More

    ವೆನ್ಲಾಕ್‌ನಲ್ಲಿ ಪಿಪಿಇ ಕಿಟ್ ಕೊರತೆ

    ಮಂಗಳೂರು: ಹಿಂದೆ ಕಳಪೆ ಪಿಪಿಇ ಕಿಟ್, ಸರಿಯಾದ ಸಮಯಕ್ಕೆ ಲಭ್ಯವಾಗದ ಕಿಟ್‌ಗಳಿಂದಾಗಿ ತೊಂದರೆ ಅನುಭವಿಸಿದ್ದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.
    ಈಗಾಗಲೇ ಜಿಲ್ಲೆಯಲ್ಲಿ ಹಲವು ವೈದ್ಯರು, ಅದರಲ್ಲೂ ಕೋವಿಡ್ ವಾರಿಯರ್‌ಗಳೇ ಸೋಂಕಿಗೊಳಗಾಗಿ ಮನೆಯಲ್ಲಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳು ಸೋಂಕಿಗೊಳಗಾಗಿ ಆರೋಗ್ಯ ಇಲಾಖೆ ಕಚೇರಿಯನ್ನೇ ಸ್ಯಾನಿಟೈಸ್ ಮಾಡಬೇಕಾಗಿ ಬಂದಿತ್ತು. ಅಲ್ಲದೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದ ಕೆಲವು ವೈದ್ಯರಿಗೂ ಕೋವಿಡ್ ತಗುಲಿತ್ತು.
    ಪ್ರಸ್ತುತ ಐಸಿಯುನಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಸಹಿತ ಸಿಬ್ಬಂದಿಗೆ ಸರಿಯಾದ ಪಿಪಿಇ ಕಿಟ್ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ವೈದ್ಯರೊಬ್ಬರ ಪ್ರಕಾರ ಕೆಲದಿನಗಳ ಹಿಂದೆ ಇದೇ ರೀತಿ ಕೊರತೆ ಎದುರಾಗಿತ್ತು, ಇಲಾಖೆ ಗಮನಕ್ಕೆ ತಂದ ಬಳಿಕ ಕಿಟ್ ಪೂರೈಕೆಯಾಗಿದೆ. ಆದರೆ ಈಗ ಮತ್ತೆ ಅದೇ ಸ್ಥಿತಿ ಎದುರಾಗಿದೆ.

    ಕರ್ನಾಟಕ ರಾಜ್ಯ ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್ ಸೊಸೈಟಿಯವರು ಈ ಕಿಟ್ ಹಾಗೂ ಸಂಬಂಧಿತ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಾರೆ. ಸರಿಯಾದ ಸಮಯಕ್ಕೆ ಅಗತ್ಯವಿರುವಷ್ಟು ಕಿಟ್ ಸಿಗದೆ ಕೋವಿಡ್ ವಾರಿಯರ್‌ಗಳು ಕಂಗೆಟ್ಟಿದ್ದಾರೆ. ಪ್ರತಿದಿನ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವಾಗ ಅದರಲ್ಲೂ ಐಸಿಯುನಲ್ಲೂ ಸಂಖ್ಯೆ ಹೆಚ್ಚುವಾಗ ಕಿಟ್ ಇಲ್ಲವಾದರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾರಕವಾಗುವ ಸಾಧ್ಯತೆ ಇದೆ.

    ಮರು ಬಳಕೆ ಅಪಾಯಕಾರಿ
    ಕೆಲವು ಪಿಪಿಇ ಕಿಟ್ ಕಳಪೆಯಾಗಿದ್ದು ಅದನ್ನು ಉದ್ದದ ವ್ಯಕ್ತಿಗಳು ಧರಿಸುವಾಗಲೇ ಹರಿಯುತ್ತದೆ, ಫೇಸ್‌ಶೀಲ್ಡ್, ಗಾಗಲ್, ಶೂ ಕವರ್ ಇತ್ಯಾದಿ ಇನ್ನೂ ಬಂದಿಲ್ಲ. ಸೋಮವಾರ ಬರುವುದಾಗಿ ಹೇಳಲಾಗಿತ್ತು. ಪಿಪಿಇ ಕಿಟ್‌ನ ಹುಡ್‌ಗಳು ಧರಿಸಿದಾಗ ಉಸಿರುಗಟ್ಟಿದ ಅನುಭವವಾಗುತ್ತದೆ, ಸರಿಯಾದ ಸಂಖ್ಯೆಯಲ್ಲಿ ಫೇಸ್‌ಶೀಲ್ಡ್, ಗಾಗಲ್ಸ್ ಬರದ ಕಾರಣ ಮತ್ತೆ ಮತ್ತೆ ಹಳೆಯದನ್ನೇ ಕೆಲವು ವೈದ್ಯಕೀಯ ಸಿಬ್ಬಂದಿ ಬಳಸುತ್ತಿದ್ದು, ಇದು ಅಪಾಯಕಾರಿ ಎನ್ನುತ್ತಾರೆ ಕೆಲ ವೈದ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts