More

    ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಅಡಿಲೇಡ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕಾರ್ಯತಂತ್ರ ಸಿದ್ಧಗೊಳಿಸಿದ್ದೇವೆ ಎಂದು ಆಸೀಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮಂಗಳವಾರ ಹೇಳಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಸರಣಿಯ ಮೊದಲ ಟೆಸ್ಟ್ ಮಾತ್ರ ಆಡಲಿದ್ದಾರೆ. ಆದರೆ ಈ ಪಂದ್ಯದಲ್ಲೇ ಅವರು ಭಾರತಕ್ಕೆ ಮೇಲುಗೈ ಒದಗಿಸಿ ಸರಣಿಗೆ ದಿಕ್ಸೂಚಿ ರೂಪಿಸುವುದನ್ನು ತಡೆಯುವ ಸಲುವಾಗಿ ಅವರನ್ನು ಕಟ್ಟಿಹಾಕಲಿದ್ದೇವೆ ಎಂದು ಲ್ಯಾಂಗರ್ ತಿಳಿಸಿದ್ದಾರೆ.

    ಸ್ಲೆಡ್ಜಿಂಗ್‌ಗೆ ಬದಲಾಗಿ ಕೌಶಲದ ಮೂಲಕವೇ ಕೊಹ್ಲಿಯ ಮೇಲೆ ಆಕ್ರಮಣ ನಡೆಸಲಿದ್ದೇವೆ ಎಂದೂ ಲ್ಯಾಂಗರ್ ಸ್ಪಷ್ಟಪಡಿಸಿದ್ದಾರೆ. ‘ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಪ್ರಯೋಜನಕ್ಕೆ ಬರಲಾರದು. ಭಾವನೆಗಳಿಗೆ ಬದಲಾಗಿ ಕೌಶಲಗಳಿಂದಲೇ ಅವರ ವಿರುದ್ಧ ಆಡುವೆವು. ಅವರನ್ನು ಹೇಗೆ ಔಟ್ ಮಾಡಬಹುದು ಎಂಬುದರ ಬಗ್ಗೆಯಷ್ಟೇ ಮಾತನಾಡುತ್ತೇವೆ’ ಎಂದು ಲ್ಯಾಂಗರ್ ಹೇಳಿದ್ದಾರೆ.

    ‘ಕೊಹ್ಲಿ ಶ್ರೇಷ್ಠ ಆಟಗಾರ ಮತ್ತು ಅಷ್ಟೇ ಶ್ರೇಷ್ಠ ನಾಯಕ. ನನಗೆ ಅವರ ಮೇಲೆ ಅಪಾರ ಗೌರವವಿದೆ. ಆದರೆ ನಾವು ಅವರ ವಿರುದ್ಧ ಕಾರ್ಯತಂತ್ರ ಸಿದ್ಧಪಡಿಸಿದ್ದೇವೆ. ಯಾಕೆಂದರೆ ಅವರು ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಭಾರತ ತಂಡಕ್ಕೆ ಎಷ್ಟು ಪ್ರಮುಖವಾದವರು ಎಂಬುದು ತಿಳಿದಿದೆ. ನಮ್ಮ ಯೋಜನೆಯನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ’ ಎಂದು ಲ್ಯಾಂಗರ್ ವಿವರಿಸಿದ್ದಾರೆ.

    ಭಾರತ ತಂಡ ಕೇವಲ ಒಂದೇ ಅಹರ್ನಿಶಿ ಟೆಸ್ಟ್ ಆಡಿದ್ದರೆ, ಆಸೀಸ್ ಹೆಚ್ಚಿನ ಡೇ-ನೈಟ್ ಟೆಸ್ಟ್ ಆಡಿದ ಅನುಭವ ಹೊಂದಿದೆ. ಆದರೆ ಅಡಿಲೇಡ್‌ನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಈ ಅಂಶವೇ ಆಸೀಸ್‌ಗೆ ಮೇಲುಗೈ ತಂದುಕೊಡದು ಎಂದು ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

    ‘ಉತ್ತಮ ಆಟಗಾರರು ಮತ್ತು ಉತ್ತಮ ತಂಡಗಳು ಯಾವಾಗಲೂ ದೊಡ್ಡ ಪಂದ್ಯಗಳಿಗೆ ಅಥವಾ ಯಾವುದೇ ಬಣ್ಣದ ಚೆಂಡುಗಳಿಗೆ ಹೊಂದಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು. ಹೀಗಾಗಿ ಹಿಂದೆ ಏನಾಗಿತ್ತು ಎಂಬುದು ಮುಖ್ಯವಲ್ಲ. ಭಾರತ ತಂಡ ಈಗಷ್ಟೇ ಅಹರ್ನಿಶಿ ಅಭ್ಯಾಸ ಪಂದ್ಯ ಆಡಿ ಬಂದಿದೆ. ನಾವು ಕೂಡ ಹೊನಲು ಬೆಳಕಿನಡಿ ಅಭ್ಯಾಸ ನಡೆಸಿದ್ದೇವೆ. ಕಳೆದ 12 ತಿಂಗಳಿನಿಂದ ನಾವು ಟೆಸ್ಟ್ ಪಂದ್ಯ ಆಡಿಲ್ಲ’ ಎಂದು ಲ್ಯಾಂಗರ್ ವಿವರಿಸಿದ್ದಾರೆ.

    ಭಾರತ ತಂಡ 2018-19ರ ಕಳೆದ ಪ್ರವಾಸದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಈ ಬಾರಿ ನಾವು ಸರಣಿ ಗೆಲ್ಲಲು ಪ್ರಯತ್ನಿಸಿದರೂ, ಸೇಡು ಎಂಬ ಪದವನ್ನು ಬಳಸಲಾರೆವು ಎಂದು ಲ್ಯಾಂಗರ್ ತಿಳಿಸಿದ್ದಾರೆ. ಐಪಿಎಲ್‌ನಿಂದಾಗಿ ಉಭಯ ತಂಡಗಳ ಆಟಗಾರರ ನಡುವಿನ ಸಂಬಂಧ ಉತ್ತಮವಾಗಿದೆ. ಐಪಿಎಲ್‌ನಲ್ಲಿ ಜತೆಯಾಗಿ ಆಡುವುದರಿಂದ ಪರಸ್ಪರರಿಗೆ ಸಂಸ್ಕೃತಿಯನ್ನು ಅರಿತುಕೊಳ್ಳಲು ನೆರವಾಗಿದೆ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts