ಬೆಳಗಾವಿ: ಒಂದು ವಾರದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ನಡೆದ ಬೆಳಗಾವಿ ವಿಭಾಗಮಟ್ಟದ ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ತಂತ್ರಜ್ಞಾನ ಆಧಾರಿತವಾಗಿ ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಸ್ಪಂದನೆ ದೊರೆತಿದೆ ಎಂದರು.
ದೇಶಾದ್ಯಂತ ವಿಸ್ತರಣೆ: ರಾಜ್ಯದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕರಾವಳಿಯ ಕೆಲ ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ. ಬೆಳೆ ಸಮೀಕ್ಷೆ ಆ್ಯಪ್‌ಅನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದರು. ರೈತರು ಕೇವಲ ಶೇ.2ರಷ್ಟು ಮಾತ್ರ ವಿಮೆ ಹಣ ಪಾವತಿಸಬೇಕು. ಉಳಿದ ಶೇ.98 ಸರ್ಕಾರವೇ ಪಾವತಿಸಲಿದೆ. ಹೀಗಾಗಿ ಪ್ರತಿ ರೈತರೂ ಕಡ್ಡಾಯವಾಗಿ ಬೆಳೆವಿಮೆ ಪಾವತಿಸುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಅಲ್ಲದೆ, ರೈತರ ಆದಾಯ ದ್ವಿಗುಣವಾಗಲು ಬಹುಬೆಳೆ ಪದ್ಧತಿ ಅನುಸರಿಸಲು ಪ್ರೋತ್ಸಾಹಿಸಬೇಕು ಎಂದು ಸಚಿವರು ಸೂಚಿಸಿದರು.
ಹೆಸರು ಬೆಳೆ ನಾಶ: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಜಿಲ್ಲೆಯಲ್ಲಿ ಹೆಸರು ಬೆಳೆ ಹಾಗೂ ಹತ್ತಿ ನಾಶಗೊಂಡಿದೆ. 2008 ರಿಂದ
ಬೆಳೆ ವಿಮೆ ವ್ಯತ್ಯಾಸ ಆಗುತ್ತಿದೆ. ಧಾರವಾಡ-ಬೆಳಗಾವಿ ಜಿಲ್ಲೆಯ ಬೆಳೆವಿಮೆ ನಡುವಿನ ವ್ಯತ್ಯಾಸ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕಿತ್ತೂರು ತಾಲೂಕಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆ ಹಾಗೂ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಮಾತನಾಡಿ, ರೈತರ ಸಮಸ್ಯೆ ನಿವಾರಣೆಗೆ ಈಗಾಗಲೇ ಮೂರು ವಿಭಾಗಮಟ್ಟದ ಸಭೆ ನಡೆಸಲಾಗಿದೆ. ಬೆಳೆ ಸಮೀಕ್ಷೆ ಕಾರ್ಯವನ್ನು ಉತ್ಸವ ರೂಪದಲ್ಲಿ ನಡೆಸಲು ಇಲಾಖೆ ಮುಂದಾಗಿದೆ ಎಂದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 1,48,22,566 ಪ್ಲಾಟ್‌ಗಳ ಸಮೀಕ್ಷೆ ಆಗಬೇಕಿದ್ದು, 6,00,277 ಪ್ಲಾಟ್‌ಗಳ ಸಮೀಕ್ಷೆಯಾಗಿದೆ. ಇಲ್ಲಿಯವರೆಗೆ ಶೇ. 40.49 ಪ್ರಗತಿಯಾಗಿದೆ ಎಂದರು.
ನರೇಗಾ ಹಾಗೂ ಜಲಾಮೃತ ಯೋಜನೆಯಡಿ ಬೆಳಗಾವಿ ಜಿಲ್ಲೆ ಅತ್ಯುತ್ತಮ ಕೆಲಸ ಮಾಡಿದೆ ಎಂದು ಕೃಷಿ ಉಪನಿರ್ದೇಶಕ ಡಾ. ಎಚ್.ಡಿ. ಕೋಳೇಕರ ವಿವರಿಸಿದರು. ಶಾಸಕ ಅನಿಲ ಬೆನಕೆ, ಕೃಷಿ ವಿವಿ ಕುಲಪತಿ ಎಂ.ಬಿ. ಚಿಟ್ಟಿ, ಕೃಷಿ ಇಲಾಖೆ ಅಪರ ನಿರ್ದೇಶಕ ದಿವಾಕರ ಉಪಸ್ಥಿತರಿದ್ದರು. ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೃಷಿ ಜ್ಞಾನ ಆ್ಯಪ್ ಬಿಡುಗಡೆ: ರೈತರಿಗೆ ಬೇಸಾಯ ಕ್ರಮಗಳು, ಬೆಳೆಗೆ ತಗಲುವ ವಿವಿಧ ರೋಗಗಳ ನಿಯಂತ್ರಣ ಸೇರಿ ವಿವಿಧ ಬಗೆಯ ಧ್ವನಿ ಹಾಗೂ ದೃಶ್ಯ ಆಧಾರಿತ ಮಾಹಿತಿ ನೀಡುವ ವಿಶೇಷ ‘ಕೃಷಿ ಜ್ಞಾನ ಆ್ಯಪ್’ಅನ್ನು ಕೃಷಿ ಸಚಿವ ಪಾಟೀಲ ಬಿಡುಗಡೆ ಮಾಡಿದರು. ಆ್ಯಪ್ ಮೂಲಕ ರೈತರು ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳು ಮತ್ತು ನಿವಾರಣೋಪಾಯಗಳ ಕುರಿತು ಕಿರು ವಿಡಿಯೋ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಸರ್ಕಾರದ ಕಣ್ಣಿಗೆ ಮಣ್ಣೆರಚಿ ರೈತರನ್ನು ವಂಚಿಸುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಭಾಷೆಯ ಸಮಸ್ಯೆ ನೆಪದಲ್ಲಿ ಗುರಿಸಾಧನೆ ಕುಂಠಿತಗೊಳ್ಳಬಾರದು. ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಭಾಷಾ ಸಮಸ್ಯೆ ಬಗೆಹರಿಸಿ ಆದಷ್ಟು ಬೇಗನೆ ಸಮೀಕ್ಷೆ ಪೂರ್ಣಗೊಳಿಸಬೇಕು.
| ಮಹಾಂತೇಶ ಕವಟಗಿಮಠ ಎಂಎಲ್‌ಸಿ