More

    Web Exclusive: ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಭೂಕಂಟಕ: ಹಾರೋಹಳ್ಳಿಯಲ್ಲಿ ಆರಂಭವಾಗಬೇಕಿದ್ದ ಯೋಜನೆ ನನೆಗುದಿಗೆ

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆರಂಭಗೊಳ್ಳಬೇಕಿದ್ದ ರಾಜ್ಯದ ಪ್ರಥಮ ಮಹಿಳಾ ಉದ್ಯಮಿಗಳ ಪಾರ್ಕ್ ನಿರ್ಮಾಣಕ್ಕೆ ಭೂಕಂಟಕ ಎದುರಾಗಿದ್ದು, ಯೋಜನೆ ಕುಂಟುತ್ತಿದೆ.

    ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ಮಹಿಳಾ ಉದ್ಯಮಿಗಳ ಪಾರ್ಕ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿ ಯೋಜನೆಯನ್ನು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ತರಲು ಮುಂದಾಗಿತ್ತು. ಆದರೆ, 4 ವರ್ಷ ಕಳೆದರೂ, ಯೋಜನೆ ಜಾರಿ ಎನ್ನುವುದು ಬಾಯಿ ಮಾತಿನಲ್ಲೇ ಉಳಿದಿದೆ.

    ಭೂ ಕಂಟಕ: ಹಾರೋಹಳ್ಳಿ ಕೈಗಾರಿಕೆ ಪ್ರದೇಶದ 3ನೇ ಹಂತದಲ್ಲಿ 1,300 ಎಕರೆ ಪ್ರದೇಶದಲ್ಲಿ ಮೊದಲು 300 ಎಕರೆಯಲ್ಲಿ ಈ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಅಂತಿಮವಾಗಿ 106 ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಿ, ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಮಹಿಳಾ ಉದ್ಯಮಿಗಳಿಗೆ ಹಂಚಿಕೆ ಮಾಡುವುದು ಎಂದು ನಿರ್ಧರಿಸಲಾಗಿತ್ತು. ಆದರೆ, 3ನೇ ಹಂತದ ಕೈಗಾರಿಕೆ ಪ್ರದೇಶಕ್ಕೆ ವಶಪಡಿಸಿಕೊಂಡಿರುವ 1,300 ಎಕರೆ ಜಮೀನಿನಲ್ಲಿ 142 ಎಕರೆಗೆ ಸಂಬಂಧಿಸಿದಂತೆ ತಕರಾರಿದ್ದು, ಇದನ್ನು ಸರಿಪಡಿಸಿ, ಕೆಐಎಡಿಬಿಗೆ ಹಸ್ತಾಂತರ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.

    70 ಎಕರೆ ಕ್ಲಿಯರ್
    ಆದರೆ, ಈವರೆಗೆ 142 ಎಕರೆ ಜಮೀನಿನಲ್ಲಿ ಸುಮಾರು 70 ಎಕರೆ ಪ್ರದೇಶ ಸರ್ಕಾರಿ ಜಮೀನಾಗಿದ್ದು, ಇದನ್ನು ಕೆಐಎಡಿಬಿಗೆ ಹಸ್ತಾಂತರ ಮಾಡುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಕೈಗಾರಿಕೆಗೆ ಗುರ್ತಿಸಿರುವ ಜಾಗದಲ್ಲಿ ಸುಮಾರು 32 ಎಕರೆ ಜಾಗವನ್ನು ಸರ್ಕಾರ ತಮಗೆ ಮಂಜೂರು ಮಾಡಿದೆ ಎಂದು ಕೆಲವು ರೈತರು ಹಕ್ಕು ಪ್ರತಿಪಾದನೆ ಮಾಡಿರುವುದರಿಂದ, ಮಂಜೂರಾತಿಯ ಸಾಚಾತನವನ್ನು ಖಾತ್ರಿ ಪಡಿಸಿಕೊಂಡು ವರದಿ ನೀಡುವಂತೆಯೂ ಕನಕಪುರ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ, ಈ ಕೆಲಸಗಳು ಯಾವ ಹಂತದಲ್ಲಿವೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಜಮೀನು ಹಸ್ತಾಂತರವಾಗದ ಹೊರತು ಮಹಿಳಾ ಉದ್ಯಮಿಗಳ ಪಾರ್ಕ್ ನಿರ್ಮಾಣವೂ ಕೇವಲ ಕನಸಾಗಿಯೇ ಉಳಿಯಲಿದೆ.

    ರತ್ನಪ್ರಭಾ ಕನಸು
    ಹಿಂದೆ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅವರ ಕನಸಿನ ಕೂಸು ಈ ಮಹಿಳಾ ಉದ್ಯಮಿಗಳ ಪಾರ್ಕ್. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಕಾರಣದಿಂದಲೇ ಕೈಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿದ್ದ ವೇಳೆ ರತ್ನಪ್ರಭಾ ಸರ್ಕಾರದ ಮುಂದೆ ಇಂತಹ ಪ್ರಸ್ತಾವನೆ ಇಟ್ಟಿದ್ದರು. ಇದಕ್ಕೆ ಸರ್ಕಾರವೂ ಓಕೆ ಎಂದು ಹಾರೋಹಳ್ಳಿಯಲ್ಲಿ ಕೈಗಾರಿಕಾ ಪಾರ್ಕ್ ಆರಂಭಕ್ಕೆ ಹಸಿರು ನಿಶಾನೆ ತೋರಿತ್ತು. ಈ ಯೋಜನೆಯ ಒಟ್ಟು ವೆಚ್ಚ 37 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರ್ಕಾರ ಎಂಎಸ್ಸಿಸಿಡಿಪಿ ಯೋಜನೆಯಲ್ಲಿ 10 ಕೋಟಿ ರೂ. ನೀಡುತ್ತದೆ.

    105 ಮಂದಿ ಉದ್ಯಮಿಗಳು
    ಪ್ರಸ್ತಾಪಿತ ಮಹಿಳಾ ಉದ್ಯಮಿಗಳ ಪಾರ್ಕ್‌ನಲ್ಲಿ ಮೊದಲ ಹಂತದಲ್ಲಿ 105 ಮಹಿಳಾ ಉದ್ಯಮಿಗಳು ಕೈಗಾರಿಕೆ ಆರಂಭಿಸಲಿದ್ದಾರೆ. ಜಿಲ್ಲಾಮಟ್ಟದ ಏಕಗವಾಕ್ಷಿ ಪದ್ದತಿಯಲ್ಲಿ ಎಲ್ಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಇವರಿಗೆ ಉದ್ಯಮ ಆರಂಭಿಸಲು ಅನುಮತಿ ನೀಡಲಾಗಿದೆ. 106 ಎಕರೆ ಜಮೀನಿನಲ್ಲಿ ಕನಿಷ್ಠ 10 ಗುಂಟೆಯಿಂದ 2 ಎಕರೆವರೆಗೂ ಜಮೀನು ಹಂಚಿಕೆಯಾಗಲಿದೆ. ಭೋಗ್ಯದ ಆಧಾರದ ಮೇಲೆ ನೀಡಲಾಗುವ ಜಮೀನು, ಭೋಗ್ಯದ ಅವಧಿ ಮುಗಿದ ನಂತರ ಸೇಲ್ ಡೀಡ್ ಆಗಿ ಬದಲಾವಣೆ ಆಗಲಿದೆ.

    ಉದ್ಘಾಟನೆ ಆಗಬೇಕಿತ್ತು
    ಮೂರು ವರ್ಷಗಳ ಹಿಂದೆಯೇ ಪ್ರಥಮ ಮಹಿಳಾ ಉದ್ಯಮಿಗಳ ಪಾರ್ಕ್ ಉದ್ಘಾಟನೆ ಆಗಬೇಕಿತ್ತು. ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಪಾರ್ಕ್ ಉದ್ಘಾಟಿಸುತ್ತಾರೆ ಎಂದು ಅಧಿಕಾರಿಗಳು ಸಹ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ಮಾಡಿದ್ದರು. ಆದರೆ, ಭೂಮಿಯ ಸಮಸ್ಯೆಯಿಂದ ಮೂಲಸೌಕರ್ಯ ಕಲ್ಪಿಸಲೂ ಸಾಧ್ಯವಾಗದೇ ಯೋಜನೆ ನನೆಗುದಿಗೆ ಬಿದ್ದಿದ್ದು, ಸರ್ಕಾರ ಇತ್ತ ಗಮನಹರಿಸಬೇಕಿದೆ.

    ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಸಂಬಂಧಿಸಿದಂತೆ ಎದುರಾಗಿರುವ ಜಮೀನಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದು 70 ಎಕರೆ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡುವಂತೆ ಕೋರಲಾಗಿದೆ. ಕೆಲವು ರೈತರಿಗೆ ಭೂಮಿ ಮಂಜೂರು ಮಾಡಿಕೊಡಲಾಗಿದೆ ಎನ್ನಲಾಗಿದ್ದು, ಇದನ್ನು ಪರಿಶೀಲಿಸಿ ವರದಿ ನೀಡುವಂತೆ ಕನಕಪುರ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೇನೆ.

    ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts