More

    ಪ್ಯಾರಾಲಿಂಪಿಕ್ಸ್‌ಗೆ ಸಡಗರದ ಚಾಲನೆ, ಭಾರತ ತಂಡವನ್ನು ಮುನ್ನಡೆಸಿದ ತೆಕ್ ಚಂದ್

    ಟೋಕಿಯೊ: ‘ಮುಂದುವರಿಯೋಣ: ನಮಗೆ ರೆಕ್ಕೆಗಳಿವೆ’ ಎಂಬ ಧ್ಯೇಯದಂತೆ ಟೋಕಿಯೊ ಪ್ಯಾರಾಲಿಂಪಿಕ್ಸ್ ಮಂಗಳವಾರ ವರ್ಣರಂಜಿತ ಆರಂಭ ಕಂಡಿದೆ. ಕರೊನಾ ಹಾವಳಿಯ ನಡುವೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಉತ್ಸಾಹದಲ್ಲಿರುವ ಜಪಾನ್, ಪ್ಯಾರಾಲಿಂಪಿಕ್ಸ್‌ನಲ್ಲೂ ಅಂಥದ್ದೇ ಯಶಸ್ಸು ಕಾಣುವ ತವಕದಲ್ಲಿದೆ. ಹಲವಾರು ಎಡರು-ತೊಡರುಗಳನ್ನು ಗೆದ್ದುಬಂದಿರುವ ಅಂಗವಿಕಲ ಕ್ರೀಡಾಪಟುಗಳು, ಬುಧವಾರದಿಂದ ನಡೆಯಲಿರುವ ಕ್ರೀಡಾಸ್ಪರ್ಧೆಗಳಲ್ಲಿ ಜಗತ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬಲು ಸಜ್ಜಾಗಿದ್ದಾರೆ.

    ಜಪಾನ್ ಚಕ್ರವರ್ತಿ ನರುಹಿಟೋ ಕೂಟದ ಆರಂಭವನ್ನು ಘೋಷಿಸಿದರು. ಅದಕ್ಕೆ ಮುನ್ನ ಪ್ಯಾರಾಲಿಂಪಿಕ್ ಮತ್ತು ಜಪಾನ್ ಧ್ವಜಾರೋಹಣ ನಡೆಸಲಾಯಿತು. ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಆಂಡ್ರೋ ಪರ್ಸನ್ಸ್ ‘ಸುರಕ್ಷಿತ’ ಗೇಮ್ಸ್ ಆಯೋಜನೆಯ ವಿಶ್ವಾಸ ವ್ಯಕ್ತಪಡಿಸಿದರು. ಜಪಾನ್‌ನ ಅಂಧ ಪಿಯಾನಿಸ್ಟ್ ನೊಬುಯುಕಿ ಸುಜಿ ಸಹಿತ ಹಲವಾರು ಅಂಗವಿಕಲ ಕಲಾವಿದರೂ ಸಮಾರಂಭದಲ್ಲಿ ಗಮನಸೆಳೆದರು. ಸಂಗೀತಗೋಷ್ಠಿಗಳು ಮತ್ತು ಸುಡುಮದ್ದುಗಳ ಪ್ರದರ್ಶನವೂ ಸಮಾರಂಭದ ಕಳೆ ಹೆಚ್ಚಿಸಿದವು.

    ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ಇಡೀ ಜಗತ್ತಿನ ಕ್ರಶ್ ಎಂದ ಬಾಲಿವುಡ್ ಬೆಡಗಿ!

    ಒಲಿಂಪಿಕ್ಸ್‌ನಂತೆ ಪ್ಯಾರಾಲಿಂಪಿಕ್ಸ್ ಕೂಡ ಒಂದು ವರ್ಷ ತಡವಾಗಿ ಆಯೋಜನೆಗೊಂಡಿದ್ದು, ಪ್ರೇಕ್ಷಕರಿಲ್ಲದೆ ಖಾಲಿಯಾದ ಒಲಿಂಪಿಕ್ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಿತು. 57 ವರ್ಷಗಳ ಬಳಿಕ ಟೋಕಿಯೊದಲ್ಲಿ ಪ್ಯಾರಾಲಿಂಪಿಕ್ಸ್ ನಡೆಯುತ್ತಿದ್ದು, 2 ಬಾರಿ ಕೂಟದ ಆತಿಥ್ಯ ವಹಿಸಿದ ಮೊದಲ ನಗರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ತೆಕ್ ಚಂದ್ ಭಾರತದ ಧ್ವಜಧಾರಿ

    ಉದ್ಘಾಟನಾ ಸಮಾರಂಭಕ್ಕೆ ಧ್ವಜಧಾರಿ ಕೊನೇಕ್ಷಣದಲ್ಲಿ ಬದಲಾವಣೆ ಕಂಡಿದ್ದು, ಶಾಟ್‌ಪುಟ್ ಪಟು ತೆಕ್ ಚಂದ್ ಭಾರತ ತಂಡವನ್ನು ಮುನ್ನಡೆಸಿದರು. ತ್ರಿವರ್ಣ ಧ್ವಜದೊಂದಿಗೆ ವೀಲ್‌ಚೇರ್‌ನಲ್ಲಿ ಸಾಗಿದ ತೆಕ್ ಚಂದ್ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದರು. ಅವರ ಹಿಂದೆ ಭಾರತ ತಂಡದ 8 ಅಧಿಕಾರಿಗಳು ಪಥಸಂಚಲನ ನಡೆಸಿದರು. ಭಾರತ 17ನೇ ತಂಡವಾಗಿ ಕ್ರೀಡಾಂಗಣ ಪ್ರವೇಶಿಸಿತು. ಕೆಲ ಕ್ರೀಡಾಪಟುಗಳು ಕ್ವಾರಂಟೈನ್‌ನಲ್ಲಿದ್ದರೆ, ಇನ್ನು ಕೆಲವರು ಕ್ರೀಡಾಸ್ಪರ್ಧೆಯತ್ತ ಗಮನಹರಿಸುವ ಸಲುವಾಗಿ ಸಮಾರಂಭದಿಂದ ದೂರ ಉಳಿದರು. ಕೂಟದಲ್ಲಿ ಭಾರತದ ಒಟ್ಟು 54 ಕ್ರೀಡಾಪಟುಗಳ ತಂಡ ಸ್ಪರ್ಧಿಸಲಿದ್ದು, ಶುಕ್ರವಾರ ಭಾರತದ ಪದಕ ಬೇಟೆ ಶುರುವಾಗಲಿದೆ.

    ಮರಿಯಪ್ಪನ್ ಕ್ವಾರಂಟೈನ್
    ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಬೇಕಾಗಿದ್ದ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಕೊನೇಕ್ಷಣದಲ್ಲಿ ಈ ಅವಕಾಶದಿಂದ ವಂಚಿತರಾದರು. ಟೋಕಿಯೊಗೆ ವಿಮಾನ ಪ್ರಯಾಣದ ವೇಳೆ ಕರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಕಾರಣ ರಿಯೋ ಪ್ಯಾರಾಲಿಂಪಿಕ್ಸ್ ಸ್ವರ್ಣ ವಿಜೇತ ಮರಿಯಪ್ಪನ್ ಇತರ ಐವರು ಭಾರತೀಯರೊಂದಿಗೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಡಿಸ್ಕಸ್ ಥ್ರೋ ಪಟು ವಿನೋದ್ ಕುಮಾರ್ ಕೂಡ ಕ್ವಾರಂಟೈನ್‌ಗೆ ಒಳಗಾಗಿರುವ ಕಾರಣ ಸಮಾರಂಭಕ್ಕೆ ಗೈರಾದರು. ಉದ್ಘಾಟನಾ ಸಮಾರಂಭ ಆರಂಭಕ್ಕೆ ಕೆಲವೇ ಗಂಟೆ ಮುನ್ನ ಪ್ಯಾರಾಲಿಂಪಿಕ್ ಕೋವಿಡ್ ಕಂಟ್ರೋಲ್ ರೂಂನಿಂದ ಈ ಮಾಹಿತಿ ಬಂದಿದೆ ಎಂದು ಭಾರತ ತಂಡದ ಚ್ೀ ಡಿ ಮಿಷನ್ ಗುರುಶರಣ್ ಸಿಂಗ್ ತಿಳಿಸಿದ್ದಾರೆ. ಆದರೆ ಮರಿಯಪ್ಪನ್ ಮತ್ತು ವಿನೋದ್ ತಮ್ಮ ಕ್ರೀಡಾಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಲಭ್ಯರಾಗುವ ನಿರೀಕ್ಷೆ ಇದೆ. ಕಳೆದ 6 ದಿನಗಳಿಂದ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಅವರಿಗೆ ಅಭ್ಯಾಸ ನಡೆಸಲು ಕೂಡ ಅನುಮತಿ ಇದೆ ಎಂದು ಗುರುಶರಣ್ ತಿಳಿಸಿದ್ದಾರೆ.

    ನ್ಯೂಜಿಲೆಂಡ್ ತಂಡ ಗೈರು
    ಕರೊನಾ ವೈರಸ್ ಭೀತಿಯಿಂದಾಗಿ ನ್ಯೂಜಿಲೆಂಡ್ ತಂಡ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಿಂದ ಹೊರಗುಳಿಯಿತು. ಟೋಕಿಯೊದಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದಾಗಿ ನ್ಯೂಜಿಲೆಂಡ್ ತಂಡ ಮಂಗಳವಾರ ಬೆಳಗ್ಗೆಯಷ್ಟೇ ಈ ನಿರ್ಧಾರವನ್ನು ಪ್ರಕಟಿಸಿತು. ಇದರಿಂದ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ 163 ತಂಡಗಳ ಪೈಕಿ 162 ತಂಡಗಳು ಸಮಾರಂಭದ ಪಥಸಂಚಲನದಲ್ಲಿ ಭಾಗವಹಿಸಿದವು. ನ್ಯೂಜಿಲೆಂಡ್‌ನಿಂದ ಒಟ್ಟು 32 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ. 6 ಕ್ರೀಡಾಪಟುಗಳ ಸಹಿತ ಪ್ಯಾರಾಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಇದುವರೆಗೆ 161 ಕರೊನಾ ಪ್ರಕರಣಗಳು ದಾಖಲಾಗಿವೆ.

    ದಾಖಲೆ ಮಹಿಳಾ ಸ್ಪರ್ಧಿಗಳು
    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆಯ 1,853 ಮಹಿಳಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಇದು 2016ರ ರಿಯೋ ಪ್ಯಾರಾಲಿಂಪಿಕ್ಸ್‌ಗಿಂತ ಶೇ.10.9 ಅಧಿಕವಾಗಿದೆ. 2,550 ಪುರುಷ ಸ್ಪರ್ಧಿಗಳ ಸಹಿತ ಒಟ್ಟು 4,403 ಕ್ರೀಡಾಪಟುಗಳ ಸ್ಪರ್ಧೆಯೂ ದಾಖಲೆಯಾಗಿದೆ. ರಿಯೋದಲ್ಲಿ 4,328 ಕ್ರೀಡಾಪಟುಗಳು ಸ್ಪರ್ಧಿಸಿದ್ದು ಹಿಂದಿನ ದಾಖಲೆ. ಆತಿಥೇಯ ಜಪಾನ್‌ನಿಂದ ಗರಿಷ್ಠ 254 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಚೀನಾ (248) 2ನೇ ದೊಡ್ಡ ತಂಡವನ್ನು ಕಣಕ್ಕಿಳಿಸುತ್ತಿದೆ.

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts