More

    ಗಜಪಡೆಗೆ ಭಾರ ಹೊರುವ ತಾಲೀಮು ಇಂದಿನಿಂದ

    ಅಭಿಮನ್ಯುಗೆ 300 ಕೆ.ಜಿ.ಮರಳು ಮೂಟೆ ಹೊರೆಸಿ ಚಾಲನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಭಾರ (ಮರಳಿನ ಮೂಟೆ) ಹೊರುವ ತಾಲೀಮು ಆ.18ರಿಂದ ನಡೆಯಲಿದೆ.
    ಗುರುವಾರ ಬೆಳಗ್ಗೆ 7.30ರ ನಂತರ ಅರಮನೆ ಆವರಣದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದಲ್ಲಿ ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ತಾಲೀಮು ಆರಂಭವಾಗಲಿದೆ.


    ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೊದಲ ದಿನ ಅಭಿಮನ್ಯುಗೆ 300 ಕೆ.ಜಿ.ಯಷ್ಟು ಮರಳು ಮೂಟೆ ಹೊರೆಸಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ. ಬಳಿಕ ಒಂದೊಂದು ಆನೆಯೂ ಒಂದೊಂದು ದಿನ ಮರಳಿನ ಮೂಟೆ ಹೊರುವ ಮೂಲಕ ತಾಲೀಮು ನಡೆಸಲಿವೆ. ಹಂತ ಹಂತವಾಗಿ 800 ಕೆ.ಜಿ.ವರೆಗೆ ಭಾರ ಹೊರಿಸಲು ತೀರ್ಮಾನಿಸಲಾಗಿದೆ. ಸಂಜೆ 6 ಗಂಟೆ ನಂತರವೂ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಯಲಿದೆ.


    ಬುಧವಾರವೂ ಗಜಪಡೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಅರಮನೆ ಅಂಗಳದಿಂದ ತಾಲೀಮು ಆರಂಭಿಸಿದ ಗಜಪಡೆ, 8 ಗಂಟೆ ಒಳಗೆ ಬನ್ನಿಮಂಟಪ ತಲುಪಿತು. ಬಳಿಕ ಕೆಲಕಾಲ ಅಲ್ಲಿಯೇ ವಿಶ್ರಾಂತಿ ಪಡೆದು 9.30ಕ್ಕೆ ಅರಮನೆ ಅಂಗಳಕ್ಕೆ ಹಿಂದಿರುಗಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮಾಜಿ ನಾಯಕ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಚೈತ್ರಾ ಹಾಗೂ ಲಕ್ಷ್ಮೀ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದವು.


    ಅಂಬಾರಿ ಹೊರುವ ಆನೆಗೆ ತಾಲೀಮು ನೀಡುವುದು ಅಗತ್ಯ. ಈ ಕಾರಣಕ್ಕಾಗಿ ಗುರುವಾರದಿಂದ ಭಾರ ಹೊರುವ ತಾಲೀಮು ನಡೆಯಲಿದೆ. ಅಂಬಾರಿ 750 ಕೆ.ಜಿ. ತೂಕವಿದ್ದು, ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ಸಿದ್ಧ ಮಾಡಬೇಕಿದೆ. ಆ ಕಾರಣಕ್ಕಾಗಿ 300 ಕೆ.ಜಿ. ತೂಕದಿಂದ ಹಂತ ಹಂತವಾಗಿ ಭಾರ ಹೆಚ್ಚಿಸಿಕೊಂಡು 800 ಕೆ.ಜಿ.ವರೆಗೂ ಸಾಮರ್ಥ್ಯ ವೃದ್ದಿಸುತ್ತೇವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts