಣವಾಗಿ ಪ್ರಶ್ನೆಗೆ ಉತ್ತರ ನೀಡುವ ಉದ್ದೇಶದಿಂದ ಮಾತ್ರ ಕೇಳಿಸಿಕೊಳ್ಳುತ್ತೇವೆಯೇ ಹೊರತು, ವಿದ್ಯಾರ್ಥಿಯ ಮನಸ್ಸನ್ನಾಗಲೀ ಅಥವಾ ಅವನ ನಿಜ ಸಮಸ್ಯೆಯನ್ನಾಗಲೀ ಅರ್ಥಮಾಡಿಕೊಳ್ಳುವ ಸಲುವಾಗಿ ಅಲ್ಲ. ಮೊದಲನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಪ್ರತಿಕ್ರಿ್ರುಸದೆ ಅರ್ಜುನನು ಹೇಳುವುದೆಲ್ಲವನ್ನೂ ಶಾಂತವಾಗಿ ಆಲಿಸುತ್ತಾನೆ. ಅರ್ಜುನ ತನ್ನೆಲ್ಲಾ ದುಗುಡದುಮ್ಮಾನಗಳನ್ನು ತೋಡಿಕೊಂಡು ರಥದಲ್ಲಿ ಕುಸಿದು ಮೌನಿಯಾದಾಗ ಮಾತ್ರವೇ, ಕೃಷ್ಣ ಮಾತನಾಡಲು ಪ್ರಾರಂಭಿಸುತ್ತಾನೆ. ಅವನ ಉತ್ತರವು ಎರಡನೆಯ ಅಧ್ಯಾಯವಾದ ಸಾಂಖ್ಯಯೋಗದಲ್ಲಿ ಪ್ರಾರಂಭವಾಗುತ್ತದೆ. ಅನೇಕ ಬಾರಿ ಅಧ್ಯಾಪಕರ ಆಲೋಚನೆ ಮತ್ತು ಗಮನ ಪಠ್ಯಕ್ರಮವನ್ನು ಪೂರ್ತಿಗೊಳಿಸುವ ಕಡೆಗೆ ಮಾತ್ರ ಇರುತ್ತದೆಯೇ ಹೊರತು, ವಿದ್ಯಾರ್ಥಿಗಳ ಸಂಶಯಗಳನ್ನು ಪರಿಹರಿಸುವ ಅಥವಾ ಅವರ ದೃಷ್ಟಿಕೋನವನ್ನು ಅರಿಯುವ ಕಡೆಗೆ ಇರುವುದಿಲ್ಲ. ಅದಕ್ಕೆ ಅಗತ್ಯವಾದ ತಾಳ್ಮೆಯಾಗಲೀ, ವ್ಯವಧಾನವಾಗಲೀ ಅವರಲ್ಲಿ ಇರುವುದಿಲ್ಲ. ಇಂತಹ ಅಸಹನಶೀಲ ಬೋಧಕರಿಗೆ ಕೃಷ್ಣನ ಬೋಧನಾ ಕ್ರಮವು ಆದರ್ಶವಾಗಿದೆಯಲ್ಲವೇ?

    ಪರಿಚಯಿಸು, ವಿವರಿಸು, ಪುನರಾವರ್ತಿಸು: ತರಗತಿಯಲ್ಲಿ ಮಾಡಬೇಕಾದ ಪಾಠದ ಸಂಕ್ಷಿಪ್ತ ಪರಿಚಯವನ್ನು ಮೊದಲು ನೀಡಿ, ನಂತರ ಅದನ್ನು ವಿವರಿಸಿ, ಕೊನೆಗೆ ಸಂಕ್ಷಿಪ್ತವಾಗಿ ಪುನರಾವರ್ತಿಸುವುದು ಉತ್ತಮ ಅಧ್ಯಾಪಕನ ಲಕ್ಷಣ. ಮೊದಲಿಗೆ, ಅಂದು ವಿದ್ಯಾರ್ಥಿಗಳು ಕಲಿಯಬೇಕಾದ ವಿಷಯಗಳನ್ನು ಪಟ್ಟಿಮಾಡಿ ಅವುಗಳ ಕಲಿಕಾ ಫಲಿತಾಂಶವನ್ನು ಶಿಕ್ಷಕನು ತಿಳಿಸಬೇಕು. ನಂತರ, ಆ ವಿಷಯವನ್ನು ಸರಿಯಾಗಿ ವಿವರಿಸಿ, ತರಗತಿಯ ಕೊನೆಯಲ್ಲಿ ಅದನ್ನು ಯೋಗ್ಯ ರೀತಿಯಲ್ಲಿ ಪುನರಾವರ್ತಿಸಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅನುಸರಿಸಿದ್ದು ಈ ವಿಧಾನವನ್ನೇ. ತಾನು ಭಗವದ್ಗೀತೆಯಲ್ಲಿ ಬೋಧಿಸಬಯಸಿರುವ ಎಲ್ಲಾ ವಿಷಯಗಳ ಪರಿಚಯವನ್ನು ಎರಡನೆಯ ಅಧ್ಯಾಯವಾದ ಸಾಂಖ್ಯಯೋಗದಲ್ಲಿ ನೀಡುತ್ತಾನೆ. ಅಲ್ಲದೆ, ಈ ಬೋಧನೆಯ ಪರಿಣಾಮವಾಗಿ ವ್ಯಕ್ತಿಯು ಸ್ಥಿತಪ್ರಜ್ಞನಾಗುವ ಪ್ರಯೋಜನವನ್ನೂ ಮನದಟ್ಟಾಗುವಂತೆ ಕೃಷ್ಣನು ತಿಳಿಸುತ್ತಾನೆ. ಮೂರನೆಯ ಅಧ್ಯಾಯದಿಂದ ಹದಿನೇಳನೆಯ ಅಧ್ಯಾಯದವರೆಗೆ ವಿವಿಧ ಯೋಗಗಳ ಬಗ್ಗೆ ಅರ್ಜುನನಿಗೆ ವಿವರವಾಗಿ ಬೋಧಿಸುತ್ತಾನೆ. ಕೊನೆಯ ಅಧ್ಯಾಯವಾದ ಮೋಕ್ಷಸಂನ್ಯಾಸ ಯೋಗದಲ್ಲಿ ಸವೋತ್ತಮ ಗುರುವಾಗಿ ಶ್ರೀಕೃಷ್ಣನು ತಾನು ಬೋಧಿಸಿದ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ಪುನರಾವರ್ತಿಸುತ್ತಾನೆ.

    ಸ್ವಗತ ಅಥವಾ ಏಕಾಲಾಪವಾಗದೆ ಸಂವಾದವಾಗಬೇಕು: ಭಗವದ್ಗೀತೆಯೆಂದರೆ ಭಗವಂತನ ಗೀತೆ. ಆದರೆ, ಅದು ಕೇವಲ ಭಗವಾನ್ ಶ್ರೀಕೃಷ್ಣನ ಸ್ವಗತ ಬೋಧನೆಯಾಗಿಲ್ಲ. ಬದಲಿಗೆ, ಅದು ಪ್ರಶ್ನೋತ್ತರ ರೂಪದಲ್ಲಿದ್ದು ಒಂದು ಸಂವಾದವಾಗಿದೆ. ಇದರಲ್ಲಿ ಅತ್ಯುತ್ತಮ ಅಧ್ಯಾಪಕನಾದ ಶ್ರೀಕೃಷ್ಣನು ಶಿಷ್ಯನಾದ ಅರ್ಜುನನಲ್ಲಿ ಕುತೂಹಲವನ್ನು ಕೆರಳಿಸುವುದು ಮಾತ್ರವಲ್ಲದೆ, ತಾಳ್ಮೆಯಿಂದ ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವುದನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಮಂದಮತಿ ಶಿಷ್ಯರೊಂದಿಗೆ ಅಧ್ಯಾಪಕರು ತಾಳ್ಮೆ ಕಳೆದುಕೊಳ್ಳುವುದು ಸಹಜ. ಆದರೆ ಇಲ್ಲಿ ಕೃಷ್ಣನು ಬೋಧನೆಯ ಮಧ್ಯದಲ್ಲಿ ಕೂಡ, ಅರ್ಜುನನಿಗೆ ಸಂದೇಹಗಳನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸುತ್ತಾನೆ. ಇಲ್ಲಿ ಸಂದೇಹನಿವಾರಣೆಯನ್ನು ಪಾಠದ ಅಂತ್ಯಕ್ಕೆ ಉಳಿಸಿಕೊಳ್ಳದೆ, ಅಲ್ಲಲ್ಲಿಯೇ ಪರಿಹಾರಗಳನ್ನು ನೀಡಲಾಗಿದೆ. ಇಂತಹ ಆದರ್ಶ ಬೋಧನೆಯು ವಿದ್ಯಾರ್ಥಿಗಳಿಗೆ ಮುಂದಿನ ವಿಷಯಗಳನ್ನು ಇನ್ನೂ ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು, ಕೃಷ್ಣನು ಉತ್ತಮ ಅಧ್ಯಾಪಕನಾಗಿ ಅರ್ಜುನನಿಗೆ ಪ್ರಶ್ನೆಗಳನ್ನು ಕೇಳುವ ವಾತಾವರಣ ನಿರ್ವಿುಸಿರುವುದನ್ನು ತೋರಿಸುತ್ತದೆ.

    ವಾಕ್ಯಗಳು ಸರಳವಾಗಿರಬೇಕು: ಗೀತೆಯು ಓದುಗರಿಗೆ ಸುಲಲಿತವಾಗಿ ಅರ್ಥ ಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಸರಳ ಛಂದೋಬದ್ಧ ಕಾವ್ಯರೂಪದಲ್ಲಿದೆ. ದೀರ್ಘ, ಕ್ಲಿಷ್ಟಕರ ವಾಕ್ಯಗಳು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಕೊಳ್ಳಲು ಕಷ್ಟಕರ. ಆದರೆ ಭಗವದ್ಗೀತೆಯು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಕೊಳ್ಳಲು ಮತ್ತು ಜ್ಞಾಪಕದಲ್ಲಿಟ್ಟುಕೊಳ್ಳಲು ಸುಲಭವಾಗುವಂತೆ, ತಲಾ ಎಂಟು ಉಚ್ಚಾರಾಂಶವಿರುವ ನಾಲ್ಕು ಪಾದಗಳನ್ನೊಳಗೊಂಡ ಅನುಷ್ಟುಪ್ ಛಂದಸ್ಸಿನಲ್ಲಿದೆ. ಹೀಗೆ ಅಧ್ಯಾಪಕರು ಸರಳ ವಾಕ್ಯಗಳನ್ನು ಉಪಯೋಗಿಸಿದರೆ, ಕೆಳಗಿನ ತರಗತಿಗಳ ವಿದ್ಯಾರ್ಥಿಗಳೂ ಕೂಡ ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಹಾಯಮಾಡುತ್ತದೆ.

    ಪ್ರತ್ಯಾದಾನ (Feedback): ಬೋಧನೆಯ ಅಂತ್ಯದಲ್ಲಿ ಕೃಷ್ಣನು ಅರ್ಜುನನನ್ನು, ‘ನಿನ್ನ ಎಲ್ಲಾ ಸಂದೇಹಗಳು ನಿವಾರಣೆಯಾಗಿವೆಯೇ? ನಿನ್ನ ಭ್ರಮೆ ದೂರವಾಗಿದೆಯೇ?’ ಎಂದು ಶಿಷ್ಯವಾತ್ಸಲ್ಯದಿಂದ ಕೇಳುತ್ತಾನೆ. ಇದು ಅಧ್ಯಾಪಕನು ತನ್ನ ಅಧ್ಯಾಪನದ ಬಗ್ಗೆ ಶಿಷ್ಯನ ಪ್ರತ್ಯಾದಾನವನ್ನು ತಿಳಿದುಕೊಳ್ಳುವ ವಿಧಾನ. ‘ನಿನ್ನ ಬೋಧನೆ ಹಾಗೂ ಅನುಗ್ರಹಗಳಿಂದಾಗಿ ನನ್ನ ಮೋಹವು ನಾಶವಾಗಿದೆ. ಧರ್ವಧರ್ಮಗಳ ಸ್ಮರಣೆಯುಂಟಾಗಿದೆ. ನನ್ನ ಸಂದೇಹಗಳೆಲ್ಲವೂ ನಿವಾರಣೆಯಾಗಿ ಮನಸ್ಸು ಸ್ಥಿರವಾಗಿದೆ. ನಿನ್ನ ವಚನವನ್ನು ಶಿರಸಾವಹಿಸಿ ಪಾಲಿಸುತ್ತೇನೆ’ ಎಂದು ಅರ್ಜುನನು ಉತ್ತರಿಸುತ್ತಾನೆ. ಹೆಚ್ಚಿನ ಅಧ್ಯಾಪಕರಿಗೆ ತಮ್ಮ ಅಧ್ಯಾಪನದ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ತಿಳಿದುಕೊಳ್ಳುವ ವ್ಯವಧಾನವಾಗಲೀ, ಆಸಕ್ತಿಯಾಗಲೀ ಇರುವುದಿಲ್ಲ. ಕೊನೆಯಲ್ಲಿ ಪರೀಕ್ಷಾಫಲಿತಾಂಶಗಳು ಹೊರಬರುವ ತನಕ, ತಾವು ಕಲಿಸಿರುವುದು ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೆಂಬ ತಪ್ಪು ಭ್ರಮೆಯಲ್ಲಿಯೇ ಇರುತ್ತಾರೆ.

    ವಿದ್ಯಾರ್ಥಿಗಳಿಗೆ ಹೊಣೆಗಾರಿಕೆ ಮನವರಿಕೆ: ಹೇಳಿಕೊಟ್ಟ ಪಾಠವನ್ನು ಮನನ -ಪುನರಾವರ್ತನೆಗಳ ಮೂಲಕ ದೃಢಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿ, ನೀಡಿದ ದೈನಂದಿನ ಮನೆಕೆಲಸಗಳನ್ನು ಪರೀಕ್ಷಿಸುವುದು- ಇದು ಗೀತೆಯಿಂದ ನಾವು ಕಲಿಯಬಹುದಾದ ಮತ್ತೊಂದು ಪಾಠ. ಈ ವಿಷಯವು ಕೃಷ್ಣನು ಅರ್ಜುನನಿಗೆ, ‘ನಾನು ನಿನಗೆ ಉತ್ಕೃಷ್ಟ ಸತ್ಯವನ್ನು ಬೋಧಿಸಿದ್ದೇನೆ. ನೀನು ಅದನ್ನು ಸರಿಯಾಗಿ ಮನನ ಮಾಡಿ, ನಿನಗೆ ಯಾವುದು ಸರಿಯೆಂದು ತೋರುವುದೋ, ಅದೇ ರೀತಿಯಲ್ಲಿ ನಡೆದುಕೊಳ್ಳಬಹುದು’ ಎಂದು ಹೇಳುವಲ್ಲಿ ವ್ಯಕ್ತವಾಗುತ್ತದೆ. ಕೃಷ್ಣನು ಅರ್ಜುನನಿಗೆ ತಾನು ಕಲಿಸಿರುವ ಪಾಠವನ್ನು ಆಚರಿಸಿ ಅದರ ಲಾಭವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಾನೆಯೇ ಹೊರತು, ಅವನ ಮೇಲೆ ಯಾವುದೇ ಒತ್ತಾಯ ಹೇರುವುದಿಲ್ಲ. ಅಧ್ಯಾಪಕರು ಶಿಕ್ಷೆ ಅಥವಾ ಒತ್ತಾಯಗಳ ಮೂಲಕ ವಿದ್ಯಾರ್ಥಿಗಳನ್ನು ಬಲವಂತಪಡಿಸದೇ, ಕಲಿತ ಪಾಠಗಳನ್ನು ಮನನದ ಮೂಲಕ ದೃಢಮಾಡಿಕೊಂಡು ಆಚರಿಸುವಂತೆ ಪ್ರೋತ್ಸಾಹಿಸಬೇಕು.

    ಭಗವದ್ಗೀತೆಯಿಂದ ಕಲಿಯಬೇಕಾದ ಇನ್ನೊಂದು ಮುಖ್ಯ ಪಾಠವೆಂದರೆ, ಒಂದು ವಿಷಯವನ್ನು ಉಪದೇಶಿಸುವ ಮೊದಲು, ನಾವು ಅದನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಸ್ವತಃ ಆಚರಣೆಗೆ ತರಬೇಕು. ಕೃಷ್ಣನು ಗೀತೆಯಲ್ಲಿ ಹೇಳಿದ ವಿಷಯಗಳನ್ನು ತನ್ನ ಜೀವನದಲ್ಲಿ ಅನುಷ್ಠಾನ ಮಾಡುತ್ತಿದ್ದುದರಿಂದ ಅವನಿಗೆ ಗೀತೆಯನ್ನು ಬೋಧಿಸುವ ಅಧಿಕಾರ ಬಂದಿತು. ನಮ್ಮ ಸಂಸ್ಕೃತಿಯಲ್ಲಿ ಅಧ್ಯಾಪಕರನ್ನು ‘ಆಚಾರ್ಯ’ರೆಂದು ಕರೆಯುತ್ತಾರೆ. ಆಚರತಿ ಇತಿ ಆಚಾರ್ಯು – ಯಾರು ಆಚರಿಸುತ್ತಾರೆಯೋ ಅವರೇ ಆಚಾರ್ಯರು. ಇದು ಕೇವಲ ವಿಷಯಗಳ ಜ್ಞಾನಕ್ಕೆ ಸೀಮಿತವಾಗದೇ, ಅಧ್ಯಾಪಕನ ವೈಯಕ್ತಿಕ ಜೀವನದ ನೈತಿಕ ನಡವಳಿಕೆಗೂ ಅನ್ವಯವಾಗುತ್ತದೆ. ಆದ್ದರಿಂದ ತರಗತಿಯ ಒಳಗೂ ಹೊರಗೂ, ವೈಯಕ್ತಿಕ ಸದ್ವರ್ತನೆಯ ಮೂಲಕ ವಿದ್ಯಾರ್ಥಿಗಳ ಸದ್ವರ್ತನೆಗೆ ಸ್ಪೂರ್ತಿಯಾಗುವುದು ಅಧ್ಯಾಪಕನ ಕರ್ತವ್ಯವಾಗಿದೆ.

    ಇಂತಹ ಅಪ್ರತಿಮ ಜ್ಞಾನಧಾರೆಯನ್ನು ನಮಗೆಲ್ಲರಿಗೂ ಲಭ್ಯವಾಗುವಂತೆ ಮಾಡಿದ, ಗುರು-ಶಿಷ್ಯದ್ವಯರಾದ ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರಿಗೆ ನಮ್ಮೆಲ್ಲರ ಕೃತಜ್ಞತೆಗಳನ್ನು ಸಲ್ಲಿಸೋಣ!

    (ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲ ಸಮೂಹ ಸಂಸ್ಥೆಗಳ ಮತ್ತು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂರು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ಕಳೆದ ಗೀತಾ ಜಯಂತಿಯ ದಿನದಿಂದ ಈ ವರ್ಷದ ಗೀತಾ ಜಯಂತಿಯವರೆಗೆ ಒಂದು ವರ್ಷದಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಕಲಿಯಲು ಪ್ರಯತ್ನಿಸಿದ್ದಾರೆ. ಅಲ್ಲದೆ ಗೀತೆಯ ಎಲ್ಲಾ ಅಧ್ಯಾಯಗಳ ಸಾರಸರ್ವಸ್ವವನ್ನು ಬೋಧಿಸಿ ಅದರ ಧ್ವನಿ ಮುದ್ರಣವನ್ನು ‘ಸಾಯಿ ವೃಂದ’ ಯೂಟ್ಯೂಬ್ ಚಾನೆಲ್​ನಲ್ಲಿ ಅಳವಡಿಸಲಾಗಿದೆ)

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

    ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts