More

    ‘ನಮ್ಮ ತಲೆಯನ್ನು ನಾವೇ ನೇಣಿನ ಕುಣಿಕೆಗೆ ಹಾಕಿಕೊಳ್ಳುವಷ್ಟು ನಾಚಿಕೆಯ ವಿಷಯ ಇದು…’: ಕಪಿಲ್​ ಸಿಬಲ್​

    ನವದೆಹಲಿ: ಬಿಹಾರದ ಮುಜಾಫರ್​ಪುರದ ರೈಲ್ವೆ ಸ್ಟೇಶನ್​ನಲ್ಲಿ ಪುಟ್ಟ ಮಗುವೊಂದು ತನ್ನ ಅಮ್ಮನ ಶವಕ್ಕೆ ಹೊದಿಸಿದ್ದ ಬಟ್ಟೆಯೊಂದಿಗೆ ಆಟವಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಈ ಕರುಣಾಜನಕ ದೃಶ್ಯವನ್ನು ನೋಡಿದರೆ ಎಂಥವರ ಮನಸ್ಸಾದರೂ ಕರಗುತ್ತದೆ. ಕರುಳು ಹಿಂಡುತ್ತದೆ.

    ಶನಿವಾರ ಗುಜರಾತ್​​ನಿಂದ ಹೊರಟಿದ್ದ ಶ್ರಮಿಕ್​ ವಿಶೇಷ ರೈಲಿನಲ್ಲಿ ಪ್ರಯಾಣ ಮಾಡಿದ್ದ ಈ ವಲಸೆ ಕಾರ್ಮಿಕ ಮಹಿಳೆ ಬಿಹಾರ ರೈಲ್ವೆ ಸ್ಟೇಶನ್​ನಲ್ಲಿ ಡಿ ಹೈಡ್ರೇಶನ್​, ಹಸಿವಿನಿಂದ ಮೃತಪಟ್ಟಿದ್ದರು.

    ಆಕೆಯ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ, ಈಕೆಗೆ ಮೊದಲೇ ಹೃದಯ ಸಮಸ್ಯೆಯಿತ್ತು. ಮಾ.22ರಂದು ಶಸ್ತ್ರಚಿಕಿತ್ಸೆಯೂ ಆಗಿತ್ತು. ಆಸ್ಪತ್ರೆಯಲ್ಲಿ ಇದ್ದ ಅವರು ಇತ್ತೀಚೆಗಷ್ಟೇ ಡಿಸ್​ಚಾರ್ಜ್​ ಆಗಿದ್ದರು. ಹಾಗೇ ಮೇ 24ರಂದು ಪ್ರಯಾಣ ಬೆಳೆಸಿದ್ದರು.

    ಇದನ್ನೂ ಓದಿ: VIDEO: ಜೀವವಿಲ್ಲದೆ ಮಲಗಿರುವ ಅಮ್ಮನ ಶವದ ಹೊದಿಕೆಯೊಂದಿಗೆ ಕಂದನ ಆಟ; ಮನಕಲಕುವ ದೃಶ್ಯ ಇದು

    ರೈಲಿನಲ್ಲಿಯೇ ಉಷ್ಣತೆ, ಡಿ ಹೈಡ್ರೇಶನ್​ನಿಂದ ಬಳಲುತ್ತಿದ್ದ ಅವರು ಮುಜಾಫರ್​ಪುರದ ರೈಲ್ವೆ ಸ್ಟೇಶನ್​ನಲ್ಲಿ ಇಳಿಯುತ್ತಿದ್ದಂತೆ ಸಾವನ್ನಪ್ಪಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಅದರಲ್ಲಿ ಒಂದು ತೀರ ಪುಟ್ಟ ಹಸುಗೂಸು. ಆಗಷ್ಟೇ ನಡೆಯಲು ಕಲಿತಂತಿರುವ ಅದು, ಶವವಾಗಿ ಬಿದ್ದ ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತ, ಆಕೆಗೆ ಹೊದಿಸಿದ್ದ ಚಾರದದೊಂದಿಗೆ ಆಟವಾಡುತ್ತಿತ್ತು. ಈ ವಿಡಿಯೋ ನೋಡಿದ ಅದೆಷ್ಟೋ ಜನ ಶೇರ್​ ಮಾಡಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದರು.

    ಇದೀಗ ಕಾಂಗ್ರೆಸ್ ಹಿರಿಯ ಮುಖಂಡ, ನ್ಯಾಯವಾದಿ ಕಪಿಲ್​ ಸಿಬಲ್ ಅವರೂ ಕೂಡ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ನಾವೆಲ್ಲ ತಲೆತಗ್ಗಿಸುವಂಥ ಸನ್ನಿವೇಶ ಇದು ಎಂದು ದುಃಖ ಭರಿತರಾಗಿ ಟ್ವೀಟ್ ಮಾಡಿದ್ದಾರೆ.
    ವಲಸೆ ಕಾರ್ಮಿಕರ ಸುರಕ್ಷತೆ ನಮ್ಮ ಜವಾಬ್ದಾರಿಯಲ್ಲವೇ? ಆ ತಾಯಿ ಬಾಯಾರಿಕೆ, ಹಸಿವಿನಿಂದ ಸಾವನ್ನಪ್ಪಿದ್ದರೆ, ಅವರ ಹಸುಗೂಸು ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿದೆ. ಶ್ರಮಿಕ್​ ವಿಶೇಷ ರೈಲಿನಲ್ಲಿ ಆಹಾರವಿಲ್ಲ..ನೀರಿಲ್ಲ. ಸ್ವಚ್ಛವಿಲ್ಲದ, ವಾಸನೆ ಹೊಡೆಯುತ್ತಿರುವ ಶೌಚಗೃಹಗಳು, ಪೂರ್ತಿಯಾಗಿ ಮುಚ್ಚಿದ ಬೋಗಿಗಳು. ಇದು ಶ್ರಮಿಕ್​ ರೈಲಿನ ಅವ್ಯವಸ್ಥೆ. ನಾವೇ ನಮ್ಮ ತಲೆಯನ್ನು ನೇಣಿನ ಕುಣಿಕೆಗೆ ಹಾಕಿಕೊಳ್ಳುವಷ್ಟು ನಾಚಿಕೆಯ ವಿಷಯ ಇದು ಎಂದು ಕಪಿಲ್ ಸಿಬಲ್​ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಜಕೀಯ ಮುಖಂಡನ ಮಗನ ಮದುವೇಲಿ ನರ್ತಕಿಯಿಂದ ಭರ್ಜರಿ ಡ್ಯಾನ್ಸ್​; ಪೊಲೀಸರು ಮಾಡಿದ್ದೇನು?

    ಈ ಮಹಿಳೆ ತನ್ನ ಸಹೋದರಿ ಮತ್ತು ಸೋದರ ಮಾವನೊಂದಿಗೆ ರೈಲಿನಲ್ಲಿ ಸೂರತ್​ನಿಂದ ಬಂದಿದ್ದಾರೆ. ಬರುವಾಗಲೇ ಮೃತಪಟ್ಟಿದ್ದರು. ಅವರ ದೇಹವನ್ನು ಮುಜಾಫರ್​ಪುರದಲ್ಲಿ ಇಳಿಸಲಾಯಿತು ಎಂದು ರೈಲ್ವೆ ಪೊಲೀಸ್​ ಡಿವೈಎಸ್​ಪಿ ತಿಳಿಸಿದ್ದಾರೆ.

    ಈ ಮಹಿಳೆ ರೈಲಿನಲ್ಲಿ ಅಸ್ವಸ್ಥರಾಗಿದ್ದರು, ರೈಲ್ವೆ ಸ್ಟೇಶನ್​ನಲ್ಲಿ ಇಳಿಯುತ್ತಿದ್ದಂತೆ ಜೀವ ಹೋಗಿದೆ ಎಂದು ಕುಟುಂಬದವರು ನಿನ್ನೆ ಹೇಳಿದ್ದರು. ಆದರೆ ವಿಡಿಯೋ ನೋಡಿದ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ. ಇಂಥ ಸನ್ನಿವೇಶ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts