More

    ಜಲಪಾತಕ್ಕೆ ಮತ್ತೆ ಜೀವಕಳೆ

    ಮುರಗೋಡ: ಲಾಕ್‌ಡೌನ್ ಮುಕ್ತವಾಗಿದ್ದರಿಂದ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ಸವದತ್ತಿ ತಾಲೂಕಿನ ಪುಣ್ಯಕ್ಷೇತ್ರ ಸೊಗಲದಲ್ಲಿ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ನೀರಿಲ್ಲದೆ ಬಣಗುಡುತ್ತಿದ್ದ ಜಲಪಾತವೀಗ ಮೈದುಂಬಿ ಬೀಳುತ್ತಿದ್ದು, ತನ್ನ ವೈಭವ ತೋರಿಸುತ್ತ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

    4-5 ತಿಂಗಳಿಂದ ಭಕ್ತರ ಪ್ರವೇಶವಿಲ್ಲದೇ ಬಣಗುಡುತ್ತಿದ್ದ ಕ್ಷೇತ್ರವೀಗ ಭಕ್ತರ ಆಗಮನದಿಂದ ಕಳೆಗಟ್ಟಿದೆ. ನಿತ್ಯ ಸೋಮೇಶ್ವರನಿಗೆ ಪ್ರಾಥ: ಕಾಲದಲ್ಲಿ ಪೂಜೆ, ಅಭಿಷೇಕ, ನೈವೇದ್ಯ ನಡೆಯುತ್ತಿದೆ. ಆಗಮಿಸಿದ ಭಕ್ತರು ಜಲಧಾರೆಯಲ್ಲಿ ಸ್ನಾನ ಮಾಡಿ ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಸಮೀಪದ ಅಂಗಡಿಗಳಲ್ಲಿ ಮತ್ತೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

    ಆಕರ್ಷಣೀಯ ಸ್ಥಳಗಳು: ಕ್ಷೇತ್ರದ ನಿಸರ್ಗ ರಮಣೀಯ ನೀರು ಬೀಳುವ ದಬೆ, ಕೂಗು ಬಸವಣ್ಣ, ಸೋಮೇಶ್ವರ, ಶಿವ-ಪಾರ್ವತಿ, ಬ್ರಮರಾಂಬಿಕೆ, ಮಲ್ಲಯ್ಯ, ವೀರಭದ್ರೇಶ್ವರ ದೇವಸ್ಥಾನ, ಕಾಳಿಕಾದೇವಿ ಗುಡಿ, ಸೂಜಿಗಲ್ಲು, ಜಿಂಕೆಯ ವನ, ಆಕಳ ಗವಿ, ಶಿವನಮೂರ್ತಿ, ಮಾಧವಾನಂದ ಪ್ರಭುಜಿ ಆಶ್ರಮ, ಗೊರಲಿಕೊಪ್ಪ ಅಜ್ಜನ ಆಶ್ರಮ ಭಕ್ತರ ಆಕರ್ಷಣೀಯ ಸ್ಥಳಗಳಾಗಿವೆ. ಸುಕ್ಷೇತ್ರ ಸೊಗಲಕ್ಕೆ ಬರುವ ಪ್ರವಾಸಿಗರಿಗೆ ಶ್ರೀ ಸೋಮೇಶ್ವರ ಟ್ರಸ್ಟ್ ಕಮಿಟಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಕರೊನಾ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು ಪ್ರತಿಯೊಂದು ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಜತೆಗೆ 3 ಕಿ.ಮೀ. ಅಂತರದಲ್ಲಿರುವ ಚಿಕ್ಕ ಸೋಮೇಶ್ವರನ ಕ್ಷೇತ್ರದಲ್ಲಿ ಜಲಪಾತ ಭೋರ್ಗರೆಯುತ್ತಿದೆ.

    ಅಲ್ಲಿನ ಜಲಪಾತದ ದರ್ಶನ ಭಾಗ್ಯವನ್ನೂ ಭಕ್ತರು ಪಡೆಯುತ್ತಿದ್ದಾರೆ. ಸುಂದರ ಬೆಟ್ಟ ಗುಡ್ಡಗಳ ನಡುವೆ ಇರುವ ಈ ದೇವಸ್ಥಾನ, ಸುಕ್ಷೇತ್ರದ ತನ್ನ ಐಸಿರಿ ಹೆಚ್ಚಿಸಿದ್ದು ಭಕ್ತರ ಕಾಮದೇನುವಾಗಿ ಪರಿಣಮಿಸಿದೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಿ, ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕು ಎನ್ನುವುವುದು ಈ ಭಾಗದ ಜನರ ಆಶಯ.

    ಗಮನಸೆಳೆಯುತ್ತಿರುವ ಕೇಂದ್ರಗಳು

    ಸುಕ್ಷೇತ್ರದ ಸುತ್ತಲೂ ಕಾರಿಮನಿ ಮಲ್ಲಯ್ಯ, ಮುರಗೋಡ ಮಹಾಂತ ದುರದುಂಡೇಶ್ವರಮಠ, ಗವಿಸಿದ್ದೇಶ್ವರ ಗವಿ, ಕೆಂಗೇರಿ ಚಿದಂಬರೇಶ್ವರಮಠ, ಸುಕ್ಷೇತ್ರ ಇಂಚಲ ಶಿವಯೋಗಿಶ್ವರಮಠ ಅತಿ ಸಮೀಪವಿದ್ದು, ಭಕ್ತರನ್ನು ಸೆಳೆಯುತ್ತಿವೆ.

    ಬೆಳಗಾವಿ ಜಿಲ್ಲೆಯಲ್ಲೆ ಸವದತ್ತಿಯು ಸುಂದರ ಗುಡ್ಡಗಳನ್ನು ಹೊಂದಿದ ತಾಲೂಕು. ಮಳೆಗಾಲದಲ್ಲಿ ತಾಲೂಕಿನ ಬೆಟ್ಟ-ಗುಡ್ಡಗಳನ್ನು ನೋಡುವುದೇ ಒಂದು ಸೋಜಿಗ. ಮಳೆಗಾಲದ ಸಂದರ್ಭದಲ್ಲಿ ಹಸಿರು ತೋರಣ ಕಟ್ಟಿದಂತೆ ಭಾಸವಾಗುತ್ತದೆ. ಸೊಗಲ ಕ್ಷೇತ್ರವು ಎರಡು ಬೆಟ್ಟಗಳ ಮಧ್ಯ ಇರುವುದರಿಂದ ಭಕ್ತರಿಗೆ ಪ್ರಿಯವಾಗಿದೆ.
    | ಈರಣ್ಣ ಸಿದ್ದನಗೌಡರ, ಚಂದ್ರು ಕಾಳ್ಳಣ್ಣವರಪ್ರವಾಸಿಗರು

    | ಮಹಾಂತೇಶ ಬಾಳಿಕಾಯಿ ಮುರಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts