More

    Web Exclusive|’ಕಣ್ಣೀರುಳ್ಳಿ’- ಅನ್ನದಾತ ಕಂಗಾಲು, ಗ್ರಾಹಕನಿಗೂ ಸಂಕಷ್ಟ

    ಸತತ ಮಳೆಯಿಂದಾಗಿ ಅನ್ನದಾತ ಕಂಗಾಲು | ಈರುಳ್ಳಿ ಬೆಲೆ ಜಿಗಿತ, ಇಳುವರಿ ಕುಸಿತ

    ಹೀರಾನಾಯ್ಕ ಟಿ. ವಿಜಯಪುರ

    ರಾಜ್ಯದಲ್ಲಿ ಈ ಬಾರಿ ವರುಣನ ಆರ್ಭಟದಿಂದಾಗಿ ರೈತರು ಬೆಳೆದ ಬೆಳೆಗಳು ಮಣ್ಣುಪಾಲಾಗಿವೆ. ಅದರಲ್ಲೂ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಸತತ ಮಳೆಯಿಂದಾಗಿ ಹೊಲದಲ್ಲೇ ಈರುಳ್ಳಿ ಕೊಳೆಯುತ್ತಿದೆ. ಕಳೆದ ವರ್ಷ ಉತ್ತಮ ದರ ಪಡೆದ ರೈತರು, ಲಕ್ಷಾಧಿಪತಿಗಳಾಗಿದ್ದುಂಟು. ಆದರೆ ಈ ಬಾರಿ ಮಳೆಯಿಂದಾಗಿ ಈರುಳ್ಳಿ ಗುಣಮಟ್ಟ ಕಳೆದುಕೊಂಡಿದ್ದು, ಇಳುವರಿ ಸಂಪೂರ್ಣ ಕುಸಿದಿದೆ.

    ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದಾಗಿ 1,296 ಹೆಕ್ಟೇರ್ ಈರುಳ್ಳಿ ಹಾನಿಯಾಗಿದೆ. 15 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ಅಂದಾಜಿಲಾಗಿದೆ. ಇನ್ನೂ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ.
    | ಎಸ್.ಎಂ. ಬರಗಿಮಠ, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ, ವಿಜಯಪುರ
    ಈ ಬಾರಿ ಈರುಳ್ಳಿಗೆ ಉತ್ತಮ ದರ ಸಿಗುವ ನಿರೀಕ್ಷೆ ಇತ್ತು. ಆದರೆ ಮಳೆ ಬಂದು ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.
    | ಶ್ರೀಶೈಲ ಬೆಳ್ಳುಬ್ಬಿ , ರೈತ ವಿಜಯಪುರ

    ಕ್ವಿಂಟಾಲ್​ಗೆ 2 ಸಾವಿರ ರೂ. ಹೆಚ್ಚಳ
    ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್​ಗೆ 1500 ರೂ. ನಿಂದ 2100 ರೂ. ವರೆಗೆ ದರ ಇತ್ತು. ಒಂದೇ ತಿಂಗಳಲ್ಲಿ ಈರುಳ್ಳಿ ದರ ದುಪ್ಪಟ್ಟು ಹೆಚ್ಚಳಗೊಂಡಿದೆ. ಪ್ರಸ್ತುತ ವಿಜಯಪುರ ಎಪಿಎಂಸಿಯಲ್ಲಿ ಕ್ವಿಂಟಾಲ್ ಈರುಳ್ಳಿ ದರ ಕ್ವಿಂಟಾಲ್​ಗೆ 3500 ರೂ. ನಿಂದ 4100 ರೂ. ವರೆಗೆ ಇದೆ. ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೆಜಿಗೆ 50 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ವಿಜಯಪುರ ಎಪಿಎಂಸಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲಾಗಿತ್ತು. ಕ್ವಿಂಟಾಲ್ ಈರುಳ್ಳಿ ದರ 20 ಸಾವಿರ ರೂ. ಗೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಈರುಳ್ಳಿ ದರ ಹೆಚ್ಚಳಗೊಳ್ಳುತ್ತಿರುವುದರಿಂದ ಗ್ರಾಹಕರಲ್ಲಿ ಮತ್ತೆ ಕಣ್ಣೀರು ತರಿಸಲಿದೆ.
    ಮಣ್ಣುಪಾಲಾದ ಈರುಳ್ಳಿ
    ರಾಜ್ಯದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳಾದ ಚಿತ್ರದುರ್ಗ, ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದಲ್ಲಿ ಭಾಗಶಃ ಈರುಳ್ಳಿ ನೆಲಕಚ್ಚಿದೆ. ಅದರಂತೆ ವಿಜಯಪುರ ಜಿಲ್ಲೆಯ ಹಡಗಲಿ, ಕಗ್ಗೋಡ, ಮುದ್ದೇಬಿಹಾಳ, ಶಿವಣಗಿ, ತಾಳಿಕೋಟೆ, ದೇವರ ಹಿಪ್ಪರಗಿ ಭಾಗದಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಮಣ್ಣುಪಾಲಾಗಿದೆ. ಶೇ.80 ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದ್ದು, ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಈರುಳ್ಳಿ ಬೆಳೆ ಹಾನಿಯಿಂದಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ‘ಈ ಬಾರಿ ಈರುಳ್ಳಿಗೆ ಉತ್ತಮ ದರ ಇದೆ. ಆದರೆ ಈರುಳ್ಳಿನೇ ಇಲ್ಲ. ಐದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 250 ಕ್ವಿಂಟಾಲ್ ಆಗುವ ನಿರೀಕ್ಷೆ ಇತ್ತು. ಆದರೆ ಸತತ ಮಳೆಯಿಂದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದ್ದು, 2 ಕ್ವಿಂಟಾಲ್ ಮಾತ್ರ ಈರುಳ್ಳಿ ಕೈಗೆ ಸಿಕ್ಕಿದೆ. ಹಾಕಿದ ಬಂಡವಾಳ ಕೂಡ ಸಿಗದಂತಾಗಿದೆ’ ಎಂದು ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ರೈತ ಚನ್ನಪ್ಪ ಡೋಣೂರ ಅಳಲು ತೋಡಿಕೊಂಡರು.

    ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts