More

    ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನೀರು ಪೂರೈಕೆ

    ಗದಗ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಳದ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

    ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ನರಗುಂದ ವಿಧಾನಸಭೆ ಮತ ಕ್ಷೇತ್ರದ 21 ಗ್ರಾಮಗಳ 3800 ಮನೆಗಳಿಗೆ ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಮನೆಗೆ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

    ಲಿಂಗದಾಳ ಗ್ರಾಮದ 705 ಮನೆಗಳಿಗೆ ಮೂರು ತಿಂಗಳೊಳಗಾಗಿ ಪ್ರತಿ ಮನೆಗಳಿಗೆ ಪೈಪ್​ಲೈನ್, ಮೀಟರ್ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.

    ಜಿಪಂ. ಸದಸ್ಯೆ ಲಲಿತಾ ಹುಣಸೀಕಟ್ಟಿ, ತಾಪಂ ಸದಸ್ಯೆ ಈರಮ್ಮ ಜಾನುಪಂತರ, ವಸಂತ ಮೇಟಿ, ನಿಂಗಪ್ಪ ದುಂದೂರ, ಪ್ರದೀಪಕುಮಾರ ನವಲಗುಂದ, ಮಹೇಶ ಮುಸ್ಕಿನಬಾವಿ, ಪ್ರೇಮಾ ಮಟ್ಟಿ ಮತ್ತಿತರರು ಇದ್ದರು.

    ವಿವಿಧ ಕಾಮಗಾರಿಗೆ ಚಾಲನೆ: ಎಚ್.ಎಸ್. ವೆಂಕಟಾಪೂರ ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದ ಎಚ್.ಎಸ್.ವೆಂಕಟಾಪೂರ ಮತ್ತು ಮದಗಾನೂರ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ, ಲಕ್ಕುಂಡಿಯಲ್ಲಿ 1 ಕೋಟಿ ರೂ. ವೆಚ್ಚದ ಕೋಟುಮಚಗಿ, ಚುರ್ಚಿಹಾಳ ರಸ್ತೆ ಸುಧಾರಣೆ ಕಾಮಗಾರಿ ಹಾಗೂ 4 ಕೋಟಿ ರೂ.ವೆಚ್ಚದ ಲಕ್ಕುಂಡಿಯಿಂದ ಕಣಗಿನಹಾಳ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭಲ್ಲಿ ಲಕ್ಕುಂಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಿದರು.

    ಕರೊನಾ ಮುಕ್ತವಾಗಿ ಹೊರಹೊಮ್ಮುತ್ತಿದೆ ಜಿಲ್ಲೆ

    ನರಗುಂದ: ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮದಿಂದಾಗಿ ಜಿಲ್ಲೆ ಕರೊನಾ ಮುಕ್ತವಾಗಿ ಹೊರಹೊಮ್ಮುತ್ತಿದೆ. ಲಸಿಕೆ ಸಿಗುವವರೆಗೂ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಪುರಸಭೆ ಆವರಣದಲ್ಲಿ ಗಿರಿಜನ ವಿಶೇಷ ಘಟಕ ಯೋಜನೆಯಡಿ 30 ಲಕ್ಷ ರೂ. ವೆಚ್ಚದ ಶಾಖಾ ಗ್ರಂಥಾಲಯದ ಕಟ್ಟಡ ನಿರ್ವಣ, ನರಗುಂದ ಪುರಸಭೆಯ ವಿವಿಧ ಯೋಜನೆಗಳಡಿ 5.55 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ, 1.85 ಕೋಟಿ ರೂ. ವೆಚ್ಚದಲ್ಲಿ ನರಗುಂದ-ಕಣಕೀಕೊಪ್ಪ ರಸ್ತೆಯಲ್ಲಿರುವ ಹಿರೇಹಳ್ಳದ ಸೇತುವೆ ನಿರ್ಮಾಣ ಹಾಗೂ ವಾರ್ತಾ ಇಲಾಖೆಯ ಕರೊನಾ ವಿಶೇಷ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಹೀಗಾಗಿ ಓದುಗರ ಬೇಡಿಕೆಯಂತೆ ನೂತನ ಗ್ರಂಥಾಲಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ಅಧಿಕಾರಿ ವಸಂತ ಮಡ್ಲೂರ ಮಾತನಾಡಿ, ಕೋವಿಡ್ ಜಾಗೃತಿ ವಾಹನವು ಜಿಲ್ಲೆಯ 7 ತಾಲೂಕುಗಳ ಆಯ್ದ 180 ಗ್ರಾಮಗಳಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

    ತಹಸೀಲ್ದಾರ್ ಎ.ಎಚ್. ಮಹೇಂದ್ರ, ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಮುಖ್ಯ ಗ್ರಂಥಾಲಯ ಅಧಿಕಾರಿ ವೆಂಕಟೇಶ್ವರಿ ಜಿ.ಎಸ್., ಗ್ರಂಥಾಲಯ ಸಹಾಯಕ ಮನೋಜ್ ಗಡ್ಡಿ, ಎಂ.ಎಸ್. ಪಾಟೀಲ, ವಿ.ಆರ್. ರಾಯನಗೌಡ್ರ, ಶಿವಯ್ಯ ಭಿಕ್ಷಾವತಿಮಠ, ರಾಚನಗೌಡ ಪಾಟೀಲ, ಬಿ.ಎಚ್. ಶಲವಡಿ, ಗುರಪ್ಪ ಆದೆಪ್ಪನವರ, ಮಾರುತಿ ಅರ್ಭಣದ, ಹಸನಸಾಬ ತಹಸೀಲ್ದಾರ, ಎಚ್.ಎನ್. ಗೋಟುರ, ಹನಮಂತ ಹವಾಲ್ದಾರ, ಬಸವರಾಜ ಪಾಟೀಲ, ರವಿ ಚಕ್ರಸಾಲಿ, ಸುರೇಶ ಹುಡೇದಮನಿ, ಅಪ್ಪನಗೌಡ ನಾಯ್ಕರ, ಸಿದ್ದಪ್ಪ ಯಲಿಗಾರ, ವಿಠ್ಠಲ ಹವಾಲ್ದಾರ, ಅಜ್ಜಪ್ಪ ಹುಡೇದ, ನಾಗರಾಜ ನೆಗಳೂರ, ಮಂಜು ಮೆಣಸಗಿ, ರಾಜು ಈಟಿ, ಅಣ್ಣಪ್ಪ ದೊಡಮನಿ, ಪ್ರೀತಿ ಗವಿಮಠ, ಫಕೀರಗೌಡ ಬಾಳನಗೌಡ್ರ, ಜಿ.ಕೆ. ಹುಡೇದಮನಿ, ಸಂಗನಗೌಡ ಬಾಳನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts