More

    ವಿಜಯಪುರ ವಿಭಜನೆ ಬಗ್ಗೆ ಉಸ್ತುವಾರಿ ಸಚಿವರ ನಿಲುವೇನು? ಬೆಂಕಿ ಹಚ್ಚುವ ಕೆಲಸ ಮಾಡುತ್ತಿರೋದು ಯಾರು? ಗಿಮಿಕ್ ಕೈ ಬಿಡಿ ಎಂದು ಅರುಣ ಶಹಾಪುರ ಹೇಳಿದ್ದು ಯಾರಿಗೆ?

    ವಿಜಯಪುರ: ಇಂಡಿ ಪ್ರತ್ಯೇಕ ಜಿಲ್ಲೆಗೆ ಸಂಬಂಧಿಸಿದಂತೆ ಸಿಂದಗಿಯಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಡಿ.29ರಂದು ಸಭೆ ಕರೆದಿರುವ ತಾಲೂಕಾಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಜಿಲ್ಲೆಯ ವಿಭಜನೆ ಬಗ್ಗೆ ಮೊದಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.

    ಜಿಲ್ಲೆಯಲ್ಲಿ ಮಾಡಲು ಬೇಕಾದಷ್ಟು ಕೆಲಸ-ಕಾರ್ಯಗಳಿವೆ. ನೀರಾವರಿ ಯೋಜನೆಗಳಿವೆ. ಅಧಿಕಾರಕ್ಕೆ ಬಂದು ವರ್ಷ ಗತಿಸಿದರೂ ಈವರೆಗೂ ಒಂದೇ ಒಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿಲ್ಲ. ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ ಒದಗಿಸಲಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ವಿಭಜನೆ ರಾಜಕಾರಣ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಮುಂದೊಂದು ದಿನ ಇದು ಕರ್ನಾಟಕ ಸರ್ಕಾರಕ್ಕೆ ಮುಳುವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

    ಜಿಲ್ಲೆಯ ವಿಭಜನೆಯ ಪ್ರಸ್ತುತತೆ ಏನು? ಯಾವ ಮಾನದಂಡ ಆಧರಿಸಿ ಪ್ರತ್ಯೇಕ ಜಿಲ್ಲೆ ರಚಿಸಲಾಗುತ್ತಿದೆ. ಸಭೆ ಕರೆಯುವ ಮೊದಲು, ತೀರ್ಮಾನ ಕೈಗೊಳ್ಳುವ ಮೊದಲು ಸಂಬಂಧಿಸಿದ ಎಲ್ಲ ತಾಲೂಕುಗಳ ಅಭಿಪ್ರಾಯ ಪಡೆಯಬೇಕು. ಅದನ್ನು ಬಿಟ್ಟು ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದರು.

    ಇಂಡಿ ಜಿಲ್ಲೆಯಾಗುವ ಕಾಲ ಪಕ್ವವಾಗಿಲ್ಲ. ಈಗಿರುವ ಜಿಲ್ಲೆಯನ್ನು ವಿಭಜಿಸುವುದು ಮಕ್ಕಳಾಟವಲ್ಲ. ಸದ್ಯ ಯಾವುದೇ ಅಭಿವೃದ್ಧಿ ಕಾರ್ಯಗಳಾಗದ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಅದರಲ್ಲೂ ಎಂ.ಬಿ. ಪಾಟೀಲರೊಬ್ಬರು ಹೇಳಿದ್ದೇ ಆಗುತ್ತಿರುವ ಕಾರಣ ಇನ್ನುಳಿದ ಶಾಸಕರು ಹತಾಶರಾಗಿದ್ದಾರೆ. ಇಂಡಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲವೆಂದು ಅಲ್ಲಿನ ಶಾಸಕರು ಇಂಥ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕೀಯ ಹತಾಶೆಯಿಂದ ಪ್ರತ್ಯೇಕ ಜಿಲ್ಲೆ ಮಾಡಲು ಹೊರಟಿದ್ದಾರೆ. ಈ ಪ್ರತ್ಯೇಕ ಜಿಲ್ಲೆಗೆ ಸಂಬಂಧಿಸಿದಂತೆ ಮೊದಲು ನಿಮ್ಮ ಸರ್ಕಾರದಲ್ಲಿಯೇ ಏಕಾಭಿಪ್ರಾಯಕ್ಕೆ ಬನ್ನಿ. ನಿಮ್ಮ ನಿಲುವು ಸ್ಪಷ್ಟಪಡಿಸಿ. ಅಲ್ಲಿಯವರೆಗೂ ಯಾವುದೇ ಸಭೆ ಕರೆಯಕೂಡದು. ಕೂಡಲೇ ಡಿ. 29ರಂದು ಸಿಂದಗಿಯಲ್ಲಿ ಕರೆದಿರುವ ಸಭೆ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

    ಬಿಜೆಪಿ ಮಾಧ್ಯಮ ಪ್ರಮುಖ ವಿಜಯಕುಮಾರ ಜೋಶಿ, ರಾಕೇಶ ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts