More

    ಬಿಜೆಪಿಯವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ? ; ಸಿಎಂ ಪ್ರಶ್ನೆ

    ಬೆಂಗಳೂರು: ಬಿಜೆಪಿಯವರು ಹಿಂದುತ್ವದ ಅಮಲು ಬಿತ್ತುತ್ತಾರೆ. ಅವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
    ಪಕ್ಷದ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಈ ದೇಶದ ಬಹುತ್ವ ಸಂಸ್ಕೃತಿ ಇರುವ ದೇಶ. ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳಿವೆ. 143 ಕೋಟಿ ಜನ ಸಂಖ್ಯೆ ಇದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ‘ಸಬ್ ಕಾ ಸಾಥ್…’ ಎಂದು ಒಟ್ಟಿಗೆ ತೆಗೆದುಕೊಂಡು ಹೋಗಬೇಕು, ‘ಸಬ್‌ಕಾ ವಿಕಾಸ…’ ಆಗಬೇಕಲ್ಲವೇ? ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ, ಪಾರ್ಸಿ, ಯಹೂದಿಗಳೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು, ಎಲ್ಲರೂ ಮಾನವರು. ಇದರಲ್ಲಿ ನಂಬಿಕೆ ಇಟ್ಟುಕೊಂಡಿದ್ದು ಕಾಂಗ್ರೆಸ್ ಎಂದರು.
    ದೇಶದಲ್ಲಿ ಬದಲಾವಣೆ ತರಬೇಕು, ಸಮ ಸಮಾಜ ನಿರ್ಮಾಣ ಆಗಬೇಕು. ಜಾತಿ, ವರ್ಗ ವ್ಯವಸ್ಥೆ ಹೋಗಬೇಕು. ಅದು ಕಾಂಗ್ರೆಸ್ ಗುರಿ, ಅದರಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ನಂಬಿಕೆ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದು ಹೇಳಿದರು.
    ಬಿಜೆಪಿಯವರು ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ತರುತ್ತೇವೆಂದು ಹೊರಟರು. ಈ ವರ್ಷವೇ ಜಾರಿಗೆ ಕೊಡಬಹುದಿತ್ತು, ಏಕೆ ಮಾಡಲಿಲ್ಲ? ಏಕೆಂದರೆ ಅವರಿಗೆ ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇಲ್ಲ. ಬದ್ಧತೆ ಇರುವುದು ಕಾಂಗ್ರೆಸ್‌ಗೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಕೊಡುತ್ತೇವೆ ಎಂದರು.
    ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದಿದ್ದರು. ನರೇಂದ್ರ ಮೋದಿ, ಪ್ಲೀಸ್ ಕೇಳಿಸಿಕೊಳ್ಳಿ, ನಾವು ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ, ರಾಜ್ಯದ ಆರ್ಥಿಕತೆ ಸುಭದ್ರವಾಗಿದೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
    ಬಿಜೆಪಿ, ಜನ ಸಂಘ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಒಬ್ಬೇ ಒಬ್ಬರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಬ್ರಿಟಿಷರ ಅವಧಿಯಲ್ಲೇ ಆರ್‌ಎಸ್‌ಎಸ್ ಹುಟ್ಟಿತ್ತು. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಒಂದೇ ಒಂದು ದಿನವೂ ಇವರು ಭಾಗವಹಿಸಲಿಲ್ಲ. ಆದ್ದರಿಂದ ಬಿಜೆಪಿಯ ಡೋಗೀತನವನ್ನು ಅರ್ಥ ಮಾಡಿಕೊಂಡು ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
    ಇಂಟರ್ ನೆಟ್ ದೇಶದ ತುಂಬ ವಿಸ್ತರಿಸಲು ಅಡಿಪಾಯ ಹಾಕಿದವರು ರಾಜೀವ್ ಗಾಂಧಿ. ಬಿಜೆಪಿಯವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
    ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಣ್ಯ ಸಚಿವ ಈಶ್ವರ್ ಖಂಡ್ರೆ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವೆ ರಾಣಿ ಸತೀಶ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts