More

    Web Exclusive: ಬಂಜರು ಭೂಮಿಗೆ ನ್ಯಾಯ ನೀಡಿದ ವಕೀಲ; ಬಂಗಾರದ ಬೆಳೆ ತೆಗೆದ ಸಾಧಕ

    | ವಾದಿರಾಜ ವ್ಯಾಸಮುದ್ರ ಕಲಬುರಗಿ

    ಬೆಟ್ಟವನ್ನು ಕಡಿದು ವ್ಯವಸಾಯದ ಭೂಮಿಯನ್ನಾಗಿ ಮಾಡುವ ಮೂಲಕ ಗಮನ ಸೆಳೆದಿದ್ದ ಡಾ.ರಾಜಕುಮಾರ್ ಬಂಗಾರದ ಮನಷ್ಯ ಎನಿಸಿಕೊಂಡಿದ್ದರು. ಇದೀಗ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಶ್ರೀನಿವಾಸ ಸಹ ಬಂಗಾರದ ಮನುಷ್ಯನಂತೆ ಸಾಧಕ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

    ಶ್ರೀನಿವಾಸ ಬಿಎಸ್​ಸಿ, ಎಲ್​ಎಲ್​ಬಿ ಮುಗಿಸಿದ ಬಳಿಕ ವಕೀಲಿಕೆ ವೃತ್ತಿಯಲ್ಲಿ ತೊಡಗುವ ಮೂಲಕ ಅನೇಕರಿಗೆ ನ್ಯಾಯ ಒದಗಿಸಲು ಮುಂದಾದರು. ಆಗಾಗ್ಗೆ ನಾನಾ ಜಿಲ್ಲೆಗಳಿಗೆ ಹೋಗುತ್ತ ಜೀವನವನ್ನು ಪ್ರವಾಸಕ್ಕೂ ಮುಡುಪಿಟ್ಟಿದ್ದರು. ಹೀಗೆ ಮಾಡುತ್ತಿರುವ ಪ್ರವಾಸವೇ ಅವರನ್ನು ವಕೀಲಿಕೆಯಿಂದ ಕೃಷಿಯತ್ತ ಎಳೆದು ತಂದು ಲಕ್ಷಾಂತರ ರೂ. ಆದಾಯ ಪಡೆಯುವ ಕೃಷಿಕನನ್ನಾಗಿ ಮಾಡಿದೆ.

    ಒಂದು ಸಲ ಸ್ನೇಹಿತರ ಜತೆ ಬೆಂಗಳೂರು, ಮೈಸೂರು, ಕೊಡಗು ಸೇರಿ ರಾಜ್ಯದ ಹಲವೆಡೆ ಪ್ರವಾಸಕ್ಕೆ ಹೋಗಿದ್ದರು. ಆಗ ಅಲ್ಲಲ್ಲಿ ಫಾರ್ಮ್​​​ ಹೌಸ್​ಗಳನ್ನು ನೋಡಿದರು. ಇದೇ ಅವರ ಜೀವನ ಬದಲಾವಣೆಗೆ ಕಾರಣವಾಯಿತು. ತಮ್ಮೂರಿಗೆ ಬಂದವರೇ ವಕೀಲಿಕೆ ವೃತ್ತಿಗೆ ಸಲಾಂ ಹೊಡೆದು ಕೃಷಿಗೆ ಜೈ ಎಂದರು. ಇದನ್ನೂ ಓದಿ: Web Exclusive| ಜನಹೃದಯದಲ್ಲಿ ನೆಲೆಗೊಂಡ ವಿಶಿಷ್ಟ ವ್ಯಕ್ತಿತ್ವ: ಸಾಹಿತಿ ಗೊ.ರು.ಚನ್ನಬಸಪ್ಪ ವಿಶೇಷ ಲೇಖನ

    ಬಂಗಾರದ ಮನುಷ್ಯನಲ್ಲಿ ಡಾ.ರಾಜಕುಮಾರ್ ಬೆಟ್ಟ ಅಗೆದು ಕೃಷಿ ಭೂಮಿ ಮಾಡಿದರೆ, ಶ್ರೀನಿವಾಸ ಸುಲೇಪೇಟ ಹತ್ತಿರ ಕಲ್ಲು ಬಂಡೆಗಳಿಂದ ಕೂಡಿದ 5 ಎಕರೆ ಬಂಜರು ಭೂಮಿ ಖರೀದಿಸಿದರು. ಬಂಡೆ ಕಲ್ಲುಗಳನ್ನು ಒಡೆಸಿ ಆಳುದ್ದ ತಗ್ಗು ತೋಡಿಸಿದರು. ಲಕ್ಷಾಂತರ ರೂ. ಖರ್ಚು ಮಾಡಿ ಹೈದರಾಬಾದ್​ನಿಂದ ಫಲವತ್ತಾದ ಮಣ್ಣು ತರಿಸಿ ಹಾಕಿಸಿ ಬಂಜರು ಭೂಮಿಯನ್ನು ಕೃಷಿ ಜಮೀನನ್ನಾಗಿ ಪರಿವರ್ತಿಸಿದರು. ಅಂದಿನ ಬಂಜರು ಭೂಮಿ ಇಂದು ತೋಟಗಾರಿಕೆ ಬೆಳೆಗಳ ಹಸಿರಿನಿಂದ ಕಂಗೊಳಿಸುವ ಫಲವತ್ತಾದ ಜಮೀನು.

    ತಮ್ಮ ಭೂಮಿಯಲ್ಲಿ ಮೊದಲ ವರ್ಷ ಹೈಟೆನ್ಸಿಟಿ ಪ್ಲಾಂಟೇಷನ್ ಮಾಡಿ ಒಂದು ಎಕರೆಯಲ್ಲಿ 70-80 ಗಿಡ ನೆಟ್ಟರು. ಈಗ 4 ಎಕರೆಯಲ್ಲಿ 1000 ಸೀಬೆ, 1000 ನಿಂಬೆ, 1000 ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ ಪಪ್ಪಾಯ ಮತ್ತು ಬೇವು ಸಹ ಹಾಕಿದ್ದಾರೆ. ಎಲ್ಲ ಗಿಡಗಳಿಗೆ ಪ್ರೋನಿಂಗ್ ಮಾಡುತ್ತ ಒಳ್ಳೆಯ ಫಸಲು ತೆಗೆದು ಪ್ರತಿವರ್ಷ ಏನಿಲ್ಲವೆಂದರೂ ಸೀಬೆಯಿಂದ 6-7 ಲಕ್ಷ, ನಿಂಬೆಯಿಂದ 4-5 ಲಕ್ಷ, ಮಾವಿನಿಂದ 2-3 ಲಕ್ಷ ರೂ. ಪಡೆಯುತ್ತಿದ್ದು, ಎಲ್ಲ ಖರ್ಚು ತೆಗೆದ ಬಳಿಕ 6-8 ಲಕ್ಷ ರೂ. ಲಾಭ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಶ್ರೀನಿವಾಸ. ಇವರಲ್ಲಿ ಬೆಳೆಯುವ ತೋಟಗಾರಿಕೆ ಉತ್ಪನ್ನಗಳ ಖರೀದಿಗೆ ಹೈದರಾಬಾದ್​ನಿಂದಲೇ ವ್ಯಾಪಾರಿಗಳು ಸುಲೇಪೇಟಗೆ ಬರುತ್ತಿರುವುದು ಗಮನಾರ್ಹ. ಇದನ್ನೂ ಓದಿ: Web Exclusive: ಅಪೌಷ್ಟಿಕತೆ ಮರಣ ಪ್ರಮಾಣ ತಗ್ಗಿಸಲು ‘ಮೀನು’ ಪ್ರಯೋಗ

    ಕೃಷಿಯಿಂದ ಕುಟುಂಬ ಖುಷಿ

    ಪ್ರತಿ ಗಂಡಿನ ಯಶಸ್ಸಿನ ಹಿಂದೆ ಸ್ತ್ರೀ ಇರುತ್ತಾಳೆ ಎಂಬುದು ನಮ್ಮಲ್ಲಿ ಬಂದಿರುವ ನಾಣ್ಣುಡಿ. ಶ್ರೀನಿವಾಸ ಶ್ರಮದ ಹಿಂದೆ ಪತ್ನಿ ದೀಪಿಕಾ ಸಹಾಯವೂ ಇದೆ. ದಂಪತಿಗೆ ಆರಾಧ್ಯಾ ಹೆಸರಿನ ಪುತ್ರಿ ಇದ್ದು, ಇಡೀ ಕುಟುಂಬ ಕೃಷಿಯಿಂದ ಖುಷಿಯಾಗಿದೆ.

    ನನಗೆ ಕೃಷಿ ಖುಷಿ ತಂದಿದೆ. ಲಕ್ಷಾಂತರ ರೂ. ಆದಾಯ ತಂದುಕೊಡುವ ಈ ಕೃಷಿಯನ್ನು ಬಿಡುವುದು ಸಾಧ್ಯವೇ ಇಲ್ಲ. 2005ರಲ್ಲಿ ಎಲ್​ಎಲ್​ಬಿ ಮುಗಿಸಿದ ನಂತರ ಒಂದು ವರ್ಷ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲನಾಗಿ ಪ್ರ್ಯಾಕ್ಟಿಸ್ ಮಾಡಿದೆ. ನಂತರ ಬಿಟ್ಟು ಬಿಟ್ಟೆ. ಸದ್ಯಕ್ಕೆ ನನಗೆ ಕೃಷಿಯೇ ಪ್ರಧಾನ ಕಾಯಕ.

    | ಶ್ರೀನಿವಾಸ ಸುಲೇಪೇಟ ಪ್ರಗತಿಪರ ಕೃಷಿಕ 

     

    Web Exclusive: ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಭೂಕಂಟಕ: ಹಾರೋಹಳ್ಳಿಯಲ್ಲಿ ಆರಂಭವಾಗಬೇಕಿದ್ದ ಯೋಜನೆ ನನೆಗುದಿಗೆ

    Web Exclusive: ವಿದ್ಯಾರ್ಥಿ ವೇತನ ವಿಳಂಬ; ಎಸ್​ಎಸ್​ಪಿ ಅನುಷ್ಠಾನದಲ್ಲಿ ತೊಡಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts