More

    ನೀರಾವರಿಯಲ್ಲಿ ಬೆಳೆದ ತಿಮಿಂಗಲ

    ಹುಬ್ಬಳ್ಳಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ (ಇಇ) ದೇವರಾಜ ಕಲ್ಮೇಶ ಶಿಗ್ಗಾವಿ ಅವರಿಗೆ ಸಂಬಂಧಿಸಿದ 3 ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ದಾಳಿ ನಡೆಸಿ, ಭಾರಿ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಆಸ್ತಿ ದಾಖಲೆಗಳನ್ನು ಪತ್ತೆ ಮಾಡಿದೆ.

    ದೇವರಾಜ ಶಿಗ್ಗಾವಿ ಈ ಹಿಂದೆ ಧಾರವಾಡದ ಸಣ್ಣ ನೀರಾವರಿ ಇಲಾಖೆಯಲ್ಲಿ ಇಇ ಹುದ್ದೆಯಲ್ಲಿದ್ದರು. ಅಲ್ಲಿಂದ 2 ತಿಂಗಳ ಹಿಂದೆಯೇ ವರ್ಗಾವಣೆಯಾಗಿದ್ದು, ಇನ್ನೂ ಸ್ಥಳ ನಿಗದಿಯಾಗಿರಲಿಲ್ಲ. ಹುಬ್ಬಳ್ಳಿ ಶಿರೂರ ಪಾರ್ಕ್ ರಾಜೀವ ನಗರದಲ್ಲಿ ಪತ್ನಿಯ ಕಿರಿಯ ಸಹೋದರ ಕೃಷ್ಣ ಭೀಮಪ್ಪ ಗಾಡಿವಡ್ಡರ ಹೆಸರಿನಲ್ಲಿರುವ 3 ಅಂತಸ್ತಿನ ಮನೆಯಲ್ಲಿ ದೇವರಾಜ ಕುಟುಂಬ ವಾಸವಿದೆ.

    ರಾಜೀವ ನಗರದ ಮನೆ, ದೇವರಾಜ ಶಿಗ್ಗಾವಿ ಪತ್ನಿಯ ತಂದೆ ಭೀಮಪ್ಪ ರಾಮಪ್ಪ ಗಾಡಿವಡ್ಡರ ಹೆಸರಲ್ಲಿರುವ ಬೆಂಗೇರಿ ಬಾಲಾಜಿ ನಗರದ 2 ಅಂತಸ್ತಿನ ‘ಶ್ರೀರಾಮ ನಿವಾಸ’ ಹಾಗೂ ದೇವರಾಜ ತಾಯಿ ಕುಸುಮಾವತಿ ಕಲ್ಮೇಶ ಶಿಗ್ಗಾವಿ ಹೆಸರಲ್ಲಿರುವ ಕೋಟಿಲಿಂಗ ನಗರದ ಮಲ್ಲಿಕಾರ್ಜುನ ಉದ್ಯಾನ ಬಳಿಯ 2 ಅಂತಸ್ತಿನ ಮನೆ ಮೇಲೆ ಬೆಳಗಾವಿ ಉತ್ತರ ವಲಯದ ಎಸಿಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

    ಆರೋಪಿತ ಅಧಿಕಾರಿಯ ಮಾವ ಭೀಮಪ್ಪ ಗಾಡಿವಡ್ಡರ ಹೆಸರಲ್ಲಿ ಸಹ ಒಂದು ಬ್ಯಾಂಕ್ ಲಾಕರ್ ಇದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಎಲ್ಲ ಆಸ್ತಿಪಾಸ್ತಿಗಳ ಪರಿಶೀಲನೆ ಮುಂದುವರಿದಿದೆ.

    ಕಚೇರಿ ಮೇಲೂ ದಾಳಿ ನಡೆದಿತ್ತು

    ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಧಾರವಾಡದ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆ ವೇಳೆ ಸುಮಾರು 3 ಲಕ್ಷ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಆ ಕುರಿತ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

    ಅವರೇ ಎಬ್ಬಿಸಿದರು

    10ಕ್ಕೂ ಹೆಚ್ಚು ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ನಸುಕಿನ ಜಾವ 5.30ಕ್ಕೆ ದೇವರಾಜ ಮನೆ ಬಾಗಿಲು ತಟ್ಟಿದರು. ಮಲಗಿದ್ದವರನ್ನು ಎಬ್ಬಿಸಿ ತಪಾಸಣೆ ಕಾರ್ಯಾಚರಣೆ ಶುರು ಮಾಡಿದೆ. ಅನಿರೀಕ್ಷಿತ ದಾಳಿಯಿಂದಾಗಿ ಆರೋಪಿ ಕುಟುಂಬದವರು ಕೆಲವು ಕ್ಷಣ ತಬ್ಬಿಬ್ಬಾದರು ಎನ್ನಲಾಗಿದೆ.

    ಎಸ್​ಪಿ ಬಿ.ಎಸ್. ನೇಮಗೌಡ ತಂಡ

    ಎಸಿಬಿ ಬೆಳಗಾವಿ ವಲಯ ಎಸ್​ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಎಲ್. ವೇಣುಗೋಪಾಲ ನೇತೃತ್ವದ ತಂಡ ದಾಳಿ ನಡೆಸಿದೆ. ಬೆಳಗಾವಿ, ಧಾರವಾಡ, ಬಾಗಲಕೋಟೆಯ ಇನ್​ಸ್ಪೆಕ್ಟರ್​ಗಳಾದ ಮಂಜುನಾಥ ಹಿರೇಮಠ, ಪಿ.ಇ. ಕವಟಗಿ, ಬಿ.ಎ. ಜಾಧವ, ಎ.ಎಸ್. ಗುದಿಗೊಪ್ಪ, ಸಮೀರ ಮುಲ್ಲಾ, ಗಿರೀಶ ಮನಸೂರ ಹಾಗೂ ಸಿಬ್ಬಂದಿ ತಂಡದಲ್ಲಿದ್ದಾರೆ.

    ರಾತ್ರಿಯೂ ಶೋಧ: ದೇವರಾಜ ಶಿಗ್ಗಾವಿ ತಾಯಿ ಹೆಸರಲ್ಲಿ ಕೋಟಿಲಿಂಗ ನಗರದಲ್ಲಿದ್ದವರು ಮನೆಯಲ್ಲಿ ರಾತ್ರಿ 9ರವರೆಗೂ ಹಣ, ಒಡವೆ, ಆಸ್ತಿಯ ಶೋಧ ನಡೆಯಿತು. ಆರೋಪಿಯು ತನಿಖೆಗೆ ಸಹಕರಿಸಿದ್ದರಿಂದ ಪೊಲೀಸರು ಬಂಧಿಸಿಲ್ಲ.

    ಅರ್ಧ ಕೆಜಿ ಬಂಗಾರ, 26 ಎಕರೆ ಜಮೀನು

    ತಪಾಸಣೆ ವೇಳೆ ಭಾರೀ ಪ್ರಮಾಣದ ಆಸ್ತಿ ದಾಖಲೆಗಳು, ನಗದು, ಚಿನ್ನಾಭರಣ ಪತ್ತೆಯಾಗಿವೆ. ರಾಜೀವ ನಗರ ಮತ್ತು ಕೋಟಿಲಿಂಗ ನಗರದ 1.16 ಕೋಟಿ ರೂ. ಮೌಲ್ಯದ ಎರಡು ಮನೆಗಳು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಇನಾಂ ನೀರಲಗಿ ಮತ್ತು ಹುಬ್ಬಳ್ಳಿ ದೇವರಗುಡಿಹಾಳದಲ್ಲಿ 38 ಲಕ್ಷ ರೂ. ಮೌಲ್ಯದ 26 ಎಕರೆ ಜಮೀನು, ಅರ್ಧ ಕೆಜಿ ಚಿನ್ನಾಭರಣ, 4 ಕೆಜಿ ಬೆಳ್ಳಿ, 8 ಲಕ್ಷ ರೂ. ಮೌಲ್ಯದ ಎರಡು ವಾಹನ, 59.84 ಲಕ್ಷ ರೂ. ನಗದು, ಉಳಿತಾಯ ಹಾಗೂ ಠೇವಣಿ ಖಾತೆಗಳಲ್ಲಿ 39,00,000 ರೂ. ನಗದು, 3 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ 50 ಸಾವಿರ ರೂ. ಮೌಲ್ಯದ 2 ಖಾಲಿ ನಿವೇಶನಗಳ ದಾಖಲೆಗಳು ಲಭ್ಯವಾಗಿವೆ ಎಂದು ಎಸಿಬಿ ತಿಳಿಸಿದೆ.

    ಅರಣ್ಯಾಧಿಕಾರಿ ಕಚೇರಿ ಮೇಲೆ ದಾಳಿ

    ಧಾರವಾಡ: ಇಲ್ಲಿಯ ಸಾಮಾಜಿಕ ಅರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶ್ರೀನಿವಾಸ ಅವರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು. ಶ್ರೀನಿವಾಸ ಅವರು ಕಾರ್ಯ ನಿರ್ವಹಿಸುತ್ತಿರುವ ಕಚೇರಿ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿನ ನಿವಾಸಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದರು. ಕೆಲ ತಿಂಗಳ ಹಿಂದೆ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎಸಿಬಿ ಡಿಎಸ್​ಪಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿದೆ. ಶ್ರೀನಿವಾಸ ಅವರು ಕೆಲ ತಿಂಗಳಿಂದ ಹೊಸದಾಗಿ ಗಿಡ ನೆಡುವುದು, ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆಲ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆ ಕಲೆ ಹಾಕಿರುವುದಾಗಿ ತಿಳಿದುಬಂದಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts