More

    ಘಟಪ್ರಭಾ ಕಾಲುವೆಗಳಿಗೆ 20 ದಿನ ನೀರು ಹರಿಸಿ

    ಮುಧೋಳ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಹತ್ತು ದಿನ ನೀರು ಹರಿಸಿದರೆ ಕೇವಲ ಬೆಳಗಾವಿ ಜಿಲ್ಲೆಯವರಿಗೆ ಪ್ರಯೋಜನವಾಗಲಿದೆ. ಬಾಗಲಕೋಟೆ ಜನರು ನೀರಿನಿಂದ ವಂಚಿತರಾಗುವುದು ಖಚಿತ. ಬಾಗಲಕೋಟೆ ಜಿಲ್ಲೆಯ ಕೊನೇ ರೈತರಿಗೂ ನೀರು ತಲುಪಿಸಲು 20 ದಿನ ಹರಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು.

    ಬಿಜೆಪಿ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬರದಿಂದ ರೈತರು ತೊಂದರೆಯಲ್ಲಿದ್ದಾರೆ. ಬೆಳೆ ಸಂರಕ್ಷಣೆ, ಕುಡಿಯುವ ನೀರಿಗಾಗಿ ಹತ್ತು ದಿನ ಹರಿಸುವುದು ಮೂವತ್ತು ವರ್ಷಗಳಿಂದ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು 20 ದಿನ ನೀರು ಬಿಡಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ನೀರು ಹರಿಸಿ ಜಿಲ್ಲೆಯ ರೈತರಿಗೆ ನೆರವಾಗಬೇಕು ಎಂದರು.

    ಮುಧೋಳದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಸರ್ಕಾರ ಬಂದು ಏಳು ತಿಂಗಳು ಗತಿಸಿದರೂ ಒಂದೇ ಒಂದು ರೂ. ಅನುದಾನ, ಕಾಮಗಾರಿ, ಯೋಜನೆಗಳನ್ನು ತಂದಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಗಳನ್ನು ಇನ್ನೂಮ್ಮೆ ಶಂಕು ಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಭಾವಿ ಮಂತ್ರಿಗಳಾಗಿರುವ ಅವರು ಸಾವಿರ ಕೋಟಿ ರೂ. ಅನುದಾನವನ್ನು ಮುಧೋಳ ಕ್ಷೇತ್ರಕ್ಕೆ ತಂದು ಯೋಜನೆ ಆರಂಭಿಸಲಿ. ಮೂರು ಬಾರಿ ಶಾಸಕರು, ನಾಲ್ಕು ಬಾರಿ ಸಚಿವರಾಗಿ, ಒಂದು ಸಲ ವಿಧಾನ ಪರಿಷತ್ ಸದಸ್ಯರಾಗಿ ಮುಧೋಳ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಸವಾಲೆಸೆದರು.
    ಬರ ನಿರ್ವಹಣೆಗೆ ಪ್ರತಿ ತಾಲೂಕಿಗೆ 25 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು. ಮೇವು ಬ್ಯಾಂಕ್, ಗೋಶಾಲೆ ಆರಂಭಿಸಬೇಕು. ಜನರು ಗುಳೇ ಹೋಗುವುದನ್ನು ತಪ್ಪಿಸಬೇಕಿದೆ. ಬರ ನಿರ್ವಹಣೆಗೆ ಕೇಂದ್ರ ತಂಡ ಬಂದಾಗ ಲವತ್ತಾಗಿ ಬೆಳೆದು ನಿಂತ ಬೆಳೆ ತೋರಿಸಿ ಬೇಜವಾಬ್ದಾರಿ ಮಾಡಿದ್ದಾರೆ. ಎನ್‌ಡಿಆರ್‌ಎ್ ಹಾಗೂ ಎಸ್‌ಡಿಆರ್‌ಎ್ ಅನ್ವಯ ಅಗತ್ಯ ದಾಖಲೆ ನೀಡದೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಗೂಬೆ ಕುಡಿಸುವುದು ಸರಿಯಲ್ಲ. ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಬರವನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ರಾಜ್ಯದ 17.29 ಲಕ್ಷ ರೈತರಿಗೆ ಬಡ್ಡಿ ರಹಿತವಾಗಿ 13,408 ಕೋಟಿ ಸಾಲ ರೂ. ನೀಡಲಾಗಿದೆ. ಇದರಲ್ಲಿ ಕನಿಷ್ಠ ಅರ್ಧದಷ್ಟು ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

    32 ವರ್ಷದ ಹಿಂದಿನ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದರಲ್ಲದೆ, ವಿಧಾನಸಭೆ ಚುನಾವಣೆಗಿಂತ ಈಗ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುವುದನ್ನು ಮನಗಂಡಿರುವ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ. ಇಂಡಿಯಾ ಒಕ್ಕೂಟ ಚುನಾವಣೆ ಮುನ್ನವೇ ಛಿದ್ರಗೊಳ್ಳಲಿದೆ ಎಂದರು.

    ಮುಖಂಡ ಕೆ.ಆರ್. ಮಾಚಪ್ಪನವರ, ಡಾ. ಸುಮೇದಾ ಮಾನೆ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹಣಮಂತ ತುಳಸಿಗೇರಿ, ಕಲ್ಲಪ್ಪಣ್ಣ ಸಬರದ, ಸದಪ್ಪ ತೇಲಿ, ಸಂತೋಷ ಘೋರ್ಪಡೆ, ಸೋನಪ್ಪಿ ಕುಲಕರ್ಣಿ, ಮಾರುತಿ ಆನಿ, ಬಂಡು ಘಾಟಗೆ, ಬಸವರಾಜ ಮಳಲಿ, ಕುಮಾರ ಹುಲಕುಂದ, ಸದಾ ಜಾಧವ, ಪ್ರದೀಪ ನಿಂಬಾಳಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts