More

    ಶುದ್ಧೀಕರಣ ಘಟಕ ಪೂರ್ಣ, ಉಳ್ಳಾಲದಲ್ಲಿ ಉದ್ಯಮಿಯ ಜಮೀನು ವೆಟ್‌ವೆಲ್ಗೆ ಕಂಟಕ

    ಅನ್ಸಾರ್ ಇನೋಳಿ ಉಳ್ಳಾಲ

    ನಗರಸಭಾ ವ್ಯಾಪ್ತಿಯಲ್ಲಿ ದ್ರವತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣದ ಹಲವು ವರ್ಷಗಳ ಕನಸು ಬಹುತೇಕ ಈಡೇರಿದೆ. ಆದರೆ ವೆಟ್‌ವೆಲ್ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನಿನ ಪಕ್ಕ ಉದ್ಯಮಿಯೋರ್ವರು ಜಮೀನು ಖರೀದಿಸಿದ್ದು, ವೆಟ್‌ವೆಲ್ಗೆ ಕಂಟಕವಾಗಿ ಕಾಡಿದೆ.

    ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 1.20 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಮೀನುಗಾರಿಕೆ ಪ್ರಧಾನವಾಗಿದ್ದು, ಪ್ರಸಿದ್ಧ ಕ್ಷೇತ್ರಗಳೂ ಇವೆ. ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೂ ಉಳ್ಳಾಲವೇ ಸಂಪರ್ಕ ಸೇತುವಾಗಿದೆ. ಸಾಕಷ್ಟು ವಸತಿ ವಸತಿ ಸಂಕೀರ್ಣಗಳೂ, ಮೀನಿನ ಕಾರ್ಖಾನೆಗಳು ಇಲ್ಲಿದ್ದು ಸ್ವಚ್ಛತೆ ಕಾಪಾಡುವುದೇ ಸವಾಲು. ನಗರಸಭೆಯಿಂದ ಒಣ ಮತ್ತು ಹಸಿತ್ಯಾಜ್ಯ ಸಂಗ್ರಹಿಸಿ ಮಂಗಳೂರಿಗೆ ರವಾನಿಸಲಾಗುತ್ತಿದ್ದು, ಈ ನಡುವೆ ಪೌರಾಯುಕ್ತ ರಾಯಪ್ಪ ಮುತುವರ್ಜಿಯಿಂದ ಹಸಿತ್ಯಾಜ್ಯ ಗೊಬ್ಬರವನ್ನಾಗಿಸಿ ಉಳ್ಳಾಲ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಪ್ರಕ್ರಿಯೆಯೂ ಆರಂಭಗೊಂಡಿದೆ.

    ದ್ರವತ್ಯಾಜ್ಯ ಘಟಕಕ್ಕೆ ಅಡ್ಡಗಾಲು!: ಇದೇ ವೇಳೆ ದ್ರವತ್ಯಾಜ್ಯ ಸಮಸ್ಯೆ ಪರಿಹಾರಕ್ಕೂ ಸರ್ಕಾರ ಮುಂದಾಗಿದ್ದು, ಕೋಡಿಯಲ್ಲಿ ದ್ರವತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಮನೆ, ಫ್ಲ್ಯಾಟ್‌ಗಳ ದ್ರವತ್ಯಾಜ್ಯ ಹರಿದು ನೇರವಾಗಿ ಕೋಡಿ ಘಟಕ ಸೇರದೆ ವೆಟ್‌ನಲ್ಲಿ ಸಂಗ್ರಹಗೊಳ್ಳಲಿದೆ. ಇದಕ್ಕಾಗಿ ಬಂಡಿಕೊಟ್ಯ, ಕೈಕೋ ಹಾಗೂ ಕೋಡಿಯಲ್ಲಿ ವೆಟ್‌ವೆಲ್ಗೆ ಜಾಗ ಗುರುತಿಸಲಾಗಿದ್ದು, ಬಂಡಿಕೊಟ್ಯ ಮತ್ತು ಕೋಡಿಯಲ್ಲಿ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಆದರೆ ಕೈಕೋದಲ್ಲಿ ಆರಂಭದಿಂದಲೇ ಸ್ಥಳೀಯರಿಂದ ತೊಂದರೆಯಾಗಿದ್ದು ಪ್ರಸಕ್ತ ಉದ್ಯಮಿ ಇಲ್ಲೇ ಜಮೀನು ಖರೀದಿಸಿದ್ದರಿಂದ ಸ್ಥಳೀಯರಿಗೆ ಇನ್ನಷ್ಟು ಬಲ ಬಂದಿದೆ. ಜತೆಗೆ ಕಾಮಗಾರಿ ರಾಜಕೀಯ ತಿರುವು ಪಡೆಯುವ ಲಕ್ಷಣ ಗೋಚರಿಸಿದೆ.

    ಹೀಗಿದೆ ದ್ರವತ್ಯಾಜ್ಯ ನಿರ್ವಹಣೆ: ಮನೆ, ವಸತಿ ಸಂಕೀರ್ಣ, ಕಾರ್ಖಾನೆ, ಹೋಟೆಲ್ ಹಾಗೂ ಇತರ ಮೂಲಗಳಿಂದ ಶೌಚಗೃಹದಿಂದ ಸಂಗ್ರಹವಾಗುವ ದ್ರವತ್ಯಾಜ್ಯ ಮೂರು ವೆಟ್‌ವೆಲ್ಗಳಿಗೆ ಬಂದು ಸೇರುತ್ತದೆ. ಅಲ್ಲಿಂದ ಪಂಪ್ ಮೂಲಕ ಕೋಡಿಯಲ್ಲಿರುವ ಮುಖ್ಯ ಘಟಕಕ್ಕೆ ಸೇರಿಸಲಾಗುತ್ತದೆ. ಇಲ್ಲಿರುವ ಬೃಹತ್ ಘಟದ ಎರಡು ಭಾಗದಲ್ಲಿ ನೀರು ಶುದ್ಧೀಕರಣಗೊಳ್ಳಲಿದೆ. ಇದಕ್ಕಾಗಿ 40 ಎಂ.ಎಂ.ನ ಜಲ್ಲಿ ಹಾಸಿ ಅದರ ಮೇಲೆ ಗೋಣಿಚೀಲಗಳನ್ನು ಹಾಕಿ ಗೊಬ್ಬರ ಉತ್ಪತ್ತಿ ಮಾಡಲಾಗುತ್ತದೆ. ಅದರ ಮೇಲ್ಭಾಗ ಸಣ್ಣಗಿನ ಕೆಂಪು ಕಲ್ಲುಗಳನ್ನು ಹಾಸಿ ಮತ್ತೆ ಗೋಣಿ ಚೀಲಗಳನ್ನು ಅಳವಡಿಸಿ ಗೊಬ್ಬರ ಉತ್ಪತ್ತಿ ಮಾಡಲಾಗುತ್ತದೆ. ಮೇಲ್ಭಾಗದಲ್ಲಿ ಮತ್ತೆ ಕೆಂಪು ಕಲ್ಲು, ಜಲ್ಲಿ ಹಾಸಲಾಗುತ್ತದೆ. ಇದರ ಮೇಲೆ ಉದ್ಯಾನವನ ನಿರ್ಮಾಣ ಮಾಡಲಾಗುತ್ತದೆ. ಹೀಗೆ ನೀರು ಶುದ್ಧೀಕರಣಗೊಂಡು ಉದ್ಯಾನವನಕ್ಕೆ ಬಳಕೆಯಾಗುತ್ತದೆ. ಉಳಿದ ನೀರು ನದಿ ಸೇರುವಂತೆ ಮಾಡಲಾಗುತ್ತದೆ. ನದಿಗೆ ಸೇರುವ ನೀರೂ ಶುದ್ಧವಾಗಿರುವುದರಿಂದ ಯಾವುದೇ ದುರ್ವಾಸನೆಯಾಗಲಿ, ಸಾರ್ವಜನಿಕರಿಗೆ ಸಮಸ್ಯೆಯಾಗಲೀ ಇಲ್ಲ ಎನ್ನುತ್ತಾರೆ ತಜ್ಞರು.

    ಕೈಕೋ ಮತ್ತು ಕೋಡಿಯಲ್ಲಿ ಘಟಕ ನಿರ್ಮಾಣಕ್ಕೆ ಸ್ಥಳೀಯರಿಂದ ಅಸಮಾಧಾನ ಇದೆ. ಅಲ್ಲಿ ಘಟಕ ನಿರ್ಮಿಸದಂತೆ ಜಿಲ್ಲಾಧಿಕಾರಿಗೆ ಮನವಿಯನ್ನೂ ನೀಡಿದ್ದರು. ಆದರೆ ಇದೊಂದು ಮಾದರಿ ಯೋಜನೆ ಎಂದು ತಿಳಿಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು, ಮನವಿ ಸಲ್ಲಿಸಲು ಬಂದವರಿಗೆ ಸಮಜಾಯಿಷಿ ನೀಡಿದ್ದಲ್ಲದೆ ನಾಲ್ಕೇ ದಿನಗಳಲ್ಲಿ ಕಾಮಗಾರಿ ಆರಂಭಿಸಿದ್ದರು.

    ಒಳಚರಂಡಿ ಸಮಸ್ಯೆಗೂ ಮುಕ್ತಿ: ಒಳಚರಂಡಿ ಸಮಸ್ಯೆಗೂ ಪರಿಹಾರ ದ್ರವತ್ಯಾಜ್ಯ ಶುದ್ಧೀಕರಣ ಘಟಕದ ಕಾಮಗಾರಿ ಪೂರ್ಣಗೊಂಡರೆ ಹಲವಾರು ವರ್ಷಗಳಿಂದ ಕುಂಟುತ್ತ, ರಸ್ತೆಗಳಿಗೂ ಸಮಸ್ಯೆ ನೀಡುತ್ತಿರುವ ಒಳಚರಂಡಿ ಸಮಸ್ಯೆಗೂ ಮುಕ್ತಿ ಸಿಗಲಿದೆ. ಎಡಿಬಿ ಯೋಜನೆ ಅನುದಾನದಲ್ಲಿ ಉಳ್ಳಾಲದಲ್ಲಿ ಆರಂಭಿಸಲಾದ ಒಳಚರಂಡಿ ಕಾಮಗಾರಿ ಜಮೀನು ಸಮಸ್ಯೆ, ಕೋರ್ಟ್, ಕಚೇರಿಯೆಂದು ಇಂದಿಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೆಲವು ಕಡೆ ಒಳರಸ್ತೆಗಳ ಸ್ಥಿತಿಯೂ ಗಂಭೀರವಾಗಿದೆ. ಒಂದು ವೇಳೆ ಒಳಚರಂಡಿ ಕಾಮಗಾರಿ ಮುಗಿದರೂ ನೀರಿನ ಸಂಪರ್ಕ ಕಲ್ಪಿಸಿದರೆ ಅದನ್ನು ಸಂಗ್ರಹಿಸುವುದೂ ಪ್ರಶ್ನೆಯಾಗಿತ್ತು. ಆದರೆ ಕೋಡಿಯಲ್ಲಿ ಘಟಕ ನಿರ್ಮಾಣವಾದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.

    ನಗರ ಅಭಿವೃದ್ಧಿ ಆಗಬೇಕಾದರೆ ಒಳಚರಂಡಿ ಅತ್ಯಗತ್ಯ. ಇದರಿಂದಾಗಿ ಪ್ರದೇಶದಲ್ಲಿ ಜಮೀನಿಗೂ ಬೇಡಿಕೆ ಬರುತ್ತದೆ. ಉದ್ಯಮಗಳೂ ಬರುತ್ತವೆ. ಉಳ್ಳಾಲದಲ್ಲಿ ಈ ವ್ಯವಸ್ಥೆ ಅಗತ್ಯವಾಗಿ ಆಗಬೇಕಿದೆ. ಜನಪ್ರತಿನಿಧಿಗಳು ಅನುದಾನ ಮಾತ್ರ ಬಿಡುಗಡೆಗೊಳಿಸುವುದು, ಎಲ್ಲಿ ನಿರ್ಮಾಣ ಆಗಬೇಕೆಂದು ತಂತ್ರಜ್ಞರು ತೀರ್ಮಾನಿಸಿ ಕೆಲಸ ಆರಂಭಿದ್ದಾರೆ. ಇಂತಹ ಮಹತ್ವದ ಯೋಜನೆಗೆ ಎಲ್ಲರೂ ಸಹಕರಿಸಬೇಕು. ಇನ್ನೂ ಅನುದಾನ ಬೇಕಾದರೆ ಒದಗಿಸಲಾಗುವುದು.

    ಯು.ಟಿ.ಖಾದರ್
    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts