More

    ಕಟ್ಟಿದ ಹಣಕ್ಕೆ ಕಾದುಕುಳಿತ ನೇಕಾರರು!

    ವಿಜಯವಾಣಿ ವಿಶೇಷ ಗದಗ

    ಕೈಮಗ್ಗ ಮತ್ತು ಜವಳಿ ಇಲಾಖೆಯ ‘ಮಿತವ್ಯಯ ನಿಧಿ ಯೋಜನೆ’ಯ ಮರುಪಾವತಿ ಮಾಡುವ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ. ಈ ಯೋಜನೆಯಡಿ ನೇಕಾರರು ಕಟ್ಟಿದ ಹಣವನ್ನು ಮರುಪಾವತಿಸಲು ಸರ್ಕಾರ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಸತಾಯಿಸತೊಡಗಿದೆ.

    2019ರಲ್ಲಿ ಇಲಾಖೆ ಗಣಕೀಕೃತಗೊಂಡ ಮೇಲೆ ಖಜಾನೆ 1 (ಕೆ1) (ಮ್ಯಾನುವಲ್) ಖಾತೆಯನ್ನು ಖಜಾನೆ 2 (ಕೆ2) (ಆನ್​ಲೈನ್) ಮಾಡಲಾಗಿದೆ. ಕೆ1 ಖಾತೆಯಲ್ಲಿರುವ ಹಣ ಕೆ2 ಖಾತೆಗೆ ಜಮಾ ಆಗುತ್ತಿಲ್ಲ. ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾಗಿದೆ. ಇದು ಕೇವಲ ಗದಗ ಜಿಲ್ಲೆಯ ಸಮಸ್ಯೆಯಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ. ಈ ಕುರಿತು ಅನೇಕ ಸಲ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ.

    ಹಣ ಕೈಗೆ ಬಂದರೆ ಮನೆ ಕಟ್ಟಿಸುವುದು, ಮಕ್ಕಳ ಮದುವೆ ಇತ್ಯಾದಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಕಾದು ಕುಳಿತು ವರ್ಷ ಕಳೆದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಇದರಿಂದ ನೇಕಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

    ಈ ಯೋಜನೆಯಡಿ ಕರ್ನಾಟಕ ಕೈಮಗ್ಗ ನಿಗಮದಡಿ ಕೆಲಸ ಮಾಡುತ್ತಿರುವ ಜಿಲ್ಲೆಯ 750ಕ್ಕೂ ಹೆಚ್ಚು ನೇಕಾರರು 15 ವರ್ಷ ಹಣ ಕಟ್ಟಿದ್ದು, ಅವಧಿ ಪೂರ್ಣಗೊಂಡಿದೆ. ಗದಗ ಜಿಲ್ಲೆಗೆ ಅಂದಾಜು 4 ಕೋಟಿ ರೂಪಾಯಿ ಬರಬೇಕಿದೆ.

    ಏನಿದು ಯೋಜನೆ?: ಕೈಮಗ್ಗ ಇಲಾಖೆ ನೇಕಾರರಿಗೆ ಮಿತವ್ಯಯ ನಿಧಿ ಯೋಜನೆಯನ್ನು 1985 ರಲ್ಲಿ ಜಾರಿಗೊಳಿಸಿದ್ದು, 15 ವರ್ಷಗಳ ಅವಧಿಯ ಯೋಜನೆ ಇದಾಗಿದೆ. ನೇಕಾರ, ತಾನು ದುಡಿದ ಹಣದಲ್ಲಿ ಪ್ರತಿ ತಿಂಗಳು ಶೇ. 8ರಷ್ಟು ಹಣವನ್ನು 15 ವರ್ಷಗಳ ಕಾಲ ಇಲಾಖೆಗೆ ಕಟ್ಟಬೇಕು. ನೇಕಾರ ತನ್ನ ದುಡಿಮೆಯಿಂದ ಯೋಜನೆಗೆ ವರ್ಷಕ್ಕೆ ಒಟ್ಟು 1 ಲಕ್ಷ ರೂ. ಕಟ್ಟಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯಾಗಿ 1 ಲಕ್ಷ ರೂ. ಅದಕ್ಕೆ ಜಮೆ ಮಾಡುತ್ತದೆ. ಅಲ್ಲದೆ, ವರ್ಷಕ್ಕೊಮ್ಮೆ ಒಟ್ಟು ಹಣಕ್ಕೆ ಶೇ. 12ರಷ್ಟು ಬಡ್ಡಿಯನ್ನು ಸಹ ನೀಡುತ್ತದೆ. ನೇಕಾರರ ದುಡಿಮೆ ಹಣದಲ್ಲಿ ಶೇ. 8ರಷ್ಟನ್ನು ಯೋಜನೆಗೆ ಸೇರಿಸಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.2019ರವರೆಗೆ ಈ ಯೋಜನೆಯಡಿ ನೇಕಾರರ ಹಣವನ್ನು ಕೈಮಗ್ಗ ಇಲಾಖೆ ಮತ್ತು ಕೆಎಚ್​ಡಿಸಿ ಅಧಿಕಾರಿಗಳು ಚಲನ್ ಮೂಲಕ ಜಿಲ್ಲಾ ಖಜಾನೆಗೆ ಪಾವತಿಸುತ್ತಿದ್ದರು. ಇದೀಗ ಎಲ್ಲವೂ ಗಣಕೀಕೃತವಾಗಿದ್ದು, ಅಧಿಕಾರಿಗಳು ನೇಕಾರರ ಹಣವನ್ನು ಸಂಬಂಧಿಸಿದ ಖಾತೆಗೆ ಆನ್​ಲೈನ್ ಮೂಲಕ ಪಾವತಿಸುತ್ತಾರೆ.

    ಮಿತವ್ಯಯ ನಿಧಿ ಯೋಜನೆ ಮರುಪಾವತಿ ಕುರಿತಂತೆ ಸಮಸ್ಯೆ ಉಂಟಾಗಿದೆ. ಇದನ್ನು ಬಗೆಹರಿಸುವುದು ಯಾವಾಗ? ಅಧಿಕಾರಿಗಳು ಇಂದು, ನಾಳೆ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಕೂಡಲೆ ಇತ್ತ ಕಡೆಗೆ ಗಮನ ಹರಿಸಬೇಕು.

    | ಮಲ್ಲಿಕಾರ್ಜುನ ಗಾಳಿ, ನೇಕಾರ, ಗಜೇಂದ್ರಗಡ

    ‘ಮಿತವ್ಯಯ ನಿಧಿ ಯೋಜನೆ’ ಮರುಪಾವತಿ ಕುರಿತಂತೆ ತಾಂತ್ರಿಕ ದೋಷ ಉಂಟಾಗಿದ್ದು, 15 ದಿನದೊಳಗೆ ಸಮಸ್ಯೆ ಬಗೆಹರಿಯಲಿದೆ. ಯೋಜನೆಯ ಹಣ ಸಂಬಂಧಿಸಿದ ಎಲ್ಲ ನೇಕಾರರಿಗೂ ಸಿಗಲಿದೆ.

    | ಎಸ್.ಎಸ್. ಕುಲಕರ್ಣಿ, ಉಪನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts