More

    8 ತಿಂಗಳಲ್ಲಿ 46 ಕೆಜಿ ಕಳೆದುಕೊಂಡ ದೆಹಲಿ ಪೊಲೀಸ್ ಅಧಿಕಾರಿ..!

    ನವದೆಹಲಿ: “ಮನಸ್ಸಿದ್ದರೆ ಮಾರ್ಗವಿದೆ” ಎಂಬ ಮಾತಿದೆ. ಎಂಟು ತಿಂಗಳಲ್ಲಿ ಸುಮಾರು 46 ಕೆಜಿ ತೂಕ ಇಳಿಸಿದ್ದಕ್ಕಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಇತ್ತೀಚೆಗೆ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸನ್ಮಾನಿಸಿದ್ದಾರೆ.

    ಜಿತೇಂದ್ರ ಮಣಿ ತ್ರಿಪಾಠಿ, ಪೊಲೀಸ್ ಉಪ ಆಯುಕ್ತ (ಮೆಟ್ರೋ), ಸುಮಾರು 130 ಕೆಜಿಯಷ್ಟು ಇದ್ದರು. ಇದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಕೊಲೆಸ್ಟರಾಲ್ ಮಟ್ಟ ಅಧಿಕಾರಿಯ ಆರೋಗ್ಯವನ್ನು ಹಾಳು ಮಾಡಿ ಹಾಕಿತ್ತು.

    ಈ ಕಾರಣದಿಂದಾಗಿ, ಅವರು ತಮ್ಮ ಜೀವನಶೈಲಿಯನ್ನು ಬದಲಾಯಿಸಲು ನಿರ್ಧರಿಸಿದ್ದರು. ‘ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆ ಹಾಕುವ ಗುರಿ ಹೊಂದಿದ್ದ ಇವರು, ಕಳೆದ ಎಂಟು ತಿಂಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಹೆಜ್ಜೆ ನಡೆದಿದ್ದಾರೆ. ಈ ಪೊಲೀಸ್​ ಅಧಿಕಾರಿ, ತನ್ನ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಅವರ ನಿರಂತರ ಬೆಂಬಲ ಹಾಗೂ ಸ್ಫೂರ್ತಿಗಾಗಿ ಧನ್ಯವಾದ ಹೇಳಿದ್ದಾರೆ.

    ಅವರು ಸಣ್ಣ ಆಗಿದ್ದು ಹೇಗೆ ಎನ್ನುವ ಕುತೂಹಲ ನಿಮಗಿದೆಯೇ? ಜಿತೇಂದ್ರ ಮಣಿ, ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯಲು ಪ್ರಾರಂಭಿಸಿದ್ದರು. ಇದರ ಜೊತೆಗೆ ಜಂಕ್​ ಫುಡ್​ ಬಿಟ್ಟ ಅವರು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು.

    ಅವರ ಆಹಾರ ಮತ್ತು ಪಾನೀಯದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಕಡಿತಗೊಳಿಸಿ, ಹಣ್ಣು, ಸಲಾಡ್​ಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಮೊದಲು ಸಲಾಡ್ ಸೇವಿಸುವುದು, ಕಾರ್ಬೊನೇಟೆಡ್​ ಪಾನೀಯಗಳ ಬದಲಿಗೆ ಎಳನೀರು ಅಥವಾ ಮಜ್ಜಿಗೆ ಕುಡಿಯಲು ಪ್ರಾರಂಭಿಸಿದರು. ಹಸಿರು ತರಕಾರಿಗಳ ಜೊತೆಗೆ ಒಂದು ಅಥವಾ ಎರಡು ಚಪಾತಿ ತಿನ್ನುತ್ತಿದ್ದರು. ರಾತ್ರಿಯ ಊಟಕ್ಕೆ ಅವರು ತರಕಾರಿ ಸೂಪ್ ಮಾತ್ರ ಸೇವಿಸುತ್ತಿದ್ದರು.

    ಈ ಆಹಾರ ಕ್ರಮವನ್ನು ಅನುಸರಿಸಿ ಅವರು ತಮ್ಮ ಸೊಂಟವನ್ನು 12 ಇಂಚುಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದು ಅವರ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಯುವಂತೆ ಮಾಡಿದೆ. ಈ ಅಧಿಕಾರಿ ಈಗ 84 ಕೆಜಿಯಷ್ಟು ತೂಗುತ್ತಿದ್ದಾರೆ.

    ಅತಿಯಾದ ತೂಕ ಅವರ ವೃತ್ತಿ ಜೀವನವನ್ನೂ ಕುಂಠಿತಗೊಳಿಸುತ್ತಿತ್ತು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಅವರು ಸರಿಯಾದ ಸಮಯಕ್ಕೆ ತೂಕವನ್ನು ತಗ್ಗಿಸಿಕೊಂಡಿದ್ದಾರೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿದಾಯಕ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts