More

    ಈ ರಾಶಿಯವರಿಗೆ ಶುಭ ಸಮಯ ಒದಗಿ ಬಂದಿದೆ: ವಾರಭವಿಷ್ಯ

    ಮೇಷ

    ಮೇಷ ರಾಶಿಗೆ ದ್ವಿತೀಯದಲ್ಲಿ ಕುಜ-ರಾಹು ಸಂಧಿಯಾಗಿ ಹನ್ನೊಂದರಲ್ಲಿ ಬುಧ-ರವಿ ಇರುವುದು ಶುಭ ಸೂಚನೆ. ಏ. 5ರ ನಂತರ ಗುರುವು ಏಕಾದಶಕ್ಕೆ ಬಂದು ಇಷ್ಟಾರ್ಥ ಈಡೇರಿಸುತ್ತಾನೆ. ದರ್ಪ, ಅಹಂಕಾರ, ಅತೃಪ್ತಿ ಬಿಟ್ಟು ದೈವಾಂಶ ಸಂಭೂತರಾಗಿರುವ ಸಮಯ. ನಾಗರಾಜನನ್ನು ಪೂಜಿಸಿ, ಗುರುಕಟಾಕ್ಷಕ್ಕೆ ದತ್ತಾತ್ರೇಯನ ದರ್ಶನ ಮಾಡಿ.

    ವೃಷಭ

    ಕುಜ-ರಾಹು ಸಂಧಿಕಾಲದಲ್ಲಿ ಕೆಲವೊಂದು ಆಕಸ್ಮಿಕ ಘಟನೆಗಳು ಜರುಗಿ ಮನಸ್ಸಿಗೆ ಅಶಾಂತಿ, ಅಹಿತ ಕಾಡುತ್ತದೆ. ಆದರೂ ಶನಿಯ ಸ್ವಕ್ಷೇತ್ರದಲ್ಲಿ ಗುರು ಇರುವುದರಿಂದ 9ನೆಯ ಮನೆಯ ಫಲ ಕೊಡುತ್ತಾನೆ. ಸೂರ್ಯನಾರಾಯಣ ಕವಚ ಪಾರಾಯಣ ಮಾಡಿ. ಶಂಕುಲನಾಗ ದೇವರಿಗೆ ಪೂಜೆ ಮಾಡಿ ಲಾಭ, ಸುಖ ಕಂಡುಕೊಳ್ಳಬಹುದು. ಆರೋಗ್ಯಕ್ಕೆ ಕೊರತೆಯಿಲ್ಲ.

    ಮಿಥುನ

    ಹನ್ನೆರಡರ ಕುಜ-ರಾಹು, ಅಷ್ಟಮದಲ್ಲಿ ಗುರು-ಶನಿ ಏನನ್ನೂ ಕೊಡಲು ಬಿಡುವುದಿಲ್ಲ. ನಾನು ಎಂಬುದು ಮನುಷ್ಯನ ಗುಣದಲ್ಲಿ ಬಂದಿರುವುದು. ಕಾಮ-ಕ್ರೋಧಾದಿ ಅರಿಷಡ್ವರ್ಗಗಳನ್ನು ತ್ಯಜಿಸಿ ಶ್ರೀಮನ್ನಾರಾಯಣನ ಪಾದಕ್ಕೆ ಎರಗಿ. ರಾಮಾಷ್ಟೋತ್ತರ ಪಠಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

    ಕಟಕ

    ಅಷ್ಟಮದಲ್ಲಿ ರವಿ-ಬುಧ ಇದ್ದರೂ, ಕೆಲವು ಆಗುಹೋಗುಗಳನ್ನು ತಡೆಯಲಾಗುವುದಿಲ್ಲ. ಸಪ್ತಮ ಗುರುವು ನಿಮಗೆ ರಕ್ಷಾಕವಚವನ್ನು ಕೊಟ್ಟು ಕೆಲಸ ಕಾರ್ಯಗಳಲ್ಲಿ ಉತ್ತೇಜನ ತುಂಬುತ್ತಾನೆ. ಕಟಕ ರಾಶಿಗೆ ಅಧಿಪತಿ ಚಂದ್ರ. ಮನಸ್ಸನ್ನು ನಿಯಂತ್ರಣ ಮಾಡಿದರೆ ಏನನ್ನೂ ಗೆಲ್ಲಬಹುದು. ಸುಖ ಸಂತೋಷ ನಿಮ್ಮದಾಗುತ್ತದೆ.

    ಸಿಂಹ

    ರಾಶ್ಯಾಧಿಪತಿ ಸಪ್ತಮದಲ್ಲಿದ್ದು, 20ನೇ ತಾರೀಖು ಶುಕ್ರನೊಂದಿಗಿರುವುದರಿಂದ ಕೆಲಸ-ಕಾರ್ಯಗಳಲ್ಲಿ ಅಡೆತಡೆಗಳಿರುವುದಿಲ್ಲ. ಶನಿಯನ್ನು ಪ್ರಾರ್ಥಿಸಿ. ಜಾಣ್ಮೆಯಿಂದ ಸಾಕಷ್ಟು ವ್ಯವಹಾರಗಳನ್ನು ಮುಗಿಸಿಕೊಳ್ಳಬಹುದು. ಏ.5ರ ನಂತರ ಗುರುವು ಸಪ್ತಮಕ್ಕೆ ಬರುತ್ತಾನೆ. ಗುರು ಪ್ರಾರ್ಥನೆ ಆರಂಭಮಾಡಿ. ಲಕ್ಷ್ಮೀ ನರಸಿಂಹನನ್ನು ಪೂಜಿಸಿ.

    ಕನ್ಯಾ

    ಕನ್ಯಾ ರಾಶಿಯಲ್ಲಿ ಜನಿಸಿದವರು, ಉತ್ತರಾ, ಹಸ್ತಾ, ಚಿತ್ತಾ ನಕ್ಷತ್ರದವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಮಾಡಿದ ಪಾಪಗಳು ವ್ಯಾಧಿರೂಪದಲ್ಲಿ ಕಾಣಿಸಿ, ಘೋರತ್ವರೂಪ ಕಾಣಬಹುದು. ಪಾಪ ಪರಿಹಾರಕ್ಕಾಗಿ ದತ್ತಾತ್ರೇಯನನ್ನು, ರೋಗ ಸಂಕಷ್ಟಕ್ಕೆ ಲಕ್ಷ್ಮೀನರಸಿಂಹನನ್ನು, ಆರೋಗ್ಯಕ್ಕೆ ಸೂರ್ಯನನ್ನು, ಪಿತೃದೇವತೆಗಳನ್ನು ಸ್ಮರಿಸಿ.

    ತುಲಾ

    ಕೈಯಲ್ಲಿ ಕೊಡಲಿಯಿದ್ದರೆ ಮರವನ್ನು ಕಡಿಯಬಹುದು. ಕತ್ತರಿ ಸಿಕ್ಕರೆ ಕತ್ತರಿಸಬಹುದು. ಸೂಜಿ ಇದ್ದರೆ ಹೊಲಿಯಬಹುದು. ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡು ಅನ್ಯರಿಗೆ ‘ಮಾನಸ ರೂಪೇಣ ದೈವಂ’ ಎನ್ನುವಂತೆ ಕಾಣಿ. ನಿಮ್ಮ ನಿಸ್ವಾರ್ಥ ಸೇವೆಯನ್ನು ದೇವರು ಗಮನಿಸಿ ಎಲ್ಲವನ್ನೂ ಕರುಣಿಸುತ್ತಾನೆ. ದುರ್ಗೆಯ ಖಡ್ಗಮಾಲಾ ಸ್ತೋತ್ರ ಪಠಿಸಿದಲ್ಲಿ ಇನ್ನೂ ಹೆಚ್ಚಿನ ಕೀರ್ತಿ-ಲಾಭ-ಧನ ಪಡೆಯುವಿರಿ.

    ವೃಶ್ಚಿಕ

    ಪ್ರಯಾಣಿಕ ರೈಲಾಗಲಿ ಅಥವಾ ವೇಗಚಲಿತ ರೈಲಿರಲಿ ಹಳಿಯ ಮೇಲೆ ಹೋಗಲೇಬೇಕು. ನಿಮ್ಮ ಶುಭ ಸಮಯ ಒದಗಿ ಬಂದಿದೆ. ದೇವರೇ ಸರಿಯಾದ ಹಳಿಯ ಮೇಲೆ ನಡೆಸಿ, ಸಂತೋಷ ನೀಡುತ್ತಾನೆ. ಲಗ್ನದಲ್ಲಿ ಕೇತುವಿಗೆ ಗಣಪತಿಯ ಆರಾಧನೆ, ಮೂರರಲ್ಲಿ ಗುರುವಿರುವುದರಿಂದ ಗುರುವನ್ನು ಪೂಜಿಸಿ. ಸಾಲವೆಂಬ ಶೂಲವನ್ನು ಕಿತ್ತುಹಾಕಿದರೆ ಧೈರ್ಯ ಕಾಣಬಹುದು.

    ಧನು

    ವಾಯು, ವಾತ, ಪಿತ್ತ, ಕಫ ಮಾಂಸಖಂಡಗಳನ್ನು ಸಂಕುಚಿತವಾಗಿಸಿ ನಿಮ್ಮ ಶರೀರಕ್ಕೆ ವೇದನೆ ಉಂಟುಮಾಡಬಹುದು. ಆದರೆ ಅದು ತಾತ್ಕಾಲಿಕ. ಶನಿ ಸಂಚಾರವನ್ನು ಗೆದ್ದು ಹೊರಹೊಮ್ಮಿ ಕೀರ್ತಿವಂತರಾಗಿ ಬಾಳುವಿರಿ. ತಂದೆ-ತಾಯಿಗೆ ಏನು ಮಾಡಬೇಕು ಅರಿತುಕೊಳ್ಳಿ. ಭವಿಷ್ಯ ಬದಲಾಗಲಿದೆ. ರಾಮರಕ್ಷಾ ಸ್ತೋತ್ರ ಪಠಿಸಿ. ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.

    ಮಕರ

    ಮಕರ ಲಗ್ನಾಧಿಪತಿ ಲಗ್ನದಲ್ಲೇ ಇರುವುದರಿಂದ ತಾವೂ ಕೆಟ್ಟು ಇನ್ನೊಬ್ಬರನ್ನೂ ಕೆಡಿಸುವ ಭಾವನೆ ಬೇಡ. ನಿನ್ನೆ ಏನಾಯಿತೆಂದು ಯೋಚನೆಯಿದ್ದರೆ ಧೈರ್ಯ ಸಾಲುವುದಿಲ್ಲ. ತಪ್ಪದೇ 12 ದಿನಗಳ ಕಾಲ ಶನಿಯನ್ನು ಶನಿ ಅಷ್ಟೋತ್ತರದಿಂದ ಬಿಲ್ವಪತ್ರೆಯಲ್ಲಿ ಪೂಜಿಸಿ. ಮಾಘ ಮಾಸ ಮುಗಿಯುತ್ತಿದೆ. ದೀಪ, ಶುದ್ಧ ಆಕಳು ತುಪ್ಪ ದಾನ ಮಾಡಿ. ದೇವರು ಸಂರಕ್ಷಿಸುತ್ತಾನೆ.

    ಕುಂಭ

    ಧನಿಷ್ಟ, ಶತಭಿಷ, ಪೂ.ಭಾದ್ರ ಕುಂಭ ರಾಶಿಯಲ್ಲಿ ಕುಳಿತಿರುವ ನಕ್ಷತ್ರಗಳು. ಮನಸ್ಸಿನ ದೌರ್ಬಲ್ಯವೇ ಸೋಲಿಗೆ ಕಾರಣವಾಗುತ್ತದೆ. ಗೆಲುವು ಸಾಧಿಸಲು ಸೋಲೇ ಮೊದಲ ಪಾಠ. ಆದ್ದರಿಂದ 12ರ ಶನಿ ನಿಮ್ಮ ವಿವೇಕ ಹಾಳುಮಾಡುತ್ತಾನೆ. ಶುದ್ಧ ಮನಸ್ಸೊಂದಿದ್ದರೆ ದೇವರಿಂದ ಸಹಾಯ ಪಡೆಯುತ್ತೀರ. ನೀಲಿಪುಷ್ಪದಿಂದ ಶನಿ ಅಷ್ಟೋತ್ತರ ಪಠಿಸಿ. ಪ್ರತಿಭಾನುವಾರ ಗೋಧಿ ದಾನ ನೀಡಿ.

    ಮೀನ

    ನಾವೆಲ್ಲರೂ ದೇವರ ಸೃಷ್ಟಿಯ ಮಾನವರು. ಜಗವನ್ನು ನಿನ್ನದೆಂದು ಭಾವಿಸು. ಸಮಯ- ಸಂದರ್ಭ, ರಾಶಿ-ಬುದ್ಧಿ- ದೈವಬಲ ಎಲ್ಲವೂ ಸೇರಿಕೊಂಡು ತೇಜಸ್ಸು. ಹನ್ನೊಂದರಲ್ಲಿರುವ ಗುರು- ಶನಿ ಎಲ್ಲವನ್ನೂ ನೀಡುತ್ತಾನೆ. ಮುಂದೆ ಶನಿಸಂಚಾರ ಬಂದಾಗ ಒಳ್ಳೆಯದನ್ನೆ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ಉಮಾಮಹೇಶ್ವರ ಪೂಜೆ ಮಾಡಿ. ತಿಲದಿಂದ ಮಾಡಿದ ಚಿತ್ರಾನ್ನವನ್ನು ದೇವರಿಗೆ ನೈವೇದ್ಯ ಮಾಡಿ ಹಂಚಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts