More

    ಮನಸ್ಸು, ದೇಹದ ಆರೋಗ್ಯಕ್ಕೆ ಕಲ್ಲಂಗಡಿ

    ಲ್ಲಂಗಡಿ ತುಂಬ ರುಚಿಕರವಾದ ಹಾಗೂ ದೇಹ, ಮನಸ್ಸನ್ನು ತಕ್ಷಣಕ್ಕೆ ಹಗುರವಾಗಿಸುವ ಹಣ್ಣು. ಒಂದು ಕಪ್ ಹಣ್ಣು ಕೇವಲ 46 ಕ್ಯಾಲೋರಿಗಳನ್ನು ಹೊಂದಿದ್ದು; ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಯನ್ನು ಒಳಗೊಂಡಿದೆ. ಅಲ್ಲದೆ ಅನೇಕ ಸಸ್ಯಜನ್ಯ ಸಂಯುಕ್ತಗಳನ್ನು ಹೊಂದಿದೆ. ಪೊಟ್ಯಾಷಿಯಂ, ಮೆಗ್ನೇಷಿಯಂ, ವಿಟಮಿನ್ ಬಿ ಸಂಯುಕ್ತಗಳು ಇದರಲ್ಲಿ ಅಡಕವಾಗಿವೆ. ಇದರಲ್ಲಿ ನೀರಿನಂಶ ಅಧಿಕ ಪ್ರಮಾಣದಲ್ಲಿದ್ದು (ಶೇ. 92), ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಇದರ ಸೇವನೆಯು ಬಹಳ ಹಿತವಾದುದು. ಕ್ಯಾನ್ಸರ್ ಕೋಶಗಳಿಂದ ರಕ್ಷಿಸುವಂತಹ ಲೋಕೋಪೀನ್ ಪೋಷಕಾಂಶಗಳು ಇದರಲ್ಲಿವೆ.

    ಹೃದಯದ ಆರೋಗ್ಯಕ್ಕೆ ಕಲ್ಲಂಗಡಿ ಸೇವನೆಯು ಬಹಳ ಒಳ್ಳೆಯದು. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲೂ ಸಹ ಕಲ್ಲಂಗಡಿ ಅನುಕೂಲಕರವಾಗಿದೆ. ಬೊಜ್ಜು, ಮಧುಮೇಹ, ಹೃದಯರೋಗ ಇತ್ಯಾದಿ ಯಾವುದೇ ರೀತಿಯ ಸಮಸ್ಯೆ ಇರುವವರೂ ಇದನ್ನು ಯಾವುದೇ ಅಂಜಿಕೆ ಇಲ್ಲದೆ ಸೇವಿಸಬಹುದು. ಉರಿಯೂತವನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ. 2015ರ ಅಧ್ಯಯನವೊಂದು ಕಲ್ಲಂಗಡಿಯ ಸೇವನೆಯು ಇನ್​ಪ್ಲಮೇಶನ್​ನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಹಕರಿಸುತ್ತದೆಂದು ಪ್ರತಿಪಾದಿಸುತ್ತದೆ. ಇದು ಒತ್ತಡವನ್ನು ನಿವಾರಿಸಬಲ್ಲದು. ಮರೆಗುಳಿತನದ ಸಮಸ್ಯೆಯಿರುವವರ ಆರೋಗ್ಯಕ್ಕೆ ಕಲ್ಲಂಗಡಿ ಸೇವನೆಯು ಪೂರಕ. ಮುಪ್ಪು ಸಂಬಂಧಿತ ಅನೇಕ ಸಮಸ್ಯೆಗಳನ್ನು ಹತೋಟಿಯಲ್ಲಿಡಲು, ಅಂಗಾಂಗಗಳ ಬಿಗಿತವನ್ನು ಕಡಿಮೆ ಮಾಡಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು, ಉದರವನ್ನು ಹಗುರಗೊಳಿಸಲು, ಚರ್ಮದ ಆರೋಗ್ಯಕ್ಕೆ, ಕೂದಲಿನ ಸ್ವಾಸ್ಥ್ಯ್ಕೆ ಕಲ್ಲಂಗಡಿ ಅನುಕೂಲಕಾರಿ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ನಾರಿನಾಂಶವು ಬಹಳ ಪೂರಕವಾಗಿದೆ.

    ಕಲ್ಲಂಗಡಿ ಹಣ್ಣು ಎಂದ ಕೂಡಲೇ ಸಾಮಾನ್ಯವಾಗಿ ನಾವು ಹಣ್ಣಿನ ಕೆಂಪು ಭಾಗವನ್ನು ಮಾತ್ರ ತಿನ್ನುತ್ತೇವೆ. ಬೀಜಗಳನ್ನೆಲ್ಲ ಎಸೆದುಬಿಡುತ್ತೇವೆ. ಆದರೆ ಕಲ್ಲಂಗಡಿ ಬೀಜವು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಅನೇಕ ಆರೋಗ್ಯಸಹಕಾರಿ ಗುಣಗಳನ್ನು ಹೊಂದಿರುವ, ಅನೇಕಾನೇಕ ರೋಗಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯ ಮಾಡಬಹುದಾದ ಅತ್ಯುತ್ತಮ ಪದಾರ್ಥ. ಹಾಗೆಯೇ ಕಲ್ಲಂಗಡಿ ಬೀಜವನ್ನು ಹಸಿಯಾಗಿ, ನೆನೆಸಿ, ಬೇಯಿಸಿ, ಹುರಿದು ತಿನ್ನಬಹುದು. ಯಾವುದೇ ರೂಪದಲ್ಲಿಯೂ ಇದು ಹಾನಿಕಾರಕವಲ್ಲ. ಪ್ರೋಟೀನ್, ಎಸೆನ್ಶಿಯಲ್ ಫ್ಯಾಟಿ ಅಸಿಡ್, ವಿಟಮಿನ್​ಗಳು, ಮಿನರಲ್​ಗಳನ್ನು ಕಲ್ಲಂಗಡಿ ಬೀಜ ಹೊಂದಿದೆ. ಕೂದಲಿನ ಆರೋಗ್ಯಕ್ಕೆ, ಕೂದಲ ಬೆಳವಣಿಗೆ ಹಾಗೂ ಉದುರುವಿಕೆಯ ತಡೆಗೆ ಈ ಬೀಜ ಹೆಚ್ಚು ಪರಿಣಾಮಕಾರಿ. ಹೊಳೆಯುವ ಚರ್ಮಕ್ಕೆ ಇದು ಕಾರಣವಾಗಬಲ್ಲದು. ಆಹಾರಪದಾರ್ಥಗಳಲ್ಲಿ ಇದರ ಬಳಕೆಯು ಪದಾರ್ಥದ ರುಚಿ ಹೆಚ್ಚಿಸುತ್ತದೆ. ಕಲ್ಲಂಗಡಿ ಬೀಜವು ಶಕ್ತಿವರ್ಧನೆಗೆ ಸಹಕಾರಿ. ಉತ್ತಮ ಕ್ಯಾಲೋರಿ ನೀಡುತ್ತದೆ. ಲೈಂಗಿಕ ನಿರಾಸಕ್ತಿ ತೊಂದರೆಯನ್ನು ಕಡಿಮೆ ಮಾಡುವಲ್ಲಿಯೂ ಒಳ್ಳೆಯದು. ದೇಹದಲ್ಲಿ ಸಕ್ಕರೆ ಅಂಶವನ್ನು ನಿರ್ವಹಿಸಿ ಮಧುಮೇಹವನ್ನು ಹತೋಟಿ ಮಾಡಲು ಸಹಕಾರಿ. ಹೃದಯದ ಆರೋಗ್ಯಕ್ಕೆ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ, ಹೈಪರ್ ಟೆನ್ಷನ್ ಹತೋಟಿಗೆ, ಮೆಟಬಾಲಿಕ್ ಕಾರ್ಯ ನಿರ್ವಹಣೆಗೆ, ನರಮಂಡಲದ ಆರೋಗ್ಯಕ್ಕೆ ಕಲ್ಲಂಗಡಿ ಬೀಜ ಸಹಾಯ ಮಾಡುತ್ತದೆ. ಆದ್ದರಿಂದ ಕಲ್ಲಂಗಡಿಯನ್ನು ಬೀಜಸಹಿತ ಸೇವಿಸಿ ಮನಸ್ಸು, ದೇಹವನ್ನು ಹಗುರವಾಗಿಸಿಕೊಳ್ಳೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts