More

    ವೀಕೆಂಡ್ ಕರ್ಫ್ಯೂಗೆ ಹೊಸಪೇಟೆಯಲ್ಲಿ ಉತ್ತಮ ಸ್ಪಂದನೆ: ಅಗತ್ಯ ವಸ್ತುಗಳ ಖರೀದಿ ಬಳಿಕ ಅಂಗಡಿಗಳು ಬಂದ್

    ಹೊಸಪೇಟೆ: ಕೋವಿಡ್ ಎರಡನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವೀಕೆಂಡ್ ಕರ್ಫ್ಯೂಗೆ ನಗರದಲ್ಲಿ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ಬೆಳಗ್ಗೆಯಿಂದ ನಗರದ ಬಳ್ಳಾರಿ ರಸ್ತೆಯ ಪಟೇಲ್ ಶಾಲೆ, ದೀಪಾಯನ ಶಾಲೆ, ತಾಲೂಕು ಕ್ರೀಡಾಂಗಣ, ಬಾಲಾ ಚಿತ್ರ ಮಂದಿರದ ಪಕ್ಕದ ಬಯಲು ಪ್ರದೇಶ, ಅಯ್ಯಂಗಾರ ಕಟ್ಟಡ ಸಮೀಪದ ಆವರಣದಲ್ಲಿ ಬೆಳಗ್ಗೆ 10 ಗಂಟೆವರೆಗೆ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಔಷಧ, ಹಾಲು ಸೇರಿ ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಖರೀದಿಗೆ ಜನರು ಮುಗಿಬಿದ್ದಿದ್ದರು. ಬಳಿಕ ರಸ್ತೆಗಿಳಿದ ಪೊಲೀಸರು ಔಷಧ ಅಂಗಡಿ, ಆಸ್ಪತ್ರೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚಿಸಿದರು. ಅನಗತ್ಯವಾಗಿ ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರೋಟರಿ ವೃತ್ತ, ಮೇನ್ ಬಜಾರ್, ಮೂರಂಗಡಿ ವೃತ್ತ, ಟಿಬಿ ಡ್ಯಾಂ ಖಾಲಿ ಇದ್ದವು.

    ಪಾರ್ಸೆಲ್‌ಗಾಗಿ ಮುಗಿಬಿದ್ದರು: ಹೋಟೆಲ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಂಡುಹೋಗಲು ಮಾತ್ರ ಅವಕಾಶ ನೀಡಿರುವುದರಿಂದ ಬೆಳಗ್ಗೆ ನಗರದ ಕೆಲ ಹೋಟೆಲ್‌ಗಳ ಮುಂದೆ ಜನರು ಉಪಾಹಾರ ಪಾರ್ಸೆಲ್ ತೆಗೆದುಕೊಂಡು ಹೋಗಲು ಮುಗಿಬಿದ್ದಿರುವುದು ಕಂಡು ಬಂದಿತು. ಹೋಟೆಲ್ ಮುಂದೆ ಪರಸ್ಪರ ಅಂತರ ಸೇರಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿತ್ತು. ನಗರದ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರಯಾಣಿಕರ ಬರುವಿಕೆಗಾಗಿ ಚಾಲಕರು, ನಿರ್ವಾಹಕರು ಕಾದು ಕುಳಿತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts