More

    Web Exclusive |ಶೇ. 90 ಆಟೋ-ಟ್ಯಾಕ್ಸಿ ಚಾಲಕರಿಗೆ ಕರೊನಾ ಪ್ಯಾಕೇಜ್: ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ, 29 ಸಾವಿರ ಅರ್ಜಿ ಪರಿಹರಿಸಲು ಹೆಣಗಾಟ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ಕರೊನಾ ಆರ್ಥಿಕ ಪ್ಯಾಕೇಜ್ ಇನ್ನೂ 29,500 ಮಂದಿಗೆ ತಲುಪಿಲ್ಲ. ಕರೊನಾ- ಲಾಕ್​ಡೌನ್ ಕಾರಣದಿಂದ ಸಮಸ್ಯೆಗೊಳಗಾದ ವರ್ಗಕ್ಕೆ ಪರಿಹಾರ ಘೋಷಿಸಲಾಗಿತ್ತು. ಈ ಪೈಕಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಒಮ್ಮೆ ಪರಿಹಾರವಾಗಿ 5 ಸಾವಿರ ರೂ. ಪರಿಹಾರ ಧನವನ್ನು ಷರತ್ತಿಗೊಳಪಟ್ಟು ನೀಡಲು ಮಂಜೂರಾತಿ ನೀಡಿ ಆದೇಶಿಸಲಾಗಿತ್ತು.

    ಈ ಸಂಬಂಧ 2020ರ ಮೇ 16, ಜೂನ್ 10 ಮತ್ತು ಆಗಸ್ಟ್ 4ರಂದು ಆದೇಶಗಳು ಹೊರಬಿದ್ದಿದ್ದು, 117.51 ಕೋಟಿ ರೂ.ಸಹಾಯಧನ ಬಿಡುಗಡೆ ಮಾಡಲಾಗಿತ್ತು. ಸೇವಾಸಿಂಧು ವೆಬ್ ಪೋರ್ಟಲ್​ನಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಪರಿಹಾರ ಧನ ಕೋರಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್) ಮೂಲಕ ನೇರವಾಗಿ ಜಮಾ ಮಾಡಲಾಗಿದೆ.

    ಒಟ್ಟು ಅರ್ಜಿಗಳು 2,45,852 ಸ್ವೀಕೃತವಾಗಿದ್ದು, ಈ ಪೈಕಿ 2,15,612 ಫಲಾನುಭವಿಗಳಿಗೆ ಐದು ಸಾವಿರದಂತೆ ಪರಿಹಾರ ವಿತರಿಸಲಾಗಿದೆ. ಚಾಲನಾ ಅನುಜ್ಞಾ ಪತ್ರ ಮತ್ತು ಆಧಾರ್ ಕಾರ್ಡಿನ ವಿವರಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ 2,507 ಅರ್ಜಿ ತಿರಸ್ಕೃತಗೊಂಡಿದ್ದರೆ, 2,676 ಅರ್ಜಿ ಇನ್ನೂ ವಿವಿಧ ಹಂತದ ಪರಿಶೀಲನಾ ಹಂತದಲ್ಲಿದೆ. ಗುರುತಿನ ಚೀಟಿ ಅರ್ಹತಾ ದಿನಾಂಕದ ಅನುತ್ತೀರ್ಣ, ಡಿಬಿಟಿ ಅನುತ್ತೀರ್ಣದಿಂದ 25,057 ಅರ್ಜಿ ಬಗೆಹರಿಸುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಆದರೂ ಪ್ರಯತ್ನ ನಿಲ್ಲಿಸಿಲ್ಲ.

    ಐಡಿ ವ್ಯಾಲಿಡೇಷನ್ ಅನುತ್ತೀರ್ಣ ತಾಂತ್ರಿಕ ಸಮಸ್ಯೆಯಿಂದ ಅಥವಾ ಫಲಾನುಭವಿಗಳ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿ ಇಲ್ಲದ ಕಾರಣ, ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಆಗದಿರುವ ಹಿನ್ನೆಲೆ ಪರಿಹಾರ ಧನ ವಿತರಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

    ಬಾಕಿ ಉಳಿದಿರುವ ಅರ್ಜಿದಾರರಿಗೆ ಪರಿಹಾರ ಧನ ವಿತರಿಸುವ ಸಂಬಂಧ ಹೆಚ್ಚುವರಿ ಬ್ಯಾಂಕ್ ಖಾತೆಯ ಮಾಹಿತಿ ದಾಖಲಿಸುವುದು ಅವಶ್ಯಕ, ಸೇವಾ ಸಿಂಧು ಪೋರ್ಟಲ್​ನಲ್ಲಿ ಹೆಚ್ಚುವರಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಾಖಲಿಸುವ ಮೂಲಕ ಪರಿಹಾರ ಧನ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

    ಎಲ್ಲಾ ಅರ್ಜಿದಾರರಿಗೆ ಅವರ ಹೆಚ್ಚುವರಿ ಬ್ಯಾಂಕ್ ಖಾತೆಗಳನ್ನು ಸೇವಾಸಿಂಧು ಪೋರ್ಟಲ್​ನಲ್ಲಿ ದಾಖಲಿಸುವಂತೆ ಕೋರಿ ಎರಡು ಬಾರಿ ಅವಕಾಶ ನೀಡಲಾಗಿತ್ತು. ಎಸ್​ಎಂಎಸ್ ಮೂಲಕ ಸಂದೇಶ ರವಾನಿಸಿದ್ದು, ಹಲವಾರು ಮಂದಿ ಮಾಹಿತಿ ನೀಡಿದ್ದಾರೆ. ಇದೀಗ ಸ್ವೀಕೃತವಾದ ಮಾಹಿತಿಯನ್ನು ಪರಿಶೀಲಿಸಿ ಪರಿಹಾರ ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

    ಎಲ್ಲ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸ್ವೀಕರಿಸುವುದು, 2020ರ ಮಾರ್ಚ್ 24ರಂದು ಚಾಲನೆ ಪರವಾನಗಿ ಪ್ರಮಾಣ ಪತ್ರ ಹೊಂದಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಮಾತ್ರ ಯೋಜನೆ ಅನ್ವಯಿಸುವುದು, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆ ಮೂರು ಅಂಶಗಳು ಎಲ್ಲ ಫಲಾನುಭವಿಗಳಿಗೆ ಅನನ್ಯವಾಗಿರುವುದು ಕಡ್ಡಾಯ, ಪರಿಹಾರ ಧನವು ಕೇವಲ ಚಾಲನೆ ಪರವಾನಗಿ ಪ್ರಮಾಣ ಪತ್ರವನ್ನು ಹೊಂದಿರುವ ಹಾಗೂ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರವೇ ಸಂದಾಯವಾಗಬೇಕು ಎಂಬ ಕಡ್ಡಾಯ ಷರತ್ತು ಹಾಕಿಕೊಳ್ಳಲಾಗಿತ್ತು. ಅನರ್ಹರಿಗೆ ಸಹಾಯಧನ ಸಿಗಬಾರದು ಎಂಬ ಉದ್ದೇಶದಿಂದ ಷರತ್ತು ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

    ಒಂದು ವೇಳೆ ಆಟೋ, ಟ್ಯಾಕ್ಸಿ ಮಾಲಿಕರಿಗೆ ಸಂದಾಯವಾದಲ್ಲಿ ಅಥವಾ ಮಾಲಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಟೋ, ಟ್ಯಾಕ್ಸಿ ಹೊಂದಿದ್ದು ಚಾಲಕರಿಗೆ ಪರಿಹಾರ ಸಿಗದಂತಾಗುತ್ತದೆ ಎಂಬ ಕಾರಣಕ್ಕೆ ಸೂಕ್ಷ್ಮವಾಗಿ ಅವಲೋಕನ ನಡೆಸಲಾಗಿತ್ತು. ಡೂಪ್ಲಿಕೇಷನ್ ಅಥವಾ ಡಬಲ್ ಪೇಮೆಂಟ್ ಆಗದಂತೆ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ ಅನ್ವಯವಾಗಿ ಲಿಂಕ್ ಆಗಿರುವ ಬಗ್ಗೆ ಗಮನಿಸಲಾಗಿತ್ತು ಎಂಬುದು ವಿಶೇಷ ಸಂಗತಿ.

    ಮುಖ್ಯಾಂಶಗಳು

    1. ಷರತ್ತು ಹಾಕಿ, ಸೂಕ್ಷ್ಮವಾಗಿ ದಾಖಲೆ ಪರಿಶೀಲಿಸಿದ್ದರಿಂದ ಅರ್ಹರಿಗೆ ಸಹಾಯಧನ.

    2. 29 ಸಾವಿರ ಅರ್ಜಿಗಳಲ್ಲಿ ಐಡಿ ವ್ಯಾಲಿಡೇಷನ್, ಡಿಬಿಟಿ ಸಮಸ್ಯೆ

    3. ಶೇ.90 ಅರ್ಜಿದಾರರಿಗೆ ಪರಿಹಾರ ವಿತರಣೆ ಯಶಸ್ವಿ

    ಅಧಿಕಾರಿಗಳಿಗೆ ತೃಪ್ತಿ: ಒಂದು ವೇಳೆ ಈ ಕನಿಷ್ಠ ಷರತ್ತು ಹಾಕದಿದ್ದರೆ ಸರ್ಕಾರದ ಹಣ ದುರುಪಯೋಗ ಎಂಬ ಕೂಗು ಕೇಳಿಬರುತ್ತಿತ್ತು, ಈಗ ಸಣ್ಣ ಪುಟ್ಟ ಟೀಕೆ, ಆರೋಪ ಹೊರತುಪಡಿಸಿ ಅತಿ ದೊಡ್ಡ ಸಂಖ್ಯೆಯಲ್ಲಿ ಸಹಾಯಧನವನ್ನು ಕಾಲಮಿತಿಯಲ್ಲಿ, ಪಾರದರ್ಶಕವಾಗಿ ತಲುಪಿಸಲಾಗಿದ್ದು, ಈ ಕಾರ್ಯದ ಬಗ್ಗೆ ತೃಪ್ತಿ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಚಿಕ್ಕವಯಸ್ಸಲ್ಲೇ ಬಹಳ ಎತ್ತರಕ್ಕೇರಿದ್ದಾಳೆ ಈ ಬಾಲಕಿ!; ಏಷ್ಯಾದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಈಕೆ ಈಗ ಸಾಧಕಿ…

    ಮದ್ವೆಗೆ ಮನೆಯವ್ರು ಒಪ್ಲಿಲ್ಲ ಅಂತ ಪ್ರಿಯಕರ ನೇಣು ಹಾಕಿಕೊಂಡ; ಪ್ರೇಮಿ ಸತ್ತಿದ್ದಕ್ಕೆ ಊಟ ಬಿಟ್ಟ ಪ್ರೇಯಸಿ ಬೆಂಕಿ ಹಾಕಿಕೊಂಡು ಸತ್ತಳು..!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts