More

    Web Exclusive: ವಿದ್ಯಾರ್ಥಿ ವೇತನ ವಿಳಂಬ; ಎಸ್​ಎಸ್​ಪಿ ಅನುಷ್ಠಾನದಲ್ಲಿ ತೊಡಕು

     | ದೇವರಾಜ್ ಎಲ್. ಬೆಂಗಳೂರು

    ವಿದ್ಯಾರ್ಥಿ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ಇನ್ನೂ ಸಿಕ್ಕಿಲ್ಲ.!

    ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರೂಪಿಸಿದ ಏಕಛತ್ರ ವ್ಯವಸ್ಥೆಯಾದ ‘ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್(ಎಸ್​ಎಸ್​ಪಿ)’ ಲಕ್ಷೋಪಲಕ್ಷ ಅರ್ಜಿಗಳು ಬಂದಿದ್ದು, ವಿದ್ಯಾರ್ಥಿಗಳು ಆಧಾರ್ ಜೋಡಣೆ ಮಾಡದಿರುವುದು ಸೇರಿದಂತೆ ಇತರೆ ಅಧಿಕಾರಿಗಳ ಲೋಪದಿಂದ 2019-20ನೇ ಸಾಲಿನ ವಿದ್ಯಾರ್ಥಿ ವೇತನ ಇನ್ನೂ ಇಲಾಖೆ ಬಳಿಯೇ ಉಳಿದುಕೊಂಡಿದೆ.

    ಸಮಾಜ ಕಲ್ಯಾಣ ಇಲಾಖೆಗೆ ವಿದ್ಯಾರ್ಥಿ ವೇತನ ಕೋರಿ 3,54,871 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಇಲಾಖೆಯು 2,20,000 ಅರ್ಜಿಗಳಿಗೆ ವೇತನ ಪಾವತಿ ಮಾಡಿದೆ. 1,34 ಲಕ್ಷ ಅರ್ಜಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಅರ್ಜಿಗಳನ್ನು ತಡೆ ಹಿಡಿಯಲಾಗಿದೆ.

    ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಸಿಗದೇ ಇರುವುದರಿಂದ ಇಂದಲ್ಲ, ನಾಳೆ ವಿದ್ಯಾರ್ಥಿ ವೇತನದ ಹಣ ಖಾತೆ ಬರಲಿದೆ ಎಂದು ಕಾಯುವುದರಲ್ಲೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಈ ವಿಳಂಬಕ್ಕೆ ಇಲಾಖೆ ಅಧಿಕಾರಿಗಳು ಸೂಕ್ತ ಕಾರಣ ನೀಡದೇ ಇರುವುದು ವಿದ್ಯಾರ್ಥಿಗಳ ಅಸಮಧಾನಕ್ಕೆ ಕಾರಣವಾಗಿದೆ. ಒಟ್ಟಾರೆ ವಿದ್ಯಾರ್ಥಿ ವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು 363 ಕೋಟಿ ರೂ. ಮೀಸಲಿಟ್ಟಿದ್ದು, ಈ ಪೈಕಿ 290 ಕೋಟಿ ರೂ.ಪಾವತಿಸಿದೆ. 73 ಕೋಟಿ ರೂ.ಗಳು ಮಾತ್ರ ಬಾಕಿ ಉಳಿದಿದೆ. ಅರ್ಜಿಗಳಿಗೆ ಸೂಕ್ತ ದಾಖಲೆಗಳು ಸಲ್ಲಿಕೆಯಾದ ಬಳಿಕ ವಿತರಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

    ವಿದ್ಯಾರ್ಥಿಗಳ ಪ್ರಾಬ್ಲಂ: ಬಹುತೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಸುಮ್ಮನಾಗಿದ್ದಾರೆಯೇ ವಿನಹಃ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಹಲವಾರು ಬಾರಿ ಅರ್ಜಿಗಳ ಸಲ್ಲಿಕೆಗೆ ದಿನಾಂಕ ವಿಸ್ತರಿಸಿದರೂ ಸಹ ವಿದ್ಯಾರ್ಥಿಗಳು ದಾಖಲೆಗಳನ್ನು ನೀಡಿದೆಯೇ ತಮ್ಮ ನಿರ್ಲಕ್ಷ್ಯತನ ತೋರಿದ್ದಾರೆ. ಇದರಿಂದ ಈ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಲ್ಲವೆಂದು ಪರಿಗಣಿಸಿ ಇವರಿಗೆ ವಿದ್ಯಾರ್ಥಿ ವೇತನ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: Web Exclusive ಸಮರ್ಥತೆ ಪರೀಕ್ಷೆಗೆ ಅರಣ್ಯ ಅಭಿವೃದ್ಧಿ ನಿಗಮ ಮೀನ-ಮೇಷ; ಕಾರಣ ತಿಳಿಸದೆ ಪರೀಕ್ಷೆ ಮುಂದೂಡಿಕೆ

    ಅಧಿಕಾರಿಗಳ ಎಡವಟ್ಟು: ಕಾಲೇಜಿಗೆ ಪ್ರವೇಶ ಪಡೆದ ಮೇಲೆ ವಿದ್ಯಾರ್ಥಿಯು ಪ್ರವೇಶ ಶುಲ್ಕ ಪಾವತಿಸಿದ್ದರೆ ಆ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆಯು ಕಾಲೇಜು ಆಡಳಿತ ಮಂಡಳಿಗೆ ಮರುಪಾವತಿ ಮಾಡುತ್ತದೆ. ಶುಲ್ಕ ಪಾವತಿಸಲಿಲ್ಲವಾದರೆ ನೇರವಾಗಿ ವಿದ್ಯಾರ್ಥಿಗಳಿಗೆ ನೀಡುತ್ತದೆ. ಆದರೆ, ಕೆಲವು ಕಾಲೇಜುಗಳಲ್ಲಿ ಅಧಿಕಾರಿಗಳು ಕಾಲೇಜಿಗೆ ಸೇರಬೇಕಾದ ಹಣವನ್ನು ವಿದ್ಯಾರ್ಥಿಗೆ ಮತ್ತು ವಿದ್ಯಾರ್ಥಿಗೆ ಸೇರಬೇಕಾದ ಹಣವನ್ನು ಕಾಲೇಜಿಗೆ ವರ್ಗಾಯಿಸುವಂತೆ ಅರ್ಜಿಯಲ್ಲಿ ನಮೂದಿಸಿದ್ದ ಕಾರಣ ಇದನ್ನು ಸರಿಪಡಿಸಲು ವಿಳಂಬವಾಗಿದೆ.

    ಮುಂದಿನ ಬಾರಿ ಅರ್ಜಿ ಬೇಡ: ಇದೇ ಮೊದಲ ಬಾರಿಗೆ ಎಸ್​ಎಸ್​ಪಿ ಯೋಜನೆ ಜಾರಿಗೆ ತಂದ ಕಾರಣ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ಹಂತದಲ್ಲಿ ಇದನ್ನು ಅರ್ಥ ಮಾಡಿಕೊಂಡು ಅನುಷ್ಠಾನ ಮಾಡುವುದಕ್ಕೆ ವಿಳಂಬವಾಗಿದೆ.

    ಮುಂದಿನ ವರ್ಷದಿಂದ ಈ ಗೊಂದಲ ಇರುವುದಿಲ್ಲ. ಅಲ್ಲದೆ, ವಿದ್ಯಾರ್ಥಿಗಳು ಸಹ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಹಾಲಿ ಕಳುಹಿಸಿರುವ ದಾಖಲೆಗಳ ಆಧಾರದ ಮೇಲೆ ಮುಂದಿನ ಬಾರಿಗೆ ವಿದ್ಯಾರ್ಥಿ ವೇತನ ವಿತರಿಸುತ್ತೇವೆಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

    Web Exclusive: ನೆರೆ ಲೋಕೋಪಯೋಗಿ ಇಲಾಖೆಗೆ ಹೊರೆ; ತುರ್ತು ದುರಸ್ತಿ ಕೈಬಿಟ್ಟರೆ ಹೆಚ್ಚುವರಿ ಬರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts